ಜೈಲು ಸೇರಿದ್ದ ವಿದ್ಯಾರ್ಥಿನಿಗೆ ಟಿಕೆಟ್ ನೀಡಿದ ಅಖಿಲೇಶ್ ಯಾದವ್
ಲಖನೌ: ಉತ್ತರ ಪ್ರದೇಶ ಚುನಾವಣೆಯಲ್ಲಿ ಅಚ್ಚರಿ ಮುಖಗಳೆಲ್ಲಾ ಕಾಣಿಸಿಕೊಳ್ಳುತ್ತಿವೆ. ಹೊಸಬರನ್ನು, ವಿವಾದಿತರನ್ನು, ಸಂತ್ರಸ್ತರನ್ನು ಹುಡುಕಿ ಹುಡುಕಿ ಪಕ್ಷಗಳು ಟಿಕೆಟ್ ನೀಡುತ್ತಿವೆ. ಸಮಾಜವಾದಿ ಪಾರ್ಟಿ ಕೂಡಾ ಇದೀಗ ಅಂತದ್ದೇ ಅಭ್ಯರ್ಥಿಯೊಬ್ಬರಿಗೆ ಮಣೆ ಹಾಕಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಕಪ್ಪು ಬಟ್ಟೆ ತೋರಿಸಿ, ಜೈಲು ವಾಸ ಅನುಭವಿಸಿದ್ದ ವಿದ್ಯಾರ್ಥಿನಿಗೆ ಸಮಾಜವಾದಿ ಪಾರ್ಟಿ ಟಿಕೆಟ್ ನೀಡಿದೆ.
ಲಖನೌ ಉತ್ತರ ವಿಧಾನಸಭಾ ಕ್ಷೇತ್ರದಿಂದ ಪೂಜಾ ಶುಕ್ಲಗೆ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಟಿಕೆಟ್ ನೀಡಿದ್ದಾರೆ. 2017ರಲ್ಲಿ ಲಖನೌ ವಿಶ್ವವಿದ್ಯಾಲಯದಲ್ಲಿ ಹಿಂದಿ ಸ್ವರಾಜ್ ದಿವಸ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾಲ್ಗೊಂಡಿದ್ದರು. ಈ ವೇಳೆ ಸಮಾಜವಾದಿ ಪಾರ್ಟಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಇದಕ್ಕೆ ಕೆಲ ವಿದ್ಯಾರ್ಥಿಗಳೂ ಬೆಂಬಲ ಸೂಚಿಸಿದ್ದರು. ಇದ್ರಲ್ಲಿ ಪೂಜಾ ಶುಕ್ಲಾ ಕೂಡಾ ಒಬ್ಬರು. ಈ ವೇಳೆ ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ ಕಾರಣಕ್ಕೆ ಹಲವರನ್ನು ಬಂಧಿಸಲಾಗಿತ್ತು. ಅದ್ರಲ್ಲಿ ಪೂಜಾ ಕೂಡಾ ಒಬ್ಬರಾಗಿದ್ದರು.
ಇಪ್ಪತ್ತು ದಿನ ಜೈಲು ವಾಸ ಅನುಭವಿಸಿ ಬಂದಿದ್ದ ಪೂಜಾ ಶುಕ್ಲಾಗೆ ಈಗ ಅದೃಷ್ಟ ಒಲಿದುಬಂದಿದೆ. ಅಖಿಲೇಶ್ ಯಾದವ್ ಅವರೇ ಕರೆದು ಟಿಕೆಟ್ ನೀಡಿದ್ದಾರೆ. ಆದರೆ ಆಕೆ ಗೆಲ್ಲುತ್ತಾರಾ..? ನೋಡಬೇಕು.