ಉರಿಗೌಡ, ನಂಜೇಗೌಡ ದ್ವಾರ ವಿವಾದ-ಡಿಜಿಪಿಯವರನ್ನು ಬಂಧಿಸಬೇಕು: ಡಿ.ಕೆ. ಶಿವಕುಮಾರ್ ಆಗ್ರಹ
ಬೆಂಗಳೂರು; ‘ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಇತಿಹಾಸ ತಿರುಚಲು ಉರಿಗೌಡ, ನಂಜೇಗೌಡ ದ್ವಾರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿರುವ ಡಿಜಿಪಿ ಪ್ರವೀಣ್ ಸೂದ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.
ನಗರರದ ಪೂರ್ಣಿಮಾ ಪ್ಯಾಲೇಸ್ ನಲ್ಲಿ ಮಂಗಳವಾರ ತಿಗಳರ ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ನಾನು ಡಿಜೆಪಿ ಪ್ರವೀಣ್ ಸೂದ್ ಒಳ್ಳೆಯವರು, ನಿಷ್ಪಕ್ಷಪಾತ ವ್ಯಕ್ತಿ ಅಂದುಕೊಂಡಿದ್ದೆ. ಆದರೆ ಬಿಜೆಪಿಯ ಬಾಲಬಡುಕರಾಗಿ ಕೆಲಸ ಮಾಡುತ್ತಿದ್ದಾರೆ. ಆ ದ್ವಾರ ನಿರ್ಮಾಣಕ್ಕೆ ಇವರು ಹೇಗೆ ಅನುಮತಿ ಕೊಟ್ಟರು? ಎಂದು ಪ್ರಶ್ನಿಸಿದರು.
‘ಬಿಜೆಪಿಯವರು ಮೊದಲಿಂದಲೂ ಇತಿಹಾಸ ತಿರುಚಲು ಪ್ರಯತ್ನಿಸುತ್ತಿದ್ದಾರೆ. ಕುವೆಂಪು, ಬಸವಣ್ಣ, ನಾರಾಯಣ ಗುರು, ಅಂಬೇಡ್ಕರ್, ಶ್ರೀ ಬಾಲಗಂಗಾಧರ ಸ್ವಾಮಿಜಿ, ಶ್ರೀ ಶಿವಕುಮಾರ ಸ್ವಾಮೀಜಿ – ಹೀಗೆ ಯಾರನ್ನೂ ಬಿಡದೇ ಇತಿಹಾಸ ತಿರುಚುತ್ತಿದ್ದಾರೆ. ಈಗ ಉರಿಗೌಡ, ನಂಜೇಗೌಡರ ಹೆಸರು ತೆಗೆದುಕೊಂಡಿದ್ದಾರೆ. ಇವರ ಇತಿಹಾಸ ಎಲ್ಲಿದೆ? ಇವರ ಹೆಸರು ಸೃಷ್ಟಿಸಿ ಇಡೀ ಒಕ್ಕಲಿಗ ಸಮುದಾಯಕ್ಕೆ ಮೋಸ ಮಾಡಲು ಬಿಜೆಪಿಯವರು ಷಡ್ಯಂತ್ರ ರೂಪಿಸಿದ್ದಾರೆ. ಒಕ್ಕಲಿಗರಿಗೆ ಅವಮಾನ ಮಾಡುತ್ತಿದ್ದಾರೆ. ಶ್ರೀರಂಗಪಟ್ಟಣ, ಶೃಂಗೇರಿಯಲ್ಲಿ ಅನೇಕ ಇತಿಹಾಸಗಳಿವೆ. ಆ ಬಗ್ಗೆ ನಾನು ಈಗ ಚರ್ಚೆ ಮಾಡುವುದಿಲ್ಲ. ಮುಂದೆ ಹೇಳುತ್ತೇನೆ ಎಂದರು.
ಬಿಜೆಪಿಯವರು ಜಾತಿ, ಜಾತಿ ಮಧ್ಯೆ ವಿಷಬೀಜ ಬಿತ್ತನೆ ಮಾಡಿ ಚುನಾವಣೆ ಸಮೀಪಿಸುವಾಗ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಇವರ ಹೆಸರಲ್ಲಿ ದ್ವಾರ ಮಾಡುವಂತೆ ಯಾರು ಕೇಳಿದ್ದರು? ಇವರು ಇದ್ದರು ಎಂಬುದಕ್ಕೆ ಎಲ್ಲಾದರೂ ದಾಖಲೆಗಳಿವೆಯೇ? ಈ ಡಿಜಿಪಿ ನಾಲಾಯಕ್. ಅವರು ಸರ್ಕಾರದ ಮಾತು ಕೇಳಿಕೊಂಡು ಇದಕ್ಕೆ ಅವಕಾಶ ನೀಡಿದ್ದಾರೆ. ಕೂಡಲೇ ಡಿಜಿಪಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು. ಚುನಾವಣಾ ಆಯೋಗ ಕೂಡ ಅವರನ್ನು ಬೇರೆಡೆಗೆ ವರ್ಗಾಯಿಸಬೇಕು. ಅವರು ಆ ಹುದ್ದೆಗೆ ಬಂದು ಮೂರು ವರ್ಷವಾಯ್ತು. ಇನ್ನೂ ಯಾಕೆ ಅಲ್ಲಿಟ್ಟಿದ್ದಾರೆ. ಕಾಂಗ್ರೆಸ್ ಹೋರಾಟ ಮಾಡಿದರೆ ನಮ್ಮ ಮೇಲೆ 25 ಕೇಸ್ ಹಾಕುತ್ತಾರೆ. ಈ ರೀತಿ ಅನಧಿಕೃತ ದ್ವಾರ ಹಾಕಿದವರ ಮೇಲೆ ಪ್ರಕರಣ ದಾಖಲಿಸಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿ, ಇವರು ಸೇರಿದಂತೆ ಯಾರೆಲ್ಲಾ ಸರ್ಕಾರದ ಕೈಗೊಂಬೆಯಾಗಿ ಯಾರೆಲ್ಲಾ ಕೆಲಸ ಮಾಡಿದ್ದಾರೋ ಅವರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ’ ಎಂದರು.