ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿದ್ದ ಪ್ರಾರ್ಥನಾ ಸ್ಥಳ ತೆರವು
ಬೆಂಗಳೂರು: ಮೆಜೆಸ್ಟಿಕ್‌ನ ಸಂಗೊಳ್ಳಿ ರೈಲು ನಿಲ್ದಾಣದ ಐದನೇ ಪ್ಲಾಟ್‌ಫಾರ್ಮ್‌ನಲ್ಲಿದ್ದ ಪ್ರಾರ್ಥನಾ ಸ್ಥಳವನ್ನು ತೆರವುಗೊಳಿಸಲಾಗಿದೆ. ಇಲ್ಲಿ ನೌಕರರ ವಿಶ್ರಾಂತಿಗಾಗಿ ಇದ್ದ ಕೊಠಡಿಯನ್ನು ಪ್ರಾರ್ಥನಾ ಮಂದಿರವನ್ನಾಗಿ ಮಾಡಿಕೊಳ್ಳಲಾಗಿತ್ತು. ಹಲವು ವರ್ಷಗಳಿಂದ ಇಲ್ಲಿ ರೈಲ್ವೆ ಕೂಲಿಗಳು ಪ್ರಾರ್ಥನೆ ಮಾಡುತ್ತಿದ್ದರು. ಆದ್ರೆ ಇತ್ತೀಚೆಗೆ ಈ ವಿಡಿಯೋ ವೈರಲ್ ಆಗಿದ್ದು, ರೈಲು ನಿಲ್ದಾಣದಲ್ಲಿ ಪ್ರಾರ್ಥನೆಗೆ ಅವಕಾಶ ಕೊಟ್ಟಿದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು.
ಈ ಬೆನ್ನಲ್ಲೇ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಕೂಡಾ ಸ್ಥಳಕ್ಕೆ ಹೋಗಿ ಪ್ರತಿಭಟನೆ ನಡೆಸಿದ್ದರು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ ರೈಲ್ವೆ ಇಲಾಖೆ ಮಂತ್ರಿಗೆ ಈ ಬಗ್ಗೆ ಪತ್ರವನ್ನೂ ಬರೆದಿದ್ದರು. ಈ ಹಿನ್ನೆಲೆಯಲ್ಲಿ ರೈಲ್ವೆ ಅಧಿಕಾರಿಗಳು ಪ್ರಾರ್ಥನೆ ಮಾಡುತ್ತಿದ್ದ ಸ್ಥಳವನ್ನು ತೆರವುಗೊಳಿಸಿದ್ದಾರೆ. ಈ ಜಾಗವನ್ನು ನೌಕರರ ವಿಶ್ರಾಂತಿಗೆ ಮಾತ್ರ ಸೀಮಿತಗೊಳಿಸಲಾಗಿದೆ.