Bengaluru

ರಾಜ್ಯಪಾಲರ ಮೂಲಕ ಜನರನ್ನು ದಿಕ್ಕು ತಪ್ಪಿಸಿದ ಡಬಲ್‌ ಎಂಜಿನ್‌ ಸರ್ಕಾರ-ಸಿದ್ದು ಸಿಡಿಮಿಡಿ

ಬೆಂಗಳೂರು: ಡಬ್ಬಲ್ ಎಂಜಿನ್ ಸರ್ಕಾರ ನಾಡಿಗೆ ಡಬ್ಬಲ್ ದ್ರೋಹ ಎಸಗಿದೆ. ಸರ್ಕಾರ ರಾಜ್ಯಪಾಲರ ಬಾಯಿಂದ ಸುಳ್ಳು ಹೇಳಿಸಿದೆ. ಸರ್ಕಾರ ರಾಜ್ಯಪಾಲರ ಮಾತಿನ ಮೂಲಕ ನಾಡಿನ ಜನರ ದಿಕ್ಕು ತಪ್ಪಿಸಿದೆ. ಕನ್ನಡಿಗರನ್ನು ಸಾಲದ ಪ್ರಪಾತಕ್ಕೆ ತಳ್ಳಿದ್ದರ ಬಗ್ಗೆ ಪ್ರಸ್ತಾಪವೇ ಇಲ್ಲ. ಕೇಂದ್ರ ಸರ್ಕಾರದ ಕೆಲವು ಯೋಜನೆಗಳನ್ನು ತನ್ನ ಯೋಜನೆಗಳು ಎಂದು ಬಿಂಬಿಸಿಕೊಂಡಿದೆ.

ಯಾವುದೇ ನಾಗರಿಕ ಸರ್ಕಾರಕ್ಕೆ ನಿರ್ಧಿಷ್ಟವಾದ ಗೊತ್ತು-ಗುರಿಗಳಿರುತ್ತವೆ. ಆದರೆ, ರಾಜ್ಯಪಾಲರ ಭಾಷಣ ಕೇಳಿದ ಮೇಲೆ, ಈ ಸರ್ಕಾರಕ್ಕೆ ಯಾವುದೇ ಗೊತ್ತು ಗುರಿಗಳಿಲ್ಲ ಎಂದು ಸ್ಪಷ್ಟವಾಗುತ್ತದೆ. ಸರ್ಕಾರಗಳಿಗೆ ತನ್ನದೇ ಆದ ಆದ್ಯತೆಗಳಿರುತ್ತವೆ.

೧. ಕಲ್ಯಾಣ ಕಾರ್ಯಕ್ರಮಗಳಿಗೆ ಒತ್ತು ಕೊಡುವುದು

೨. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ಕೊಡುವುದು

ಸರ್ಕಾರ ಸಂಪೂರ್ಣವಾಗಿ ಇವೆರಡನ್ನೂ ಮರೆತಿದೆ ರಾಜ್ಯದ ಜನರಿಗೆ ಕಲ್ಯಾಣವೂ ಇಲ್ಲ. ಅಭಿವೃದ್ಧಿಯ ಮಾತೇ ಇಲ್ಲ. ರಾಜ್ಯಪಾಲರ ಭಾಷಣದಲ್ಲಿ 116 ಪ್ಯಾರಾಗಳಿವೆ. ಅದರಲ್ಲಿ 23 ಪ್ಯಾರಾಗಳು ಕೋವಿಡ್ ಮತ್ತು ಪ್ರವಾಹಕ್ಕೆ ಸಂಬಂಧಪಟ್ಟಿವೆ. ಇನ್ನುಳಿದಂತೆ ಸುಮಾರು 30 ಪ್ಯಾರಾಗಳು ಹಳೆಯವು ಮತ್ತು ಭರವಸೆಗಳಾಗಿವೆ. ಹಾಗೂ ನಮ್ಮ ಸರ್ಕಾರದ ಸಾಧನೆಗಳೂ ಇವೆ.

ರಾಜ್ಯಪಾಲರ ಭಾಷಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರು, ರೈತರು, ಕುಶಲ ಕರ್ಮಿಗಳು, ಸಣ್ಣ ಮಧ್ಯಮ ಸೂಕ್ಷ್ಮ ಕೈಗಾರಿಕೆಗಳನ್ನು ನಡೆಸುವವರು, ಬೀದಿ ಬದಿ ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರಿಗೆ ಈ ಸರ್ಕಾರ ಏನನ್ನೂ ಮಾಡಿಲ್ಲ ಎಂಬುದನ್ನು ಒಪ್ಪಿಕೊಂಡಿರುವುದು ರಾಜ್ಯಪಾಲರ ಭಾಷಣದಿಂದ ಅರ್ಥವಾಗುತ್ತದೆ.

ಕಲ್ಯಾಣ ಕರ್ನಾಟಕ ಮಂಡಳಿಗೆ ಸಂಬಂಧಪಟ್ಟ ಹಾಗೆ ಹೆಸರು ಬದಲಾಯಿಸಿದ್ದು, ಕಛೇರಿ ಸ್ಥಳಾಂತರಿಸಿದ್ದನ್ನೆ ಸಾಧನೆ ಎಂದು ಹೇಳಿಕೊಂಡಿದೆ. ನೀರಾವರಿ ಯೋಜನೆಗಳಿಗೆ ಏನನ್ನೂ ಕೊಟ್ಟಿಲ್ಲ. ಉದಾಹರಣೆಗೆ ಗ್ರಾಮ ಒನ್ ಬಗ್ಗೆ ಭರ್ಜರಿ ಪ್ರಚಾರ ತೆಗೆದುಕೊಳ್ಳುತ್ತಿದೆ. ರಾಜ್ಯಪಾಲರ ಬಾಯಲ್ಲೂ ಹೇಳಿಸಿದೆ. ಆದರೆ, ಈ ಯೋಜನೆ ನಮ್ಮ ಸರ್ಕಾರದ ಬಾಪೂಜಿ ಸೇವಾ ಕೇಂದ್ರಗಳ ನಕಲಾಗಿದೆ.

ಅಮೃತ ಗ್ರಾಮ ಪಂಚಾಯ್ತಿ ಯೋಜನೆ ಅಡಿ ಗ್ರಾಮ ಪಂಚಾಯ್ತಿಗಳಿಗೆ 25 ಲಕ್ಷ ಕೊಡುವುದನ್ನೆ ಸರ್ಕಾರ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಆದರೆ, ನಮ್ಮ ಸರ್ಕಾರ ಇದ್ದಾಗ ಸಾವಿರ ಗ್ರಾಮ ಪಂಚಾಯ್ತಿಗಳಿಗೆ ತಲಾ ಒಂದು ಕೋಟಿ ರೂಪಾಯಿ ನೀಡಿದ್ದೆವು.

ಕೋವಿಡ್ ಎರಡನೇ ಅಲೆಯಲ್ಲಿ ಸರ‍್ಕಾರದ ನಿರ್ಲಕ್ಷ್ಯದಿರಿಂದಲೇ ಲಕ್ಷಾಂತರ ಜನ ಮರಣ ಹೊಂದಿದರು. ಸರಿಯಾಗಿ ಆಕ್ಸಿಜನ್ ವ್ಯವಸ್ಥೆ, ಬೆಡ್‌ಗಳು, ಔಷಧಿ, ಆಂಬುಲೆನ್ಸ್, ಆಸ್ಪತ್ರೆ, ವೈದ್ಯರು, ದಾದಿಯರು, ಇತ್ಯಾದಿ ಯಾವುದೇ ಸಿದ್ಧತೆಗಳನ್ನು ಮಾಡಿಕೊಳ್ಳದೆ ಜನರನ್ನು ಬೀದಿ ಬೀದಿಯಲ್ಲಿ ಕೊಂದು ಹಾಕಿದರು. ಅದಕ್ಕೆ ಒಂದು ಸಣ್ಣ ಪಶ್ಚಾತ್ತಾಪವೂ ಇಲ್ಲ.

ನಾನು ನನ್ನ ರಾಜಕೀಯ ಅನುಭವದ ಮೇಲೆ ಹೇಳುವುದಾದರೆ ಇಷ್ಟೊಂದು ಕೆಟ್ಟದಾದ ಭಾಷಣವನ್ನು ಎಂದೂ ಕೇಳಿರಲಿಲ್ಲ. ಏನನ್ನೂ ಮಾಡದ ಸರ್ಕಾರವನ್ನು ಆರಿಸಿ ಕಳುಹಿಸಿದ್ದು ಈ ನಾಡಿನ ದೌರ್ಭಾಗ್ಯ ಎಂಬುದು ರಾಜ್ಯಪಾಲರ ಭಾಷಣದಿಂದ ರಾಜ್ಯದ ಜನರಿಗೆ ಇಂದು ಅರ್ಥವಾಗಿದೆ.

Share Post