Bengaluru

ಕ್ರಷರ್‌ ಮಾಲೀಕರಿಂದ ಲಂಚ ಪಡೆದ ಪ್ರಕರಣ; ರವಿ ಡಿ.ಚನ್ನಣ್ಣನವರ್‌ ಪಾತ್ರ ಇಲ್ಲ; ಸಿಎಂ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು: ಕ್ರಷರ್‌ ಮಾಲೀಕರಿಂದ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್‌ ಅಧಿಕಾರಿ ರವಿ ಡಿ.ಚೆನ್ನಣ್ಣನವರ್‌ ಅವರ ಪಾತ್ರ ಏನೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸದನದಲ್ಲಿ ಬಿಜೆಪಿಯ ಎನ್. ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಕರಣದಲ್ಲಿ ಅತ್ತಿಬೆಲೆಯ ಆರ್. ಮಂಜುನಾಥ್‌ ಎಂಬವರು ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಲಾಗಿದ್ದು, ರವಿ ಚೆನ್ನಣ್ಣನವರ್‌ ಪಾತ್ರ ಇಲ್ಲ ಎಂಬುದು ತಿಳಿದುಬಂದಿದೆ ಎಂದು ಹೇಳಿದ್ದರು.

ಈ ಪ್ರಕರಣವನ್ನು ಐಜಿಪಿ ತನಿಖೆ ನಡೆಸಿದ್ದಾರೆ. ವಿಜಯಪುರ ಸರ್ಕಲ್ ಇನ್‌ಸ್ಪೆಕ್ಟರ್‌ ಟಿ.ಶ್ರೀನಿವಾಸ್, ಎಎಸ್‌ಐಗಳಾದ ಎನ್. ಶುಭಾ, ಕೆ.ಜಿ. ಅನಿತ ಎಂಬವರ ವಿರುದ್ಧ ದೂರು ಕೇಳಿಬಂದಿತ್ತು. ಈ ಅಧಿಕಾರಿಗಳ ದೂರವಾಣಿ ಕರೆ ಮಾಹಿತಿ ಪಡೆಯಲಾಗಿದ್ದು, ಆ ಮೂಲಕ ತನಿಖೆ ಕೈಗೊಳ್ಳಲಾಗಿದೆ. ಕ್ರಷರ್ ಮಾಲೀಕರಿಗೆ ಸಹಾಯ ಮಾಡುವ ಮಾತುಕತೆ ನಡೆಸಿ, 5 ಲಕ್ಷ ರೂಪಾಯಿ ಪಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕಾರಣಕ್ಕೆ ಟಿ.ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ. ಎಎಸ್‌ಐಗಳ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸಲಾಗಿದೆ. ವಿಚಾರಣೆಯಲ್ಲಿ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಪಾತ್ರ ಕಂಡುಬಂದಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Share Post