BengaluruPolitics

ಯಾವ ಕ್ಷೇತ್ರ ಸೇಫ್..?;‌ ಗೊಂದಲಕ್ಕೆ ಬಿದ್ದರಾ ಸಿದ್ದರಾಮಯ್ಯ..?

ಬೆಂಗಳೂರು; ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಿಂಗಳ ಹಿಂದೆ ನಾನು ಕೋಲಾರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಿಸಿದ್ದರು. ಆದ್ರೆ ಇದೀಗ ಕೋಲಾರದಿಂದ ಹಿಂದೆ ಸರಿಯಲು ಯತ್ನಿಸುತ್ತಿದ್ದಾರೆ. ಯಾಕಂದ್ರೆ ಕೋಲಾರ ಸಿದ್ದರಾಮಯ್ಯ ಅವರಿಗೆ ಸೇಫಲ್ಲ ಅನ್ನೋ ಮಾಹಿತಿ ಇದೆ. ಇದನ್ನೇ ಹೈಕಮಾಂಡ್‌ ಕೂಡಾ ಸಿದ್ದರಾಮಯ್ಯ ಅವರಿಗೆ ಹೇಳಿದೆ. ಹೀಗಿರುವಾಗಲೇ ಕೋಲಾರದಿಂದ ನೂರಾರು ನಾಯಕರು ಗುಂಪು ಕಟ್ಟಿಕೊಂಡು ಬಂದು ನಾವಿದ್ದೇವೆ ನೀವು ಕೋಲಾರದಲ್ಲೇ ನಿಲ್ಲಿ ಎಂದು ಆತ್ಮಸ್ಥೈರ್ಯ ತುಂಬೋ ಕೆಲಸ ಮಾಡಿದ್ದಾರೆ. ಆದ್ರೂ ಕೂಡಾ ಸಿದ್ದರಾಮಯ್ಯ ಮಗ ಹಾಗೂ ಮನೆಯವರನ್ನು ಕೇಳಿ ಹೇಳುತ್ತೇನೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ಸಿದ್ದರಾಮಯ್ಯ ಅವರಿಗೆ ಯಾಕಿಷ್ಟು ಭೀತಿ ಎಂಬ ಅನುಮಾನ ಮೂಡುತ್ತಿದೆ.

ಸಿದ್ದರಾಮಯ್ಯ ಅವರು ದಾವಣಗೆರೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಾಗ ಹತ್ತು ಲಕ್ಷ ಜನರು ಸೇರಿದ್ದರು. ಈಗಲೂ ಸಿದ್ದರಾಮಯ್ಯ ಭಾಷಣಕ್ಕೆ ನಿಂತರು ಅಂದರೆ ದೊಡ್ಡ ಮಟ್ಟದಲ್ಲಿ ಘೋಷಣೆಗಳು ಮೊಳಗುತ್ತವೆ. ಹೀಗಿದ್ದರೂ ಐದು ವರ್ಷದ ರಾಜ್ಯ ಆಳಿದ ನಾಯಕನಿಗೆ ಎಲ್ಲಿ ನಿಲ್ಲಬೇಕು ಅನ್ನೋದೇ ತೋಚುತ್ತಿಲ್ಲ. ಇದೆಲ್ಲಾ ನೋಡ್ತಿದ್ರೆ, 2018ರಲ್ಲಿ ಚಾಮುಂಡೇಶ್ವರಿ ಸೋಲು ಅವರನ್ನು ಇನ್ನೂ ಕಾಡುತ್ತಲೇ ಇದೆ ಅನಿಸುತ್ತೆ. 2018ರಲ್ಲಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ 35 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸಿದ್ದರಾಮಯ್ಯ ಸೋಲನುಭವಿಸಿದ್ದರು. ಅತ್ತ ಬದಾಮಿಯಲ್ಲಿ ರಾಮುಲು ವಿರುದ್ಧ ಕೇವಲ ಒಂದೂವರೆ ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದರು. ಈ ಬಾರಿ ಅವರು ಬದಾಮಿ ದೂರ ಆಗುತ್ತೆ ಅನ್ನೋ ನೆಪ ಹೇಳಿ ಅಲ್ಲಿಂದ ನಿಲ್ಲೋದಿಲ್ಲ ಅಂತ ಹೇಳಿಬಿಟ್ಟಿದ್ದಾರೆ. ಬೇರೆ ಎಲ್ಲಿಂದ ನಿಲ್ಲುತ್ತಾರೆ ಎಂಬ ಪ್ರಶ್ನೆ ಬಂದಾಗ ಚಾಮರಾಜಪೇಟೆ, ವರುಣಾ, ಕೋಲಾರ ಸೇರಿದಂತೆ ಹತ್ತು ಹಲವು ಕ್ಷೇತ್ರಗಳ ಹೆಸರು ಕೇಳಿಬಂದಿದ್ದವು. ಎಲ್ಲಾ ಕ್ಷೇತ್ರಗಳ ಪರಿಸ್ಥಿತಿಯನ್ನು ಲೆಕ್ಕ ಹಾಕಿ ನೋಡಿದರೆ ಸಿದ್ದರಾಮಯ್ಯ ಅವರಿಗೆ ವರುಣಾ ಸೇಫ್‌. ಆದ್ರೆ ಅಲ್ಲಿ ಸ್ವಂತ ಮಗನೇ ಶಾಸಕ. ಮಗನ ಸ್ಥಾನವನ್ನು ಕಿತ್ತುಕೊಳ್ಳಬೇಕಾಗುತ್ತದೆ. ಹೀಗಾಗಿ ಸಿದ್ದರಾಮಯ್ಯ ಅವರು ಬೇರೆ ಯಾವುದಾದರೂ ಸೇಫ್‌ ಜಾಗ ಹುಡುಕುತ್ತಿದ್ದರು. ಕೊನೆಗೆ ರಮೇಶ್‌ ಕುಮಾರ್‌, ಶ್ರೀನಿವಾಸ ಗೌಡ ಸೇರಿದಂತೆ ಹಲವರು ಸಿದ್ದರಾಮಯ್ಯ ಅವರಿಗೆ ಬಲ ತುಂಬುತ್ತೇವೆ ಎಂದು ಹೇಳಿದ್ದರು. ಹೀಗಾಗಿ ಕೋಲಾರದಲ್ಲಿ ಯಾಕೆ ಸ್ಪರ್ಧೆ ಮಾಡಬಾರದು ಎಂದು ಸಿದ್ದರಾಮಯ್ಯ ಯೋಚನೆ ಮಾಡಿದ್ದರು.

ಕೋಲಾರದಲ್ಲಿ ಸ್ಪರ್ಧಿಸಬೇಕು ಎಂದು ಸಿದ್ದರಾಮಯ್ಯ ತೀರ್ಮಾನಿಸೋದಕ್ಕೆ ಹಲವು ಕಾರಣಗಳಿವೆ. ಕೋಲಾರದಲ್ಲಿ ಅಲ್ಪಸಂಖ್ಯಾತರು ಹಾಗೂ ಎಸ್‌ಸಿ, ಎಸ್‌ಟಿ ಸಮುದಾಯದವರು ಹೆಚ್ಚಿದ್ದಾರೆ. ಜೊತೆಗೆ ಕುರುಬ ಸಮುದಾಯದ ಮತಗಳೂ ಸಾಕಷ್ಟಿವೆ. ಇವೆಲ್ಲಾ ಕಾಂಗ್ರೆಸ್‌ಗೇ ಬರುತ್ತವೆ ಎಂಬ ನಂಬಿಕೆ ಸಿದ್ದರಾಮಯ್ಯ ಅವರದ್ದು. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಿಸಿಬಿಟ್ಟಿದ್ದರು. ಕೋಲಾರಕ್ಕಾಗಿಯೇ ಅರ್ಜಿಯನ್ನೂ ಹಾಕಿಕೊಂಡಿದ್ದರು. ಇನ್ನು ಕೋಲಾರದಲ್ಲಿ ವಾರ್‌ ರೂಮ್‌ ಕೂಡಾ ಶುರುವಾಗಿತ್ತು. ಹೀಗಿರುವಾಗಲೇ ಕಾಂಗ್ರೆಸ್‌ ಹೈಕಮಾಂಡ್‌ ಸರ್ವೇಯಲ್ಲಿ ಸಿದ್ದರಾಮಯ್ಯ ಅವರಿಗೆ ಕೋಲಾರ ಸೇಫಲ್ಲ ಅನ್ನೋದು ಗೊತ್ತಾಗಿದೆ. ಹೀಗಾಗಿ, ಕಾಂಗ್ರೆಸ್‌ ಹೈಕಮಾಂಡ್‌ ಅದ್ರಲ್ಲೂ ರಾಹುಲ್‌ ಗಾಂಧಿಯವರು, ವರುಣಾದಲ್ಲೇ ಸ್ಪರ್ಧೆ ಮಾಡಿ ಎಂದು ಸೂಚನೆ ಕೊಟ್ಟಿದ್ದಾರಂತೆ. ಈ ಮಾತು ಕೇಳುತ್ತಲೇ ಸಿದ್ದರಾಮಯ್ಯ ಕೋಲಾರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧೆಗೆ ಚಿಂತನೆ ನಡೆಸಿದ್ದಾರೆ. ಇನ್ನು ಹೈಕಮಾಂಡ್‌ ಏನನ್ನೂ ಹೇಳಿಲ್ಲ. ಸಿದ್ದರಾಮಯ್ಯ ಅವರಿಗೇ ಕೋಲಾರ ಸೇಫಲ್ಲ ಅನ್ನೋದು ಅರ್ಥವಾಗಿದೆ. ಹೀಗಾಗಿಯೇ, ಅವರು ಹೈಕಮಾಂಡ್‌ ಮೇಲೆ ಬೆರಳು ತೋರಿಸಿ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳೂ ಕೇಳಿಬರುತ್ತಿವೆ. ಏನೇ ಆದರೂ ಸಿದ್ದರಾಮಯ್ಯ ಅವರು ಸದ್ಯ ಕೋಲಾರದಿಂದ ಸ್ಪರ್ಧೆ ಮಾಡೋದಕ್ಕೆ ಹಿಂದೆ ಮುಂದೆ ನೋಡುತ್ತಿರೋದಂತೂ ಸತ್ಯ.

ಹಾಗೆ ನೋಡಿದರೆ ಕೋಲಾರ ಕಾಂಗ್ರೆಸ್‌ಗೆ ಕಷ್ಟದ ಕ್ಷೇತ್ರವೇನೂ ಅಲ್ಲ. ಜಾತಿ ಆಧಾರದ ಮೇಲೆ ನೋಡಿದರೂ ಸಿದ್ದರಾಮಯ್ಯಗೆ ಅನುಕೂಲ ವಾತಾವರಣವಿದೆ. ಆದ್ರೆ, ಕಾಂಗ್ರೆಸ್‌ನಲ್ಲಿರುವವರೇ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತಾರೆಂಬ ಗುಮಾನಿ ಎದ್ದಿದೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಒಂದನೇಯದು, 2013ರ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ಜಿ.ಪರಮೇಶ್ವರ್‌ ಅವರನ್ನು ಸೋಲಿಸಿದ್ದು, ಎರಡನೇಯದು ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕೆ.ಎಚ್‌.ಮುನಿಯಪ್ಪ ಅವರನ್ನು ಸೋಲಿಸಿದ್ದು. 2013ರಲ್ಲಿ ಜಿ.ಪರಮೇಶ್ವರ್‌ ಸೋಲಲು ಸಿದ್ದರಾಮಯ್ಯ ಕಾರಣ ಎಂಬ ಆರೋಪವಿದೆ. ಪರಮೇಶ್ವರ್‌ ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರು ಗೆದ್ದಿದ್ದರೆ ಸಿಎಂ ಸ್ಥಾನಕ್ಕೆ ಅವರೂ ಪೈಪೋಟಿ ನಡೆಸುತ್ತಿದ್ದರು. ಈ ಕಾರಣಕ್ಕೆ ಕುತಂತ್ರದಿಂದ ಪರಮೇಶ್ವರ್‌ರನ್ನು ಸೋಲಿಸಲಾಯ್ತು ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಜಿದ್ದು ಇಟ್ಟುಕೊಂಡಿರುವ ಜಿ.ಪರಮೇಶ್ವರ್‌, ಕೋಲಾರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ದಲಿತರನ್ನು ಸಂಪರ್ಕಿಸಿ ಸಿದ್ದರಾಮುಯ್ಯರನ್ನು ಸೋಲಿಸಲು ತೆರೆಮರೆಯ ಕಸರತ್ತು ಮಾಡಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ಇನ್ನೊಂದೆಡೆ ಕೋಲಾರ ಲೋಕಸಭಾ ಕ್ಷೇತ್ರದಿಂದ ಕೆ.ಎಚ್‌.ಮುನಿಯಪ್ಪ ಅವರು ಏಳು ಬಾರಿ ಗೆದ್ದಿದ್ದರು. ಎಂಟನೇ ಬಾರಿಯೂ ಗೆಲ್ಲುವುದಕ್ಕೆ ಅವಕಾಶವಿತ್ತು. ಆದ್ರೆ, ರಮೇಶ್‌ ಕುಮಾರ್‌ ಅವರು ಇನ್‌ ಡೈರೆಕ್ಟ್‌ ಆಗಿ ಬಿಜೆಪಿಗೆ ಸಪೋರ್ಟ್‌ ಮಾಡಿದರು ಎಂಬ ಆರೋಪವಿದೆ. ಇನ್ನು ಕೊತ್ತೂರು ಮಂಜು, ಚಿಂತಾಮಣಿ ಸುಧಾಕರ್‌ ಸೇರಿ ಹಲವರು ನೇರವಾಗಿ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಹೀಗಾಗಿ ಕೋಲಾರದಲ್ಲಿ ಕೆ.ಎಚ್‌.ಮುನಿಯಪ್ಪ ಸೋಲಬೇಕಾಯ್ತು. ಈ ಕಾರಣದಿಂದಾಗಿ ಕೋಲಾರದ ಕಾಂಗ್ರೆಸ್‌ನಲ್ಲಿ ಎರಡು ಗುಂಪುಗಳಿವೆ. ರಮೇಶ್‌ ಕುಮಾರ್‌ ಗುಂಪಿನ ಪರವಾಗಿ ಸಿದ್ದರಾಮಯ್ಯ ನಿಲ್ಲುತ್ತಾರೆ. ಹೀಗಾಗಿ ಕೆ.ಎಚ್‌.ಮುನಿಯಪ್ಪ ಅವರು ಸಿದ್ದರಾಮಯ್ಯ ಅವರನ್ನು ಸೋಲಿಸಬಹುದು ಎಂಬ ಭೀತಿ ಇದೆ. ಯಾಕಂದ್ರೆ ಕೆ.ಎಚ್‌.ಮುನಿಯಪ್ಪ ಈ ಗುಂಪುಗಾರಿಕೆ ಕಾರಣದಿಂದ ಕಾಂಗ್ರೆಸ್‌ನಲ್ಲಿ ಮೂಲೆಗುಂಪಾಗಿದ್ದರು. ಬಿಜೆಪಿ ಸೇರೋದಕ್ಕೂ ಸಿದ್ಧತೆ ನಡೆಸಿದ್ದರು. ಕೊನೇ ಕ್ಷಣದಲ್ಲಿ ಅವರು ನಿರ್ಧಾರದಿಂದ ವಾಪಸ್‌ ಬಂದಿದ್ದಾರೆ. ಕೆ.ಎಚ್‌.ಮುನಿಯಪ್ಪ ಅವರು ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತೇನೆ ಎಂದು ಹೇಳುತ್ತಿದ್ದಾರಾದರೂ, ಕೊನೇ ಕ್ಷಣದಲ್ಲಿ ಏನಾಗುತ್ತೋ ಗೊತ್ತಿಲ್ಲ.

ಇನ್ನು ಕೋಲಾರದಲ್ಲಿ ಜೆಡಿಎಸ್‌ ಅಭ್ಯರ್ಥಿ ಸಿಎಂಆರ್‌ ಶ್ರೀನಾಥ್‌ ಕ್ಷೇತ್ರದಲ್ಲಿ ಸುತ್ತಾಡಿದ್ದಾರೆ. ಜನರ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಹಣವೂ ಖರ್ಚು ಮಾಡುತ್ತಿದ್ದಾರೆ. ಜೆಡಿಎಸ್‌ಗೆ ಇಲ್ಲಿ ನೆಲೆಯೂ ಇದೆ. ಹೀಗಾಗಿ ಸಿಎಂಆರ್‌ ಶ್ರೀನಾಥ್‌ ಪರವಾದಂತಹ ಒಲವು ಕೋಲಾರದಲ್ಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕಾಂಗ್ರೆಸ್‌ನಲ್ಲಿನ ಕೆಲ ಅಸಮಾಧಾನಿತರು ಕೊನೇಕ್ಷಣದಲ್ಲಿ ಸಿಎಂಆರ್‌ ಶ್ರೀನಾಥ್‌ರನ್ನು ಬೆಂಬಲಿಸಿಬಿಟ್ಟರೆ ಸಿದ್ದರಾಮಯ್ಯ ಸೋತುಬಿಡುತ್ತಾರೆ. ಇದನ್ನು ಅರಿತೇ ಸಿದ್ದರಾಮಯ್ಯ ಅವರು ಕೋಲಾರದಿಂದ ಹಿಂದೆ ಸರಿಯುತ್ತಿದ್ದಾರೆ ಎನ್ನಲಾಗಿದೆ.

ಚಾಮುಂಡೇಶ್ವರಿ ಸೋಲು ಸಿದ್ದರಾಮಯ್ಯರನ್ನು ಸಾಕಷ್ಟು ಯೋಚನೆಗೀಡುಮಾಡಿದೆ. ಈ ಸಲವೂ ಹಾಗೆಯೇ ಆದರೆ ಕಷ್ಟ ಎಂಬ ನಿರ್ಧಾರಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ. ಅದೂ ಕೂಡಾ ಅವರು ಈಗಾಗಲೇ ಇದು ನನಗೆ ಕೊನೇ ಚುನಾವಣೆ ಎಂದು ಹೇಳಿದ್ದಾರೆ. ಜೊತೆಗೆ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಅತ್ಯಂತ ಸೇಫ್‌ ಇರೋ ಕ್ಷೇತ್ರದ ಕಡೆ ಅವರು ಕಣ್ಣು ನೆಟ್ಟಿದ್ದಾರೆ. ಹಾಗೆ ನೋಡಿದರೆ ಅವರಿಗೆ ಸೇಫ್‌ ಅಂತ ಇರೋದು ವರುಣಾ ಕ್ಷೇತ್ರ ಮಾತ್ರ. ಹೀಗಾಗಿ ಅವರು, ಇದು ನನ್ನ ಕೊನೇ ಚುನಾವಣೆ, ತವರಲ್ಲೇ ನಿಲ್ಲುತ್ತೇನೆ ಎಂದು ಹೇಳಿ ವರುಣಾಗೆ ಹೋಗುವ ಎಲ್ಲಾ ಸೂಚನೆ ಕಂಡುಬರುತ್ತಿದೆ. ಏನೇ ಆದರೂ ಹೆಚ್ಚು ಜನಪ್ರಿಯತೆ ಹೊಂದಿರುವ ಹಾಗೂ ಐದು ವರ್ಷ ರಾಜ್ಯ ಆಳಿರುವ ನಾಯಕನಿಗೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಗೊಂದಲ ಶುರುವಾಗಿರುವುದು ವಿಪರ್ಯಾಸವೇ ಸರಿ.

Share Post