ಬಹುತೇಕ ಎಲ್ಲಾ ಕಡೆ ಶಾಂತಿಯುತ ಮತದಾನ; ವಿಜಯಪುರದಲ್ಲಿ ಮತಯಂತ್ರ ಪುಡಿಪುಡಿ
ಬೆಂಗಳೂರು; ಮಧ್ಯಾಹ್ನದ ಸಮಯದಲ್ಲಿ ಬಹುತೇಕ ಮತದಾನ ನೀರಸವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಮಧ್ಯಾಹ್ನದ ಸಮಯದಲ್ಲಿ ಕಡಿಮೆ ಮತದಾನ ಆಗುತ್ತಿದೆ. ಇದುವರೆಗೆ ರಾಜ್ಯಾದ್ಯಂತ ಶೇ.37ರಷ್ಟು ಮತದಾನ ಆಗಿದೆ ಎಂದು ತಿಳಿದುಬಂದಿದೆ. ಬಹುತೇಕ ಎಲ್ಲಾ ಕಡೆ ಶಾಂತಿಯುತ ಮತದಾನ ನಡೆಯುತ್ತಿದೆ. ಈ ನಡುವೆ ಅಲ್ಲಲ್ಲಿ ಕೆಲ ಅಹಿತಕರ ಘಟನೆಗಳು ನಡೆದಿವೆ.
ವಿಜಯಪುರ ಜಿಲ್ಲೆಯಲ್ಲಿ ಗ್ರಾಮಸ್ಥರು ಮತಯಂತ್ರವನ್ನೇ ಒಡೆದುಹಾಕಿದ್ದಾರೆ. ಬಸವನಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಈ ಘಟನೆ ನಡೆದಿರೋದು. ಕಾಯ್ದಿರಿಸಲಾಗಿದ್ದ ಮತಯಂತ್ರ ಹಾಗೂ ವಿವಿಪ್ಯಾಟ್‌ನ್ನು ಗ್ರಾಮಸ್ಥರು ಪುಡಿಪುಡಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮೈಸೂರಿನ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಬೂತ್ ಪರಿಶೀಲನೆಗೆ ಬಂದಿದ್ದರು. ಈ ವೇಳೆ ಜಗಳವಾಗಿದೆ. ಕಾರ್ಯಕರ್ತರು ಬೂತ್ ಪರಿಶೀಲನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದೆ.
ಇನ್ನು ರಾಯಚೂರು ಜಿಲ್ಲೆ ಲಿಂಗಸಗೂರುನಲ್ಲಿ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಬಿಜೆಪಿ ಪಕ್ಷದ ಬಾವುಟ ಇರುವ ಕಾರಿನಲ್ಲಿ ಮತಗಟ್ಟೆಗೆ ಆಗಮಿಸಿದ್ದರು. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಮಾತಿನ ಚಕಮಕಿ ನಡೆದಿದೆ.