Bengaluru

ಪರಿಶಿಷ್ಟ ಜಾತಿಯ ಮೀಸಲಾತಿ ವಿಚಾರ; 9ನೇ ಷೆಡ್ಯೂಲ್‌ನಲ್ಲಿ ಸೇರ್ಪಡೆಗೆ ಶಿಫಾರಸು

ಬೆಂಗಳೂರು; ಇಂದು ನಡೆದ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಸಾಂವಿಧಾನಿಕ ಮಾನ್ಯತೆ ದೊರಕಿಸಲು ಸಾಂವಿಧಾನದ ೯ನೇ ಷೆಡ್ಯೂಲ್‌ನಲ್ಲಿ ಸೇರಿಸುವಂತೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನವನ್ನು ಕೈಗೊಂಡಿದೆ.

ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. ೧೫ ರಿಂದ ೧೭ ಕ್ಕೆ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. ೩ ರಿಂದ ೭ ಕ್ಕೆ ಏರಿಸುವ ಐತಿಹಾಸಿಕ ತೀರ್ಮಾನ ಕೈಗೊಂಡು ಈ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿ ನಂತರ ವಿಧಾನಸಭೆಯಲ್ಲಿ ಈ ತೀರ್ಮಾನಕ್ಕೆ ಕಾಯ್ದೆಯ ಸ್ವರೂಪ ನೀಡಲಾಗಿತ್ತು.ಈ ಮೀಸಲಾತಿ ಹೆಚ್ಚಳದ ಲಾಭ ಸಿಗುವಂತಾಗಲು ಇದನ್ನು ಸಾಂವಿಧಾನದ ೯ನೇ ಷೆಡ್ಯೂಲ್‌ನಲ್ಲಿ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಸಚಿವ ಸಂಪುಟದಲ್ಲಿ ಇಂದು ಕೈಗೊಂಡಿರುವ ತೀರ್ಮಾನವನ್ನು ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲೂ ಮಂಡಿಸಿ ಸದನದಲ್ಲೂ ಈ ಬಗ್ಗೆ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Share Post