ಜಮ್ಮು-ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಬಸ್; ಮೃತರ ಸಂಖ್ಯೆ 38ಕ್ಕೆ ಏರಿಕೆ
ಜಮ್ಮು; ಜಮ್ಮು ಕಾಶ್ಮೀರದಲ್ಲಿ ಇಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 38ಕ್ಕೇರಿದೆ. ಪೊಲೀಸರ ಪ್ರಕಾರ, 60 ಪ್ರಯಾಣಿಕರೊಂದಿಗೆ ಬಸ್ ಕಿಶ್ತ್ವಾರ್‌ನಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಹೊರಟಿತ್ತು. ಬಟೋಟ್-ಕಿಶ್ತ್ವಾರ್ ರಾಷ್ಟ್ರೀಯ ಹೆದ್ದಾರಿಯ ಟ್ರುಂಗಲ್-ಅಸ್ಸಾರ್ ಬಳಿ ಬಸ್ ಆಕಸ್ಮಿಕವಾಗಿ 300 ಅಡಿ ಆಳದ ಕಂದರಕ್ಕೆ ಉರುಳಿದೆ.
ಈ ಘಟನೆಯಲ್ಲಿ 38 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಪ್ರಧಾನಿ ಮೋದಿ ಸಾಂತ್ವನ ಹೇಳಿದರು. ಮೃತರ ಕುಟುಂಬಕ್ಕೆ 2 ಲಕ್ಷ ರೂ., ಗಾಯಗೊಂಡವರಿಗೆ 50 ಸಾವಿರ ರೂ.ನಂತೆ ಆರ್ಥಿಕ ನೆರವು ನೀಡುತ್ತಿರುವುದಾಗಿ ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. “ದೋಡಾದ ಅಸ್ಸಾರ್‌ನಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಪ್ರಯಾಣಿಕರು ಪ್ರಾಣ ಕಳೆದುಕೊಂಡಿರುವುದು ದುಃಖಕರವಾಗಿದೆ. ಮೃತರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಸಂತ್ರಸ್ತರಿಗೆ ಅಗತ್ಯ ವೈದ್ಯಕೀಯ ನೆರವು ನೀಡುವಂತೆ ಡಿವಿಕಾಮ್ ಮತ್ತು ಜಿಲ್ಲಾ ಆಡಳಿತಕ್ಕೆ ಸೂಚಿಸಿದ್ದೇವೆ ಎಂದು ಮನೋಜ್ ಹೇಳಿದರು. ದೋಡಾ ಜಿಲ್ಲೆಯಲ್ಲಿ ವಾರದೊಳಗೆ ನಡೆದ ಎರಡನೇ ರಸ್ತೆ ಅಪಘಾತ ಇದಾಗಿದೆ ಎಂಬುದು ಗಮನಾರ್ಹ.