ಪರಿಶಿಷ್ಟ ಜಾತಿಗೆ ಕೊಟ್ಟಿರುವ ಒಳ ಮೀಸಲಾತಿ ಪುನರ್ ಪರಿಶೀಲನೆ; ಡಾ.ಜಿ.ಪರಮೇಶ್ವರ್
ಬೆಂಗಳೂರು; ಕಳೆದ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡಲಾಗಿತ್ತು. ಇದನ್ನು ಪುನರ್ ಪರಿಶೀಲನೆ ಮಾಡಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಬಿಜೆಪಿ ಸರ್ಕಾರ ಕಾನೂನಾತ್ಮಕವಾಗಿ ಒಳಮೀಸಲಾತಿ ಕೊಟ್ಟಿಲ್ಲ. ಹೀಗಾಗಿ ಇದನ್ನು ನಾವು ಪುನರ್ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಬಗ್ಗೆ ಅಂತಿಮ ನಿರ್ಧಾರ ಆಗಬೇಕಿದೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ನಮ್ಮ ಹಿಂದಿನ ಸರ್ಕಾರದ ವೇಳೆ ನಡೆದ ಚಿತ್ರದುರ್ಗ ಸಮಾವೇಶದಲ್ಲಿ ಸದಾಶಿವ ಆಯೋಗದ ನಿರ್ಣಯ ಕೈಗೊಳ್ಳಲು ತೀರ್ಮಾನಿಸಿದ್ದೆವು. ಆದ್ರೆ ಬೊಮ್ಮಾಯಿ ಅವರು ಸದಾಶಿವ ಆಯೋಗದ ವರದಿಯನ್ನೇ ತಿರಸ್ಕಾರ ಮಾಡಿದ್ದಾರೆ. ಒಳಮೀಸಲಾತಿ ನೀಡುವಾಗ ಕಾನೂನಾತ್ಮಕವಾಗಿ ಮಾಡಬೇಕು. ಸಂವಿಧಾನಕ್ಕೆ ನಾವೇ ತಿದ್ದುಪಡಿ ತರೋದಕ್ಕೆ ಆಗೋದಿಲ್ಲ. ಹೀಗಾಗಿ ಸಂವಿಧಾನ ತಿದ್ದುಪಡಿಗೆ ಕೇಂದ್ರಕ್ಕೆ ಶಿಫಾರಸು ಕಳಿಸುವ ಬಗ್ಗೆ ಇಂದಿನ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.