ವಿಪರೀತ ಸಾಲ ಮಾಡಿಕೊಂಡ; ಬ್ಯಾಂಕ್ ರಾಬರಿಗಿಳಿದ- ಕೊನೆಗೆ ಏನಾಯ್ತು..?
ಬೆಂಗಳೂರು: ಕೆಲ ದಿನಗಳ ಹಿಂದೆ ಬ್ಯಾಂಕ್ ರಾಬರಿ ಮಾಡಿದ್ದ ಎಂಜಿನಿಯರಿಂಗ್ ಪದವೀಧರನೊಬ್ಬ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನ ಮಡಿವಾಳ ಠಾಣಾ ಪೊಲೀಸರು ಧೀರಜ್ ಎಂಬಾತನನ್ನು ಬಂಧಿಸಿದ್ದಾರೆ.
ಮಡಿವಾಳ ಬಳಿಯ ಬಿಟಿಎಂ ಲೇಔಟ್ ಎಸ್‌ಬಿಐ ಶಾಖೆಗೆ ಬಂದಿದ್ದ ಯುವಕನೊಬ್ಬ, ಚಾಕು ತೋರಿಸಿ, ಬ್ಯಾಂಕ್ ಸಿಬ್ಬಂದಿಯನ್ನು ಬೆದರಿಸಿ 85 ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ದೋಚಿದ್ದ. ಈ ಸಂಬಂಧ ಪ್ರಕರಣದ ದಾಖಲಿಸಿಕೊಂಡಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪಡೆದು, ಆರೋಪಿ ಪತ್ತೆಯಾಗಿ ಹುಡುಕಾಟ ನಡೆಸಿದ್ದರು. ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಸಿಕ್ಕಿಬಿದ್ದಿರುವ ಆರೋಪಿ ಧೀರಜ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಷೇರು ಟ್ರೇಡಿಂಗ್ ಮಾಡುತ್ತಿದ್ದ. ಇದಕ್ಕಾಗಿ ಆನ್‌ಲೈನ್ ಅಪ್ಲಿಕೇಷನ್‌ಗಳ ಮೂಲಕ ನಲವತ್ತು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಆದ್ರೆ ಟ್ರೇಡಿಂಗ್‌ನಲ್ಲಿ ಎಲ್ಲಾ ಹಣ ಕಳೆದುಕೊಂಡಿದ್ದ ಧೀರಜ್ ಕಂಗಾಲಾಗಿದ್ದ. ನಂತರ ಯೂಟ್ಯೂಬ್‌ನಲ್ಲಿ ಬ್ಯಾಂಕ್ ರಾಬರಿ ಮಾಡುವುದು ಹೇಗೆ ಎಂಬುದನ್ನು ತಿಳಿದು, ಈ ಕೃತ್ಯ ಎಸಗಿ ಹಣ ದೋಚಿದ್ದ.
ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಇಲ್ಲದ ಬ್ಯಾಂಕ್‌ಗಳಿಗಾಗಿ ಹುಡುಕಾಟ ನಡೆಸಿದ್ದ ಆರೋಪಿ, ಬಿಟಿಎಂ ಲೇಔಟ್ ಬ್ಯಾಂಕಿಗೆ ಸೆಕ್ಯೂರಿಟಿ ಗಾರ್ಡ್ ಇಲ್ಲದ್ದನ್ನು ಗಮನಿಸಿ, ಬ್ಯಾಂಕ್‌ಗೆ ನುಗ್ಗಿ ರಾಬರಿ ಮಾಡಿದ್ದ. ನಂತರ ಬೇರೆ ಬೇರೆ ಊರುಗಳನ್ನು ಸುತ್ತಾಡಿದ್ದ ಆರೋಪಿ, ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ. ಸಾಲ ಕೊಟ್ಟ ವ್ಯಕ್ತಿಯೊಬ್ಬನಿಗೆ ಸಾಳ ಹಿಂತಿರುಗಿಸಲು ಬಂದಿದ್ದಾಗ ಪೊಲೀಸರು ಬಲೆಬೀಸಿ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.