BengaluruHealth

ಕೇಕ್ ತಂದ ಆಪತ್ತು; ಮಗು ಸಾವು, ತಂದೆ-ತಾಯಿ ಅಸ್ವಸ್ಥ

ಬೆಂಗಳೂರು: ಕೇಕ್‌ ತಿಂದು ಒಂದೇ ಕುಟುಂಬದ ಮೂವರುಅಸ್ವಸ್ಥಗೊಂಡಿದ್ದು, ಇದರಲ್ಲಿ ಒಂದು ಮಗು ಸಾವನ್ನಪ್ಪಿದೆ. ತಂದೆ ಹಾಗೂ ತಾಯಿ ಗಂಭೀರ ಸ್ಥಿತಿಯಲ್ಲಿದ್ದಾರೆ.

ಈ ಘಟನೆ ಬೆಂಗಳೂರಿನ ಕೆ.ಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ನಡೆದಿದೆ. ಮೃತ ಮಗು ಧೀರಜ್ (5) ಎಂದು ತಿಳಿದುಬಂದಿದೆ. ತಂದೆ ಬಾಲರಾಜ್ ಮತ್ತು ತಾಯಿ ನಾಗಲಕ್ಷ್ಮಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಾಲರಾಜ್‌ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ಮಗನಿಗಾಗಿ ಮನೆಗೆ ಕೇಕ್‌ ತೆಗೆದುಕೊಂಡು ಹೋಗಿದ್ದರು. ಮನೆಯಲ್ಲಿ ಪತ್ನಿ ಮತ್ತು ಮಗುವಿನ ಜೊತೆ ಸೇರಿ ಮೂವರು ಕೇಕ್ ತಿಂದಿದ್ದರು.

ಕೇಕ್ ತಿಂದ ನಂತರ ಮೂವರ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಕೂಡಲೇ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಮೂವರ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಧೀರಜ್‌ ತೀವ್ರ ಅಸ್ವಸ್ಥಗೊಂಡಿದ್ದರಿಂದ ಮೃತಪಟ್ಟಿದ್ದಾನೆ. ಬಾಲರಾಜ್, ನಾಗಲಕ್ಷ್ಮಿ ದಂಪತಿ ಸ್ಥಿತಿ ಗಂಭೀರವಾಗಿದ್ದು, ಕಿಮ್ಸ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕೆಪಿ ಅಗ್ರಹಾರ ಠಾಣೆ ಪೊಲೀಸರಿಂದ ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೇಕ್ ತಂದಿದ್ದು ಯಾವ ಬೇಕರಿಯಿಂದ? ಕೇಕ್‌ನಲ್ಲಿರೋ ಅಂಶಗಳಿಂದ ಅಸ್ವಸ್ಥರಾಗಿದ್ದಾರಾ ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಫುಡ್ ಪಾಯನ್ಸ್‌ನಿಂದ ಸಾವು ಸಂಭವಿಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ವೈದ್ಯರ ವರದಿಗಾಗಿ ಕಾಯುತ್ತಿದ್ದಾರೆ.

Share Post