ಡಿ.ಕೆ.ಶಿವಕುಮಾರ್‌ಗೆ ಕೊಟ್ಟಿರುವ ನಿವಾಸಕ್ಕೆ ಬೇಡಿಕೆ ಇಟ್ಟ ವಿಪಕ್ಷ ನಾಯಕ ಆರ್.ಅಶೋಕ್
ಬೆಂಗಳೂರು; ಇತ್ತೀಚೆಗೆ ವಿಪಕ್ಷ ನಾಯಕರಾಗಿ ಅಧಿಕಾರ ಸ್ವೀಕಾರ ಮಾಡಿರುವ ಆರ್.ಅಶೋಕ್ ಅವರು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಹಂಚಿಕೆಯಾಗಿರುವ ನಿವಾಸಕ್ಕೆ ಬೇಡಿಕೆ ಇಟ್ಟಿದ್ದಾರೆ. ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆದಿರುವ ವಿಪಕ್ಷ ನಾಯಕಿ ಆರ್.ಅಶೋಕ್, ಕುಮಾರಕೃಪಾ ದಕ್ಷಿಣದಲ್ಲಿರುವ ನಂಬರ್ 1 ಸರ್ಕಾರಿ ಬಂಗಲೆಯನ್ನು ನೀಡುವಂತೆ ಕೇಳಿದ್ದಾರೆ. ಈ ಬಂಗಲೆಯನ್ನು ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ನೀಡಲಾಗಿದೆ. ಈಗ ಅದನ್ನೇ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಈ ನಿವಾಸದಲ್ಲಿದ್ದು ಎರಡು ಬಾರಿ ಸಿಎಂ ಆಗಿದ್ದರು. ಹೀಗಾಗಿ ಅದೃಷ್ಟ ಎಂದು ಭಾವಿಸಿ ಆರ್.ಅಶೋಕ್ ಈ ನಿವಾಸ ಕೇಳಿದ್ದಾರೆ ಎನ್ನಲಾಗುತ್ತಿದೆ.
ಇನ್ನೊಂದೆಡೆ ಇದರ ಜೊತೆಗೆ ಇನ್ನೂ ಎರಡು ನಿವಾಸಗಳನ್ನು ಆಪ್ಷನ್ ಆಗಿ ಕೇಳಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್ನಲ್ಲಿ ನಂಬರ್ 1 ಮತ್ತು ನಂಬರ್ 3 ಈ ಎರಡರಲ್ಲಿ ಒಂದನ್ನಾದರೂ ಕೊಡಿ ಎಂದೂ ಆರ್.ಅಶೋಕ್ ಕೇಳಿದ್ದಾರೆ. ಈ ಎರಡು ಬಂಗಲೆಗಳು ಕೂಡಾ ಈಗಾಗಲೇ ಸಚಿವರಿಗೆ ಹಂಚಿಕೆಯಾಗಿವೆ.ರೇಸ್ ವ್ಯೂ ಕಾಟೇಜ್ನ ನಂಬರ್ 1ನಲ್ಲಿ ಸಚಿವ ಎಂ.ಬಿ.ಪಾಟೀಲ್ ಇದ್ದರೆ, ನಂಬರ್ 3ರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಇದ್ದಾರೆ.
ಜಯಮಹಲ್ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆ ಆಯ್ದುಕೊಳ್ಳುವಂತೆ ಸರ್ಕಾರ ಆರ್.ಅಶೋಕ್ ಅವರಿಗೆ ಸಲಹೆ ನೀಡಿದೆ. ಆದ್ರೆ ಆರ್.ಅಶೋಕ್ ಮಾತ್ರ, ಮೇಲೆ ಹೇಳಿದ ಮೂರು ಬಂಗಲೆಗಳಲ್ಲಿ ಒಂದನ್ನು ನೀಡುವಂತೆ ಪಟ್ಟು ಹಿಡಿದಿದ್ದಾರೆ. ಅದರಲ್ಲೂ ಫಸ್ಟ್ ಆಪ್ಷನ್ ಆಗಿ ಡಿ.ಕೆ.ಶಿವಕುಮಾರ್ ಇರುವ ನಿವಾಸದ ಮೇಲೆ ಕಣ್ಣಿಟ್ಟಿದ್ದಾರೆ.