BengaluruEconomyPolitics

ಫ್ರೀ ಕೊಟ್ಟರೆ ವಿನಾಕಾರಣ ವಿದ್ಯುತ್‌ ಬಳಸುವ ಸಾಧ್ಯತೆ; ಸರ್ಕಾರಕ್ಕೆ ತಲೆನೋವು

ಬೆಂಗಳೂರು; ರಾಜ್ಯ ಸರ್ಕಾರ ಪ್ರತಿ ಮನೆಗೂ ತಿಂಗಳಿಗೆ 200 ಯೂನಿಟ್‌ ವಿದ್ಯುತ್‌ ಉಚಿತವಾಗಿ ಕೊಡಲು ಮುಂದಾಗಿದೆ. ಆದ್ರೆ, ರಾಜ್ಯದ ಬಹುತೇಕ ಮನೆಗಳಲ್ಲಿ ಅಷ್ಟು ಪ್ರಮಾಣದ ವಿದ್ಯುತ್‌ ಬಳಕೆಯೇ ಆಗುತ್ತಿಲ್ಲ. ರಾಜ್ಯದಲ್ಲಿ ಗೃಹ ಬಳಕೆ ವಿದ್ಯುತ್‌ ಬಳಕೆದಾರರು ಸರಾಸರಿ ಕೇವಲ 53 ಯೂನಿಟ್‌ ವಿದ್ಯುತ್‌ನ್ನು ತಿಂಗಳಿಗೆ ಬಳಸುತ್ತಿದ್ದಾರೆ. ಈಗೇನಾದರೂ 200 ಯೂನಿಟ್‌ ವಿದ್ಯುತ್‌ ಫ್ರೀ ಎಂದು ಹೇಳಿಬಿಟ್ಟರೆ, ಉಚಿತವಾಗಿ ಸಿಗುತ್ತೆ ಎಂದು ವಿದ್ಯುತ್‌ ಬಳಕೆ ಜಾಸ್ತಿ ಮಾಡುತ್ತಾರೆ. ಆಗ ಎಲ್ಲದಕ್ಕೂ ಸಮಸ್ಯೆ ಶುರುವಾಗುತ್ತದೆ ಎಂಬ ಅಭಿಪ್ರಾಯವನ್ನು ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ.

ಬಹುತೇಕ ಮನೆಗಳಲ್ಲಿ ವಿದ್ಯುತ್‌ ಬಿಲ್‌ ಬರುತ್ತೆ ಎಂಬ ಕಾರಣಕ್ಕೆ ಕಡಿಮೆ ವಿದ್ಯುತ್‌ ಬಳಸುತ್ತಾರೆ. ಅಗತ್ಯವಿದ್ದರೆ ಮಾತ್ರ ವಿದ್ಯುತ್‌ ಬಳಕೆ ಮಾಡುತ್ತಾರೆ. ವಿದ್ಯುತ್‌ ಜಾಸ್ತಿ ಬರುತ್ತೆ ಅನ್ನೋ ಕಾರಣಕ್ಕೆ ಕೆಲವರು ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಹೆಚ್ಚು ಬಳಸೋದಿಲ್ಲ. ಆದ್ರೆ 200 ಯೂನಿಟ್‌ವರೆಗೂ ಫ್ರೀ ಎಂದು ಹೇಳಿದರೆ, ವಿದ್ಯುತ್‌ ದುರ್ಬಳಕೆಯಾಗುವ ಅಪಾಯ ಹೆಚ್ಚಿದೆ.

ಎಲ್‌ಪಿಜಿ ಸಿಲಿಂಡರ್‌ ರಿಫಿಲಿಂಗ್‌ಗೆ 1100 ರೂಪಾಯಿ ಇದೆ. ಹೀಗಾಗಿ ಜನರಿಗೆ ಹೊರೆಯಾಗಿದೆ. ವಿದ್ಯುತ್‌ ಏನಾದರೂ ಫ್ರೀ ಕೊಟ್ಟರೆ, ಸಾಮಾನ್ಯ ಜನರು ವಿದ್ಯುತ್‌ ಚಾಲಿತ ಸ್ಟೌಗಳು, ಎಲೆಕ್ಟ್ರಿಕ್‌ ಕುಕ್ಕರ್‌ಗಳು ಬಳಸುವುದಕ್ಕೆ ಮುಂದಾಗಬಹುದು. ಈಗಾಗಲೇ ವಿದ್ಯುತ್‌ ಸ್ಟೌಗಳು, ಎಲೆಕ್ಟ್ರಿಕ್‌ ಕುಕ್ಕರ್‌ಗಳು ಕಡಿಮೆ ಬೆಲೆಗೆ ಸಿಗುತ್ತಿವೆ. ಮನೆಯೊಡತಿಗೆ 2 ಸಾವಿರ ರೂಪಾಯಿ ತಿಂಗಳಿಗೆ ಸಿಗೋದ್ರಿಂದ ಆ ಹಣದಲ್ಲಿ ಅವರು ಇಂತಹ ಎಲೆಕ್ಟ್ರಿಕ್‌ ಉಪಕರಣಗಳನ್ನು ಖರೀದಿ ಮಾಡಬಹುದು. ಇದರಿಂದ ವಿದ್ಯುತ್‌ ಬಳಕೆ ಹೆಚ್ಚುತ್ತದೆ. ಆ ವಿದ್ಯುತ್‌ ನಿಗಮಗಳಿಗೆ ಹೆಚ್ಚುವರಿ ವಿದ್ಯುತ್‌ ಪೂರೈಕೆ ಮಾಡೋದು ಕಷ್ಟವಾಗುತ್ತದೆ.

ಹೀಗಾಗಿ ಯೋಜನೆ ಜಾರಿ ಮಾಡುವ ಮೊದಲು 200 ಯೂನಿಟ್ ಬಳಕೆ ವಿಚಾರಕ್ಕೆ ಅರ್ಜಿ ಆಹ್ವಾನ ಹಾಗೂ ಬಿಲ್ ಕಟ್ಟುವ ಮಾದರಿ ಜಾರಿಗೆ ತರಬಹುದು ಎಂದು ಅಧಿಕಾರಿಗಳು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ. ಈಗಾಗಲೇ ಇರುವ ದೆಹಲಿ ಮಾಡಲ್ ನಂತೆ ಕಾರ್ಯನಿರ್ವಹಿಸಬಹುದು ಎಂದೂ ಸಲಹೆ ನೀಡಲಾಗಿದೆ. ವಿದ್ಯುತ್ ಸಬ್ಸಿಡಿ ಬೇಡ ಎಂದು ಸ್ವಯಂ ಪ್ರೇರಿತವಾಗಿ ಕೈ ಬಿಡುವವರನ್ನ ಗುರುತಿಸುವಂತೆಯೂ ಸೂಚಿಸಲಾಗಿದೆ.

 

Share Post