BengaluruPolitics

ಕುಮಾರಸ್ವಾಮಿಯ ಮಾನಸಿಕ ಸ್ವಾಸ್ತ್ಯ ಕಲಕಿದ ಹಾಗೆ ಆಗಿದೆ; ಸಿದ್ದರಾಮಯ್ಯ

ಬೆಂಗಳೂರು; ಪೊಲೀಸ್‌ ಅಧಿಕಾರಿಗಳ ವರ್ಗಾವಣೆಯಲ್ಲಿ ವಿವೇಕಾನಂದ ಎಂಬ ಹೆಸರಿದೆ. ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ ಅವರ ಸಂಭಾಷಣೆಯಲ್ಲಿ ವಿವೇಕಾಂದ ಹೆಸರು ಪ್ರಸ್ತಾವನೆ ಆಗಿದೆ. ಅದೇ ವಿವೇಕಾನಂದ ಇವರು ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್‌ ಉತ್ತರ ಕೊಟ್ಟಿದ್ದಾರೆ. ಅವರ ಈ ಬಗ್ಗೆ ಟ್ಟಿಟರ್‌ನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.

ಸಿದ್ದರಾಮಯ್ಯ ಟ್ವೀಟ್‌ನಲ್ಲಿ ಏನಿದೆ..?

ಜೀವಮಾನದಲ್ಲಿಯೇ ಮತ್ತೆ ಅಧಿಕಾರ ಕೈಗೆ ಬಾರದು ಎಂಬ ರಾಜಕೀಯ ವಾಸ್ತವ ಮಾಜಿ ಮುಖ್ಯಮಂತ್ರಿ @hd_kumaraswamy  ಅವರ ನಿದ್ದೆಗೆಡಿಸಿ ಮಾನಸಿಕ ಸ್ವಾಸ್ತ್ಯವನ್ನು ಕಲಕಿದ ಹಾಗೆ ಕಾಣುತ್ತಿದೆ. ಸುಳ್ಳುಕೋರನೆಂಬ ಅಪಖ್ಯಾತಿಯನ್ನು ಸ್ವಯಂ ತಾನೇ ಸಾಬೀತುಪಡಿಸುವ ಪೈಪೋಟಿಗೆ ಬಿದ್ದಿರುವ ಈ ಮಾಜಿ ಮುಖ್ಯಮಂತ್ರಿ ಇಂದು ಬೆಳ್ಳಂಬೆಳಗೆ ಎದ್ದು ಮತ್ತೊಂದಷ್ಟು ಸುಳ್ಳುಗಳನ್ನು ಉದುರಿಸಿದ್ದು ನೋಡಿದರೆ ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡಿದ್ದು ಸ್ಪಷ್ಟವಾಗಿದೆ. ಯಾರಾದರೂ ಹಿತೈಷಿಗಳು ಇವರಿಗೆ ಸರಿಯಾದ ಚಿಕಿತ್ಸೆಗೆ ವ್ಯವಸ್ಥೆ ಮಾಡಬಾರದೇ? ಮಾಜಿ ಶಾಸಕ ಡಾ.ಯತೀಂದ್ರ ಅವರ ಜೊತೆಗಿನ ನನ್ನ ಸಂಭಾಷಣೆ ವರುಣ ಕ್ಷೇತ್ರದ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಂಬಂಧಪಟ್ಟಿದ್ದು ಎನ್ನುವುದನ್ನು ದಾಖಲೆ ಸಮೇತ ಸಾಬೀತುಪಡಿಸಿದ್ದರೂ ಹೆಚ್.ಡಿ.ಕುಮಾರಸ್ವಾಮಿ ಇಂದು ಮತ್ತೊಂದು ಸುಳ್ಳನ್ನು ಸೃಷ್ಟಿಸ ಜನತೆಯ ದಾರಿ ತಪ್ಪಿಸಲು ಹೆಣಗಾಡಿದ್ದಾರೆ.

ನಮ್ಮ ಸಂಭಾಷಣೆಯಲ್ಲಿ ಪ್ರಸ್ತಾಪವಾಗಿರುವ ವಿವೇಕಾನಂದ ಅವರು ಮೈಸೂರು ತಾಲೂಕಿನ ಬಿಇಒ ಎನ್ನುವುದು ಸ್ಪಷ್ಟವಾಗಿದ್ದರೂ ಯಾವುದೋ ವರ್ಗಾವಣೆಯ ಪಟ್ಟಿಯಲ್ಲಿನ ವಿವೇಕಾನಂದ ಎಂಬ ಅಧಿಕಾರಿಯ ಹೆಸರು ಹುಡುಕಿ ತನ್ನ ಸುಳ್ಳಿಗೆ ಸಾಕ್ಷಿ ನೀಡುವ ಹತಾಶ ಪ್ರಯತ್ನ ಮಾಡಿದ್ದಾರೆ. ಇದನ್ನು ಮಾನಸಿಕ ಅಸ್ವಸ್ಥತೆ ಎನ್ನದೆ ಬೇರೆ ಏನು ಹೇಳಲು ಸಾಧ್ಯ? ರಾಜ್ಯದಲ್ಲಿ ಕುಮಾರಸ್ವಾಮಿ ಎಂಬ ಹೆಸರಿನವರು ಸಾವಿರಾರು ಮಂದಿ ಇದ್ದಾರೆ. ಅವರಲ್ಲಿಯೂ ಒಂದಷ್ಟು ಪಕ್ಕಾ ಕ್ರಿಮಿನಲ್ ಗಳೂ ಇದ್ದಾರೆ. ಹೆಸರಿನ ಕಾರಣಕ್ಕಾಗಿ ಅವರೆಲ್ಲರ ಪಾಪಕರ್ಮಗಳ ಹೊರೆಯನ್ನು ಹೆಚ್.ಡಿ.ಕುಮಾರಸ್ವಾಮಿಯವರ ತಲೆ ಮೇಲೆ ಹೊರಿಸಲಿಕ್ಕೆ ಆಗುತ್ತಾ? ‘ಎಲ್ಲಿದಿಯಪ್ಪಾ ನಿಖಿಲ್’ ಎಂದು ಸಾರ್ವಜನಿಕ ಸಭೆಯಲ್ಲಿ ಕುಮಾರಸ್ವಾಮಿ ಕೂಗಿದಾಗ ಅಲ್ಲಿ ಎಷ್ಟು ಮಂದಿ ಆ ಹೆಸರಿನವರಿದ್ದರೋ ಏನೋ? ಓಗೊಟ್ಟಿದ್ದು ಇವರ ಮಗ ಮಾತ್ರ ಅಲ್ವಾ? ಉಳಿದವರು ಓಗೊಟ್ಟಿದ್ದರೂ ಅವರನ್ನು ಮಕ್ಕಳು ಎಂದು ಇವರು ಒಪ್ಪಿಕೊಳ್ಳುತ್ತಿದ್ರಾ? ಒಬ್ಬ ಜವಾಬ್ದಾರಿಯುತ ರಾಜಕೀಯ ನಾಯಕನಾಗಿ ಕುಮಾರಸ್ವಾಮಿಯವರು ವಿಶ್ವಾಸಾರ್ಹ ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಬೇಕೇ ಹೊರತು ತಾವೇ ಸೃಷ್ಟಿಸಿರುವ ಸುಳ್ಳಿನ ಕಂತೆಗಳನ್ನಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೊತೆಗೆ ರಾಜಕೀಯವಾಗಿ ನನಗೆ ಭಿನ್ನಾಭಿಪ್ರಾಯಗಳಿವೆ. ಆದರೆ ಅವರೆಂದೂ ಈ ರೀತಿಯ ಸಡಿಲ ಮಾತುಗಳನ್ನು ಆಡಿಲ್ಲ.

ಕುಮಾರಸ್ವಾಮಿಯವರು ಕನಿಷ್ಠ ಅವರ ಅಣ್ಣ ಹೆಚ್.ಡಿ.ರೇವಣ್ಣ ಅವರಿಂದಾದರೂ ಒಂದಿಷ್ಟು ರಾಜಕೀಯ ನಡವಳಿಕೆಯನ್ನು ಕಲಿಯಬಾರದಾ? ಡಾ.ಯತೀಂದ್ರ ವಿರುದ್ದ ತಾನು ಮಾಡಿರುವ ಆರೋಪ ಸುಳ್ಳು ಎನ್ನುವುದು ಹೆಚ್.ಡಿ.ಕುಮಾರಸ್ವಾಮಿವಯರಿಗೆ ಖಂಡಿತ ಮನವರಿಕೆ ಆಗಿದೆ. ಈಗಲೂ ಕಾಲ ಮಿಂಚಿಲ್ಲ. ತಪ್ಪನ್ನು ಒಪ್ಪಿಕೊಂಡರೆ ಯಾರೂ ಸಣ್ಣವರಾಗುವುದಿಲ್ಲ. ಒಂದು ಸುಳ್ಳನ್ನು ಸಮರ್ಥಿಸಲು ನೂರು ಸುಳ್ಳುಗಳನ್ನು ಹೇಳುವುದರ ಬದಲಿಗೆ ಮಾಡಿದ ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆ ಕೇಳುವುದು ಉತ್ತಮ ನಡೆ. ಆ ಸದ್ಬುದ್ದಿ ಅವರಿಗೆ ಬರಲಿ ಎಂದು ಹಾರೈಸುತ್ತೇನೆ.

Share Post