ಕಾವೇರಿ ನದಿ ನೀರು ಹಂಚಿಕೆ ವಿವಾದ; ಜನತಾ ರೈತ ಸಂಘದಿಂದ ಪ್ರತಿಭಟನೆ
ಬೆಂಗಳೂರು: ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ನಿರಂತರ ಅನ್ಯಾಯದ ವಿರುದ್ದ ಜನತಾ ರೈತ ಸಂಘದ ಕಾರ್ಯಕರ್ತರು ಕೆಆರ್ ಪುರದ ಬಿಬಿಎಂಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಭಿತ್ತಿಪತ್ರಗಳನ್ನು ಹಿಡಿದು ರಾಜ್ಯ ಸರ್ಕಾರ ಹಾಗು ಕೇಂದ್ರ ಸರ್ಕಾರದ ವಿರುದ್ದ ಜನತಾ ರೈತ ಸಂಘದ ಕಾರ್ಯಕರ್ತರು ಘೋಷಣೆ ಕೂಗಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.
ಈ ವೇಳೆ ಮಾತನಾಡಿದ ಜನತಾ ರೈತ ಸಂಘದ ಕಾರ್ಯಾಧ್ಯಕ್ಷ ಅರ್.ಈರೇಗೌಡ, ಕರ್ನಾಟಕದ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗು ಕೇಂದ್ರ ಸರ್ಕಾರ ನಿರಂತರವಾಗಿ ದ್ರೋಹ ಬಗೆಯುತ್ತಿವೆ. ರಾಜ್ಯದ ರೈತರ ಹಿತಾಸಕ್ತಿಯನ್ನು ರಾಜ್ಯ ಸರ್ಕಾರ ಬಲಿ ಕೊಟ್ಟಿದೆ. ಬಿಜೆಪಿಯ 25ಸಂಸದರು ನಿಷ್ಪ್ರಯೋಜಕರಾಗಿದ್ದಾರೆ. ಕೇಂದ್ರದ ಮೇಲೆ ಒತ್ತಡ ತಂದು ಮೇಕೆ ದಾಟು ಯೋಜನೆಗೆ ಅಗತ್ಯ ಅನುಮತಿಯನ್ನು ಪಡೆಯಲು ಇಚ್ಚಾಶಕ್ತಿ ತೋರುತ್ತಿಲ್ಲ. ನೀರಿನ ಭವಣೆ ಇರುವ ಈ ಸಂದರ್ಭದಲ್ಲಿ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು. ಮಂಡ್ಯ, ಮೈಸೂರು, ಬೆಂಗಳೂರು ಭಾಗಕ್ಕೆ ನೀರೊದಗಿಸುವ ಮೂಲಕ ಕಾವೇರಿ ರೈತರ ಜೀವನಾಡಿಯಾಗಿದೆ. ಆದರೆ, ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆ ಇದ್ದರೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ಸುಪ್ರೀಂ ಕೋರ್ಟ್ ಕೂಡ ನೀರು ಹರಿಸಲು ಹೇಳಿರುವುದು ಸಮಂಜಸವಲ್ಲ ಎಂದು ಆಗ್ರಹಿಸಿದರು.
ಜನತಾ ರೈತ ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಸುಬ್ಬು ಮಾತನಾಡಿ, ಸಂಕಷ್ಟದ ಪರಿಸ್ಥಿತಿಯಲ್ಲಿ ಕಾವೇರಿ ಸಮಸ್ಯೆಗೆ ಮೇಕೆದಾಟು ಯೋಜನೆಯೊಂದೇ ಪರಿಹಾರ, ಕೇಂದ್ರ ಸರ್ಕಾರ ರಾಜಕೀಯ ಮಾಡದೆ ಕೂಡಲೇ ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕು. ರಾಜ್ಯದ ಬಿಜೆಪಿ ನಾಯಕರು ಈ ಬಗ್ಗೆ ಕೇಂದ್ರಕ್ಕೆ ಒತ್ತಡ ತರಬೇಕು.ಇನ್ನು ರಾಜ್ಯ ಸರ್ಕಾರ ರೈತರು ಹಾಗು ಕನ್ನಡಿಗರ ಸ್ವಾಭಿಮಾನವನ್ನು ತಮಿಳುನಾಡಿಗೆ ಅಡವಿಡುವ ಕೆಲಸ ಮಾಡುತ್ತಿದೆ.
ಹಾರಂಗಿ, ಕಬಿನಿ, ಕೆಆರ್‌ಎಸ್, ಹೇಮಾವತಿ ಜಲಾಶಯಗಳು ಪೂರ್ತಿಯಾಗಿಲ್ಲ. ಬರಗಾಲದ ಛಾಯೆ ಆವರಿಸಿದ್ದು, ಜನ, ಜಾನುವಾರುಗಳು ಕುಡಿಯುವ ನೀರಿಗೆ ಹಾಹಾಕಾರ ಎದುರಿಸುಂತಾಗಿದೆ. ಈ ನಡುವೆ ರಾಜ್ಯ ಸರ್ಕಾರ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನಿತ್ಯ 5,000 ಕ್ಯೂಸೆಕ್ ನೀರು ಹರಿಸಲು ಮುಂದಾಗಿರುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಜನತಾ ರೈತ ಸಂಘದ ಮುಖಂಡರಾದ ಸತೀಶ್ ಗೌಡ, ಕೃಪಾಕರರೆಡ್ಡಿ, ಮಹೇಶ್ ಸಿಂಹ, ರಾಧಾ ಚಂದ್ರಶೇಖರ್, ಉಷಾ ವಿಜಯ್ ಕುಮಾರ್, ಜಯಂತಿ, ವಿಜಯ್, ಮೋಹನ್, ಶಿವಶಂಕರ್ ಗೌಡ, ಎಂಎನ್ ಮೂರ್ತಿ, ವೀರೇಶ್ ಹಾಗು ಇನ್ನಿತರರು ಉಪಸ್ಥಿತರಿದ್ದರು.