ಶನಿವಾರ ಪ್ರಮಾಣವಚನ; ಶನಿವಾರವೇ ಉಚಿತ ಯೋಜನೆಗಳ ಘೋಷಣೆ..?
ಬೆಂಗಳೂರು; ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ಮನವೊಲಿಕೆ ಮಣಿದಿದ್ದು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುತ್ತಿದ್ದಾರೆ. ಇದೇ ಶನಿವಾರ ಮಧ್ಯಾಹ್ನ 12.30ಕ್ಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ.ಶಿವಕುಮಾರ್ ಅವರು ಡಿಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಪ್ರಮಾಣವಚನ ಸ್ವೀಕಾರ ಸಮಾರಂಭ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಭರ್ಜರಿ ಸಿದ್ಧತೆ ನಡೆದಿದೆ. ಇನ್ನು ಸಿದ್ದರಾಮಯ್ಯ ಬೆಂಬಲಿಗರು ಈಗಾಗಲೇ ಎಲ್ಲೆಡೆ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.
ಅಂದಹಾಗೆ, ಸಿದ್ದರಾಮಯ್ಯ ಅವರು 2013ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಿದ್ದರು. ಇದೀಗ, ಕಾಂಗ್ರೆಸ್ ಪ್ರಮುಖವಾಗಿ ಐದು ಉಚಿತ ಭರವಸೆಗಳನ್ನು ನೀಡಿದ್ದು, ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಈ ಯೋಜನೆಗಳಿಗೆ ಒಪ್ಪಿಗೆ ಸೂಚಿಸಲಾಗುತ್ತದೆ ಎಂದು ಹೇಳಲಾಗಿತ್ತು. ಅದರಂತೆ ಶನಿವಾರ ಸಂಜೆಯೇ ಐದೂ ಭರವಸೆಗಳಿಗೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಇತರ ಸಂಪುಟ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ಮೇಲೆ ಶನಿವಾರ ಸಂಜೆ ಕ್ಯಾಬಿನೆಟ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ಐದೂ ಉಚಿತ ಯೋಜನೆಗಳಿಗೆ ಒಪ್ಪಿಗೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಶನಿವಾರ ಸಂಜೆ ನೂತನ ಸಿಎಂ ಹಾಗೂ ಡಿಸಿಎಂ ಸುದ್ದಿಗೋಷ್ಠಿ ನಡೆಸಿ ಹೊಸ ಯೋಜನೆಗಳನ್ನು ಜಾರಿ ಮಾಡಿ ಘೋಷಣೆ ಮಾಡುವ ಸಾಧ್ಯತೆ ಇದೆ.