ಯಾರೇ ಆದರೂ ಒಬ್ಬರಿಗೆ ಒಂದೇ ಟಿಕೆಟ್; ಡಿಕೆಶಿ
ಬೆಂಗಳೂರು; ಯಾರೇ ಆಗಿರಬಹುದು. ಈ ಬಾರಿಯ ಚುನಾವಣೆಯಲ್ಲಿ ಒಬ್ಬರಿಗೆ ಒಂದೇ ಟಿಕೆಟ್ ನೀಡೋದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಒಬ್ಬರಿಗೆ ಒಂದೇ ಟಿಕೆಟ್ ನೀಡೋದು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು. ಆಕಾಂಕ್ಷಿಗಳಿಂದ ದೇಣಿಗೆ ಸಂಗ್ರಹದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಇದು ಹೊಸದಲ್ಲ. ಹಿಂದೆಯೂ ದೇಣಿಗೆ ನೀಡಿದ್ದಾರೆ ಎಂದರು.
ಚುನಾವಣಾ ತಯಾರಿ, ಜಿಲ್ಲೆ ಹಾಗೂ ಬ್ಲಾಕ್ ಮಟ್ಟದಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಸೇರಿದಂತೆ ಹಲವು ವಿಚಾರವಾಗಿ ಆರ್ಥಿಕ ಶಕ್ತಿ ಅಗತ್ಯವಿದೆ. ಕಚೇರಿ ನಿರ್ಮಾಣಕ್ಕೆ ಕಾರ್ಯಕರ್ತರು ಆರ್ಥಿಕ ನೆರವು ಕೇಳಿದಾಗ ನಾವು ಹಣ ಸಹಾಯ ಮಾಡುತ್ತೇವೆ. ಕಾರ್ಯಕರ್ತರಿಗೆ ತೊಂದರೆ ಆದಾಗ ಅವರಿಗೆ ಸಹಾಯ ಮಾಡಲು ಹಣದ ಅಗತ್ಯವಿದೆ. ಹೀಗಾಗಿ ದೇಣಿಗೆಯನ್ನು ಸಂಗ್ರಹಿಸಲಾಗಿದೆ ‘ ಎಂದು ಡಿಕೆಶಿ ಹೇಳಿದರು.
ಅರ್ಜಿ ಸಲ್ಲಿಕೆ ನಂತರ ಆಕಾಂಕ್ಷಿಗಳು ಸಿದ್ದರಾಮಯ್ಯ ಹಾಗೂ ನಿಮ್ಮ ಮನೆಗೆ ಭೇಟಿ ನೀಡುತ್ತಿರುವುದರಿಂದ ತೊಂದರೆ ಆಗುವುದಿಲ್ಲವೇ ಎಂದು ಕೇಳಿದ ಪ್ರಶ್ನೆಗೆ, ‘ ಯಾರೇ ಆಗಲಿ ಒಬ್ಬರಿಗೆ ಒಂದೇ ಟಿಕೆಟ್. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಪಕ್ಷ ಮೊದಲು ಅಧಿಕಾರಕ್ಕೆ ಬರಬೇಕು. ಅಧಿಕಾರಕ್ಕೆ ಬಂದಾಗ ಎಲ್ಲರಿಗೂ ಅಧಿಕಾರ ಸಿಗುತ್ತದೆ. ಎಲ್ಲರಿಗೂ ಅವರದೇ ಆದ ಶಕ್ತಿ ಇರುತ್ತದೆ. ಯಾರ ಶಕ್ತಿ ಎಷ್ಟಿದೆ ಎಂದು ಹೇಳಲು ಸಾಧ್ಯವಿಲ್ಲ. ಒಬ್ಬರಿಗೆ 100 ಬೂತ್ ನಿಭಾಯಿಸುವ ಶಕ್ತಿ ಇದ್ದರೆ, ಮತ್ತೆ ಕೆಲವರಿಗೆ 50, ಇನ್ನೂ ಕೆಲವರಿಗೆ 10 ಬೂತ್ ನಿಭಾಯಿಸುವ ಶಕ್ತಿ ಇರುತ್ತದೆ ‘ ಎಂದು ಹೇಳಿದರು.