NationalPolitics

ಇಡಿ ವಿಚಾರಣೆಗೆ ಹಾಜರಾಗಲ್ಲ ಎಂದ ಅರವಿಂದ ಕೇಜ್ರಿವಾಲ್‌; ಅವರು ಬರೆದ ಪತ್ರದಲ್ಲೇನಿದೆ..?

ನವದೆಹಲಿ; ಮದ್ಯ ಹಗರಣ ಪ್ರಕರಣದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಜೊತೆಗೆ ತಮಗೆ ನೀಡಿದ್ದ ಸಮನ್ಸ್ ಹಿಂಪಡೆಯುವಂತೆ ಕೇಜ್ರಿವಾಲ್‌ ಅವರು ಇಡಿಗೆ ಪತ್ರ ಕೂಡಾ ಬರೆದಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿ ನೀಡಿರುವ ಅಕ್ರಮ ನೋಟಿಸ್‌ ಎಂದೂ ಅವರು ಹೇಳಿದ್ದಾರೆ.

ಬಿಜೆಪಿಯ ಪ್ರಚೋದನೆಯ ಮೇರೆಗೆ ಸಮನ್ಸ್ ಕಳುಹಿಸಲಾಗಿದೆ ಎಂದೂ ಕೇಜ್ರಿವಾಲ್‌ ಆರೋಪ ಮಾಡಿದ್ದಾರೆ. ತಕ್ಷಣವೇ ನೋಟಿಸ್ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ನಿಗದಿಯಂತೆ ದೆಹಲಿ ಸಿಎಂ  ಕೇಜ್ರಿವಾಲ್‌ ಇಂದು ಬೆಳಗ್ಗೆ 11 ಗಂಟೆಗೆ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕಾಗಿತ್ತು. ಆದ್ರೆ ಕೇಜ್ರಿವಾಲ್‌ ವಿಚಾರಣೆಗೆ ಬರದೇ ಇಡಿಗೆ ಪತ್ರ ಬರೆದಿದ್ದಾರೆ.

ಅವರಿಗೆ ಸಮನ್ಸ್ ನೀಡುವುದನ್ನು ವಿರೋಧಿಸುವ ಸಲುವಾಗಿ ಇಡಿ ಕಚೇರಿಯ ಬಳಿ ಎಎಪಿ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಇದನ್ನು ತಡೆಯಲು ಭಾರೀ ಭದ್ರತೆಯನ್ನು ಏರ್ಪಡಿಸಲಾಗಿತ್ತು. ತುಘಲಕ್ ರಸ್ತೆಯಲ್ಲಿರುವ ಇಡಿ ಕಚೇರಿಯ ಬಳಿ ಹೆಚ್ಚಿನ ಸಂಖ್ಯೆಯ ಪೊಲೀಸರು ಮತ್ತು ಅರೆ ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಹಲವಾರು ಸಾಲುಗಳಲ್ಲಿ ಬ್ಯಾರಿಕೇಡ್‌ಗಳನ್ನು ಇರಿಸಲಾಗಿದೆ.

ಅಲ್ಲದೆ, ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಮತ್ತು ಐಟಿಒ ಪ್ರದೇಶದಲ್ಲಿರುವ ಎಎಪಿ ಕಚೇರಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಇಂಡಿಯಾ ಗೇಟ್, ವಿಕಾಸ್ ಮಾರ್ಗ್ ಮತ್ತು ಐಟಿಒ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಮತ್ತೊಂದೆಡೆ, ಕೇಜ್ರಿವಾಲ್ ಗೌರವ ಸಲ್ಲಿಸಲು ತೆರಳುವ ಸಾಧ್ಯತೆಯಿದೆ ಎಂಬ ಮಾಹಿತಿಯಿಂದಾಗಿ ರಾಜ್‌ಘಾಟ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಮದ್ಯ ಹಗರಣ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದ್ದು ಗೊತ್ತೇ ಇದೆ. ಇದೇ ಪ್ರಕರಣದಲ್ಲಿ ಎಎಪಿ ನಾಯಕ ಹಾಗೂ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು.. ಹಲವು ಬಾರಿ ಜಾಮೀನು ಪಡೆಯಲು ಯತ್ನಿಸಿ ವಿಫಲರಾಗಿದ್ದರು. ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ದೆಹಲಿಯ ಹೊಸ ಮದ್ಯ ನೀತಿಯಲ್ಲಿ ರೂ.338 ಕೋಟಿ ಅಕ್ರಮ ನಡೆದಿದೆ ಎಂಬುದು ಇಡಿ ಪ್ರಮುಖ ವಾದವಾಗಿದೆ. ದೆಹಲಿ ಮದ್ಯ ನೀತಿ 2021-22 ರ ರಚನೆ ಮತ್ತು ಅನುಷ್ಠಾನದ ಸಮಯದಲ್ಲಿ ಆರೋಪಿಗಳು ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥರಾಗಿ ಸಂಪರ್ಕಿಸಿದ್ದಾರೆ ಎಂದು ಇಡಿ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ.

Share Post