ಬೆಂಗಳೂರಲ್ಲಿ ಸ್ಪೆಷಲ್ ದೋಸೆ ತಯಾರಿ ವಿಡಿಯೋ ವೈರಲ್; 15 ಮಿಲಿಯನ್ ವೀಕ್ಷಣೆ
ಬೆಂಗಳೂರು; ದೋಸೆಗಳು ಅತ್ಯಂತ ಜನಪ್ರಿಯ ಉಪಾಹಾರದಲ್ಲೊಂದು. ಬೀದಿ ಬದಿಯ ಸ್ಟಾಲ್‌ಗಳಿಂದ ಹಿಡಿದು ರೆಸ್ಟೋರೆಂಟ್‌ಗಳವರೆಗೂ, ಎಲ್ಲಾ ಕಡೆ ನಾನಾ ಬಗೆಯ ದೋಸೆಗಳು ಸಿಗುತ್ತವೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಆಹಾರ ಪ್ರಿಯರಿಗೆ ದೋಸೆ ಅಂದರೆ ಅಚ್ಚುಮೆಚ್ಚು. ನೂರಾರು ಬಗೆಯ ದೋಸೆಗಳಿವೆಯಾದರೂ, ಜನ ಹೆಚ್ಚು ಇಷ್ಟ ಪಡೋದು ಮಸಾಲೆ ದೋಸೆಯನ್ನು. ಕೆಲವು ರೆಸ್ಟೋರೆಂಟ್‌ಗಳಲ್ಲಿ ದೋಸೆ ತಯಾರಿಸುವುದನ್ನು ನೋಡೋದೇ ಒಂದು ಖುಷಿ. ಬೆಂಗಳೂರಿನಲ್ಲಿ ರೆಸ್ಟೋರೆಂಟ್ ಒಂದರಲ್ಲಿ ದೋಸೆ ತಯಾರಿಸುತ್ತಿರುವ ವಿಡಿಯೋವೊಂದರನ್ನು ವ್ಯಕ್ತಿಯೊಬ್ಬರು ಫೇಸ್‌ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಇದುವರೆಗೂ ಫೇಸ್‌ಬುಕ್‌ನಲ್ಲಿ 15 ಮಿಲಿಯನ್ ವೀಕ್ಷಣೆಗಳಾಗಿವೆ. ಒಂದೂಕಾಲು ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ಷೇರ್ ಮಾಡಿದ್ದಾರೆ.
ಒಂದು ದೊಡ್ಡ ತವಾ ಮೇಲೆ ಬಾಣಸಿದ ಪೈಪ್ ಮೂಲಕ ನೀರು ಚಿಮುಕಿಸುತ್ತಾನೆ. ನಂತರ ಪೊರಕೆಯನ್ನು ತೆಗೆದುಕೊಂಡು ಅದನ್ನು ಕ್ಲೀನ್ ಮಾಡುತ್ತಾರೆ. ನಂತರ ಸುಮಾರು 12 ದೋಸೆಗಳನ್ನು ಆ ತವಾದ ಮೇಲೆ ಹುಯ್ಯುತ್ತಾನೆ. ನಂತರ ಒಂದು ತುಪ್ಪದ ಪ್ಯಾಕೇಟ್ ತೆಗೆದುಕೊಂಡು ಅದರಲ್ಲಿ ಮಾಡಿದ್ದ ಸಣ್ಣ ರಂಧ್ರದ ಮೂಲಕ ಆ ತವಾ ಮೇಲಿದ್ದ ದೋಸೆಗಳ ಮೇಲೆ ಹುಯ್ಯುತ್ತಾನೆ. ಅನಂತರ ಅದಕ್ಕೆ ಒಂದಷ್ಟು ಮಸಾಲೆಗಳನ್ನು ಹಚ್ಚುತ್ತಾನೆ. ನಂತರ ಪಲ್ಯವನ್ನು ಹಾಕಿ ತವಾ ಮೇಲಿಂದ ತೆಗೆಯುತ್ತಾನೆ.
ತಟ್ಟೆಯಲ್ಲಿ ಬಾಳೆ ಎಲೆ ಹರಡಿ ಅದರ ಮೇಲೆ ದೋಸೆ ಇಟ್ಟು, ಚಟ್ನಿ, ಸಾಂಬಾರಿನ ಜೊತೆಗೆ ಗ್ರಾಹಕರಿಗೆ ನೀಡಲಾಗುತ್ತದೆ. ಅತ್ಯಂತ ಸ್ವಚ್ಛವಾಗಿ, ಬಹುಬೇಗ ದೋಸೆಗಳನ್ನು ತಯಾರಿಸಿಕೊಡುವ ಆ ಬಾಣಸಿಗ ಎಲ್ಲರನ್ನೂ ಆಕರ್ಷಿಸುತ್ತಿದ್ದಾನೆ. ಆ ದೋಸೆ ಹುಯ್ಯುವ ರೀತಿಯನ್ನು ನೋಡುತ್ತಾ ಗ್ರಾಹಕರು ದೋಸೆಗಾಗಿ ಕಾದು ನಿಂತಿರುತ್ತಾರೆ. ಅಂದಹಾಗೆ, ಎಲ್ಲಾ ಹೋಟೆಲ್‌ಗಳಲ್ಲೂ ದೋಸೆ ಇದೇ ರೀತಿಯಲ್ಲೇ ಮಾಡೋದು. ಆದರೂ ಕೂಡಾ ದೋಸೆ ಮೇಲಿನ ಪ್ರೀತಿಗೋ ಏನೋ ಇದರ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಒಂದೂವರೆ ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ.