ಇನ್ನೂ ಹತ್ತು ವರ್ಷ ರಾಜ್ಯ ಸುತ್ತುತ್ತೇನೆ, ಪಕ್ಷ ಕಟ್ಟುತ್ತೇನೆ; ಬಿಎಸ್ವೈ
ಬೆಳಗಾವಿ; ಇನ್ನೂ ಹತ್ತು ವರ್ಷ ನಾನು ರಾಜ್ಯದಲ್ಲಿ ಎಲ್ಲಿ ಕರೆದರೂ ಹೋಗುತ್ತೇನೆ. ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ, ಬೆಳಗಾವಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್ ವಾಯವ್ಯದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ದೊಡ್ಡ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಸಭೆಯಲ್ಲಿ ಕೂಡ ಲೆಹರ್ ಸಿಂಗ್ ಸೇರಿ ಮೂರು ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ. ಯಾವುದೇ ಗೊಂದಲ ನಮ್ಮಲ್ಲಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು. ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಇಡೀ ಜಗತ್ತೇ ಮೆಚ್ಚಿದೆ. ನರೇಂದ್ರ ಮೋದಿ ಹೆಸರು ನಮ್ಮ ಗೆಲುವಿಗೆ ಕಾರಣವಾಗುತ್ತೆ. ನಿಶ್ಚಿತವಾಗಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಗೆಲ್ಲುತ್ತೇವೆ. ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 140 ರಿಂದ 150 ಸ್ಥಾನ ಗೆಲ್ಲುತ್ತೇವೆ. ಕರ್ನಾಟಕದಲ್ಲಿ ಬಿಜೆಸಿ ಸರ್ಕಾರ ತರಲು ಶಕ್ತಿಮೀರಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ಆ ನಿಟ್ಟಿನಲ್ಲಿ ಪ್ರಯತ್ನ ಪ್ರಾರಂಭಗೊಂಡಿದೆ ಎಂದರು.