Bengaluru

2 ವರ್ಷದಿಂದ ಬೆಂಗಳೂರಲ್ಲಿ ವಾಸ; ಆಟೋ ಓಡಿಸ್ತದ್ನಂತೆ ಉಗ್ರ..!

ಬೆಂಗಳೂರು; ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಹಿಜ್ಬುಲ್​​ ಮುಜಾಹಿದ್ದಿನ್‌ ಕಮಾಂಡರ್​​ ತಾಲಿಬ್​ ಹುಸೇನ್ ಬಂಧನವಾಗಿದೆ. ಕಾಶ್ಮೀರದ ಪೊಲೀಸರು ಬೆಂಗಳೂರಿನ ಶ್ರೀರಾಮಪುರದಲ್ಲಿ ಆತನನ್ನು ಬಂಧಿಸಿಕೊಂಡು ಹೋಗಿದ್ದಾರೆ. ಇದೀಗ ಆತನ ಕುರಿತಾದ ಸ್ಫೋಟಕ ವಿಷಯಗಳು ಬಹಿರಂವಾಗುತ್ತಿವೆ.

ಉಗ್ರ ತಾಲಿಬ್‌ ಯುವಕರ ಬ್ರೈನ್​ ವಾಶ್ ಮಾಡುವ ಮೂಲಕ ಜಮ್ಮು-ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ ಕುಮ್ಮಕ್ಕು ನೀಡುತ್ತಿದ್ದ ಮಾಹಿತಿ ಕೂಡ ಇದೀಗ ಬೆಳಕಿಗೆ ಬಂದಿದೆ.  ಎರಡು ವರ್ಷಗಳಿಂದ ಬೆಂಗಳೂರಿನಲ್ಲೇ ವೇಷ ಬದಲಿಸಿ ಜೀವನ ನಡೆಸುತ್ತಿದ್ದ ಉಗ್ರನ ಬಂಧನದ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ​​​ಮಸೀದಿಗಳಲ್ಲಿ ಪಾಠ ಪ್ರವಚನ ಮಾಡ್ತಿದ್ದ ಈತ ಆಟೋ ಓಡಿಸುತ್ತ ಜೀವನ ನಡೆಸುತ್ತಿದ್ದ. ಆದರೆ, ಬೆಂಗಳೂರು ಪೊಲೀಸರ ಸಹಾಯದಿಂದ ರಾಷ್ಟ್ರೀಯ ರೈಫಲ್ಸ್  ಮತ್ತು ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಈತನ ಹೆಡೆಮುರಿ ಕಟ್ಟಿದ್ದಾರೆ.

ಬಂಧಿತ ಭಯೋತ್ಪಾದಕನನ್ನ ತಾಲೀಬ್​ ಹುಸೇನ್​ ಎಂದು ಗುರುತಿಸಲಾಗಿದೆ. ಹಿಜ್ಬುಲ್​ ಮುಜಾಹಿದ್ದೀನ್ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್​ಗಳ ಪೈಕಿ ಒಬ್ಬ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ. ಈತ ಮೂಲತಃ ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಗೆ ಸೇರಿದಾತ. 2016ರಲ್ಲಿ ಭಯೋತ್ಪಾದಕ ಸಂಘಟನೆಗೆ ಸೇರಿದ್ದು, ಇಬ್ಬರು ಹೆಂಡತಿ ಮತ್ತು ಐವರು ಮಕ್ಕಳನ್ನ ಹೊಂದಿದ್ದಾನೆ.

ಯುವಕರ ಬ್ರೈನ್​ ವಾಶ್​ ಮಾಡುವ ಮೂಲಕ ಜಮ್ಮು-ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ ಸಂಚು ರೂಪಿಸುತ್ತಿದ್ದ. ಕಣಿವೆ ನಾಡಿನಲ್ಲಿ ನಡೆದ ಅನೇಕ ಬಾಂಬ್​ ಸ್ಫೋಟ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ. ಸಶಸ್ತ್ರ ಪಡೆ ಈತನಿಗೋಸ್ಕರ ಶೋಧಕಾರ್ಯ ತೀವ್ರಗೊಳಿಸಿದಾಗ ಹೆಂಡತಿ-ಮಕ್ಕಳೊಂದಿಗೆ ಬೆಂಗಳೂರಿಗೆ ಪರಾರಿಯಾಗಿದ್ದನೆಂದು ತಿಳಿದುಬಂದಿದೆ.

Share Post