ಲೋಸಕಭಾ ಚುನಾವಣೆ, ಭಾರತ್ ನ್ಯಾಯ್ ಯಾತ್ರೆಗೆ ಸಿದ್ಧತೆ; ದೆಹಲಿಯಲ್ಲಿ ಕಾಂಗ್ರೆಸ್ ಮಹತ್ವದ ಸಭೆ
ನವದೆಹಲಿ; ಲೋಕಸಭಾ ಚುನಾವಣೆ ಗೆಲ್ಲೋದಕ್ಕೆ ಕಾಂಗ್ರೆಸ್ ನಾನಾ ಕಸರತ್ತು ನಡೆಸುತ್ತಿದೆ. ಇದರ ಜೊತೆಗೆ ರಾಹುಲ್ ಗಾಂಧಿ ನಡೆಸುವ ಭಾರತ್ ನ್ಯಾಯ್ ಯಾತ್ರೆಗೂ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಇದರ ಭಾಗವಾಗಿ ಇಂದು ಎಲ್ಲಾ ರಾಜ್ಯಗಳ ಕಾಂಗ್ರೆಸ್ ನಾಯಕರ ಸಭೆ ನಡೆಸಲಾಗುತ್ತಿದೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ಕರ್ನಾಟಕದಿಂದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದಾರೆ.
ಎಐಸಿಸಿ ಕಚೇರಿಯಲ್ಲಿ ಇಂದು ಹಾಗೂ ನಾಳೆ ಮಹತ್ವ ಸಭೆ ನಡೆಯಲಿದೆ. ಈಗಾಗಲೇ ಲೋಕಸಭಾ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಎಲ್ಲಾ ರಾಜ್ಯಗಳಿಂದ ತಯಾರು ಮಾಡಿ ಕಳುಹಿಸಲಾಗಿದೆ. ಕರ್ನಾಟಕದಲ್ಲೂ ಕೂಡಾ ವೀಕ್ಷಕರನ್ನು ಕಳುಹಿಸಿ ಎಲ್ಲಾ ಕ್ಷೇತ್ರಗಳಲ್ಲೂ ಮೀಟಿಂಗ್ಗಳನ್ನು ನಡೆಸಿ, ಕ್ಷೇತ್ರಕ್ಕೆ ಇಬ್ಬರು, ಮೂವರು ಹೆಸರುಗಳ ಪಟ್ಟಿಯನ್ನು ತಯಾರು ಮಾಡಲಾಗಿದೆ. ಅದನ್ನು ಹೈಕಮಾಂಡ್ಗೆ ನೀಡಲಾಗಿದೆ.
ಇನ್ನು ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಹೆಚ್ಚು ಸ್ಥಾನ ಗೆಲ್ಲೋದಕ್ಕೆ ಕಾಂಗ್ರೆಸ್ ಏನು ಮಾಡಬೇಕು ಎಂಬುದರ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಹಾಲಿ ಸಚಿವರನ್ನೇ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿದರೆ ಹೇಗೆ ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ. ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, ಇದರಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಲೇಬೇಕೆಂದು ಕಾಂಗ್ರೆಸ್ ಪಣ ತೊಟ್ಟಿದೆ. ಆದ್ರೆ ಆಂತರಿಕ ಸಮೀಕ್ಷೆಯಲ್ಲಿ ಪೂರಕ ವರದಿ ಬಂದಿಲ್ಲ. ಹೀಗಾಗಿ ಗೆಲ್ಲುವ ಅಭ್ಯರ್ಥಿಗಳ ಕುರಿತಂತೆ ಚರ್ಚೆ ನಡೆಯಲಿದೆ.