BengaluruPolitics

ಜೆಡಿಎಸ್‌ನ 13 ಶಾಸಕರನ್ನು ಸೆಳೆಯಲು ಕಾಂಗ್ರೆಸ್‌ ಮೆಗಾ ಪ್ಲ್ಯಾನ್‌; ಡಿಕೆಶಿ ರಣತಂತ್ರವೇನು ಗೊತ್ತಾ..?

ಬೆಂಗಳೂರು; ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ಬಿಜೆಪಿ ಶಾಸಕರನ್ನು ಸೆಳೆಯೋ ಪ್ರಯತ್ನ ಮಾಡುತ್ತಿರುವುದು ಗೊತ್ತಿರುವ ವಿಚಾರವೇ. ಆದ್ರೆ ಬರೀ ಬಿಜೆಪಿ ಶಾಸಕರಷ್ಟೇ ಅಲ್ಲ, ಜೆಡಿಎಸ್‌ ಶಾಸಕರನ್ನೂ ಕಾಂಗ್ರೆಸ್‌ ತೆಕ್ಕೆಗೆ ತೆಗೆದುಕೊಳ್ಳಲು ಮೆಗಾ ಪ್ಲ್ಯಾನ್‌ ನಡೀತಿರುವ ಬಗ್ಗೆ ಸುದ್ದಿಗಳು ಹರಿದಾಡಲಾರಂಭಿಸಿವೆ. ರಾಜ್ಯ ರಾಜಕೀಯ ವಲಯದಲ್ಲಿ ಈ ಬಗ್ಗೆ ಕುತೂಹಲದ ಚರ್ಚೆಗಳೂ ನಡೆಯುತ್ತಿದೆ. ಅಂದಹಾಗೆ, ಬಿಜೆಪಿ ಶಾಸಕರು ಕಾಂಗ್ರೆಸ್‌ ಸೇರೋದಾದರೆ ಅವರು ಶಾಸಕತ್ವಕ್ಕೆ ರಾಜೀನಾಮೆ ಪಕ್ಷಕ್ಕೆ ಬರಬೇಕಾಗುತ್ತದೆ. ಆದ್ರೆ, ಜೆಡಿಎಸ್‌ ಶಾಸಕರು ರಾಜೀನಾಮೆ ನೀಡುವ ಅಗತ್ಯ ಬರೋದಿಲ್ಲ. ಯಾಕಂದ್ರೆ, ಜೆಡಿಎಸ್‌ ಮೂರನೇ ಎರಡರಷ್ಟು ಶಾಸಕರನ್ನು ಕಾಂಗ್ರೆಸ್‌ಗೆ ಸೆಳೆಯೋದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಮೆಗಾ ತಂತ್ರಗಾರಿಕೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಜನಪ್ರತಿನಿಧಿಗಳು ತಮ್ಮ ಸ್ಥಾನವನ್ನು ಉಳಿಸಿಕೊಂಡು ಪಕ್ಷಾಂತರ ಮಾಡಬೇಕಾದರೆ, ಪಕ್ಷದ ಒಟ್ಟು ಸ್ಥಾನಗಳಲ್ಲಿ ಮೂರನೇ ಎರಡರಷ್ಟು ಮಂದಿ ಪಕ್ಷಾಂತರ ಮಾಡಿದರೆ ಯಾವುದೇ ತೊಂದರೆ ಇರೋದಿಲ್ಲ. ಇಲ್ಲದೇ ಹೋದರೆ, ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಅವರ ಶಾಸಕ ಸ್ಥಾನ ಅನರ್ಹವಾಗುತ್ತದೆ. ಹೀಗಾಗಿ, ಜೆಡಿಎಸ್‌ ಇರೋದು ಕೇವಲ 19 ಶಾಸಕರು. ಇದರಲ್ಲಿ ಮೂರನೇ ಎರಡರಷ್ಟು ಅಂದ್ರೆ 13 ಶಾಸಕರನ್ನು ಸೆಳೆದರೆ, ಇಡೀ ಪಕ್ಷವೇ ಕಾಂಗ್ರೆಸ್‌ ಜೊತೆ ವಿಲೀನ ಆದಂತೆ ಲೆಕ್ಕ. ಆಗ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ. ಹೀಗಾಗಿಯೇ, ಡಿ.ಕೆ.ಶಿವಕುಮಾರ್‌ ಸೇರಿ ಹಲವು ಕಾಂಗ್ರೆಸ್‌ ನಾಯಕರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿಯಾಗಿ ನಿಲ್ಲೋ ಪಕ್ಷ ಜೆಡಿಎಸ್‌. ಅದರ ಶಕ್ತಿ ಸಂಪೂರ್ಣವಾಗಿ ಕುಂದಿಸಿದರೆ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಸಂಪೂರ್ಣ ಪ್ರಾಬಲ್ಯ ಪಡೆಯಬಹುದು. ಈ ಕಾರಣಕ್ಕಾಗಿ ಕಾಂಗ್ರೆಸ್‌ ನಾಯಕರು ಜೆಡಿಎಸ್‌ನ 13 ಶಾಸಕರನ್ನು ಕಾಂಗ್ರೆಸ್‌ಗೆ ಸೆಳೆಯೋದಕ್ಕೆ ಮುಂದಾಗಿದ್ದಾರೆ. ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಎಂಟು ಜೆಡಿಎಸ್‌ ಶಾಸಕರನ್ನು ಸಂಪರ್ಕ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಐದಾರು ಶಾಸಕರನ್ನು ಸಂಪರ್ಕಿಸಿ, ಒಟ್ಟು 13 ಶಾಸಕರನ್ನು ಪಕ್ಷಕ್ಕೆ ಕರೆತರಲು ಯತ್ನಿಸಲಾಗುತ್ತಿದೆ ಎನ್ನಲಾಗಿದೆ. ಇದಕ್ಕಾಗಿ ಜೆಡಿಎಸ್‌ನಲ್ಲಿರುವ ಪ್ರಬಲ ಶಾಸಕರನ್ನು ಸಂಧಾನಕ್ಕಾಗಿ ಬಳಸಿಕೊಳ್ಳಲಾಗುತ್ತಿದೆಯಂತೆ.

ಅಂದಹಾಗೆ, ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಬಿಜೆಪಿಗಿಂತ ಹೆಚ್ಚಾಗಿ ಕುಮಾರಸ್ವಾಮಿಯವರು ಸರ್ಕಾರ ಮುಗ್ಗುಲ ಮುಳ್ಳಾಗಿದ್ದಾರೆ. ಟ್ರಾನ್ಸ್‌ಫರ್‌ ದಂಧೆ ಆರೋಪ ಮಾಡುತ್ತಾ ಬಂದಿರುವ ಕುಮಾರಸ್ವಾಮಿಯವರು, ಪೆನ್‌ ಡ್ರೈವ್‌ ಒಂದನ್ನು ತೋರಿಸಿ ಸಾಕ್ಷ್ಯ ಬಿಡುಗಡೆ ಮಾಡುವ ಬಾಂಬ್‌ನ್ನೂ ಸಿಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ಕುಮಾರಸ್ವಾಮಿಯವರ ಬಡಕ್ಕೇ ಕೈ ಹಾಕಿದ್ದಾರೆ ಎನ್ನಲಾಗಿದೆ.

ರಾಮನಗರದಲ್ಲಿ ಪುತ್ರ ನಿಖಿಲ್‌ ಕುಮಾರಸ್ವಾಮಿಯವರನ್ನು ಸೋಲಿಸುವಲ್ಲಿ ಡಿಕೆ ಬ್ರದರ್ಸ್‌ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಕಾರಣಕ್ಕಾಗಿ ಡಿಕೆ ಬ್ರದರ್ಸ್‌ ಮೇಲೆ ಕುಮಾರಸ್ವಾಮಿ ಕೆಂಡಕಾರುತ್ತಿದ್ದಾರೆ. ನಿತ್ಯ ಒಂದಿಲ್ಲೊಂದು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಸಹಾಯ ಪಡೆದು ಕಾಂಗ್ರೆಸ್‌ ವಿರುದ್ಧ ಆರೋಪಗಳ ಸುರಿಮಳೆಗೈಯ್ಯುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಕಾಂಗ್ರೆಸ್‌ಗೆ ತಲೆನೋವೇ ಆಗಿದೆ. ಹೀಗಾಗಿ, ಜೆಡಿಎಸ್‌ ನ ಬಹುತೇಕ ಶಾಸಕರನ್ನು ಸೆಳೆದರೆ ಕುಮಾರಸ್ವಾಮಿಯವರ ಶಕ್ತಿ ಕುಂದುತ್ತದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ಗೆ ಇದ್ದಂತಿದೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಕನಿಷ್ಠ 20 ಸ್ಥಾನ ಗೆಲ್ಲಿಸಿಕೊಂಡು ಬರುವಂತೆ ಕಾಂಗ್ರೆಸ್‌ ಹೈಕಮಾಂಡ್‌ ಟಾಸ್ಕ್‌ ನೀಡಿದೆ. ಈ ಹಿನ್ನೆಲೆಯಲ್ಲಿ ಆಪರೇಷನ್‌ ಹಸ್ತ ಮಾಡಿ, ಲೋಕಸಭಾ ಚುನಾವಣೆ ಹೆಚ್ಚು ಸೀಟು ಕಾಂಗ್ರೆಸ್‌ಗೆ ಬರುವಂತೆ ಮಾಡಿ, ಹೈಕಮಾಂಡ್‌ ಬಳಿ ಒಳ್ಳೆ ಮೈಲೇಜ್‌ ಗಿಟ್ಟಿಸಿಕೊಳ್ಳಲು ಡಿ.ಕೆ.ಶಿವಕುಮಾರ್‌ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

 

Share Post