ಕಾಂಗ್ರೆಸ್ ಸೇರ್ಪಡೆ ನಂತರ ಸೋನಿಯಾ ಭೇಟಿಯಾದ ವೈ.ಎಸ್.ಶರ್ಮಿಳಾ
ನವದೆಹಲಿ; ತೆಲಂಗಾಣದಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್ ಪಾರ್ಟಿ, ಪಕ್ಕದ ಆಂಧ್ರಪ್ರದೇಶ ಕೂಡಾ ಗೆಲ್ಲೋದಕ್ಕೆ ಸಾಕಷ್ಟು ತಂತ್ರಗಾರಿಕೆ ಶುರು ಮಾಡಿದೆ. ಶೀಘ್ರದಲ್ಲೇ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕಾಗಿ ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅದರ ಭಾಗವಾಗಿ ತೆಲಂಗಾಣದಲ್ಲಿ ವೈಎಸ್‌ಆರ್ ತೆಲಂಗಾಣ ಪಾರ್ಟಿ ಕಟ್ಟಿದ್ದ ವೈಎಸ್‌ಆರ್ ಪುತ್ರಿ ಶರ್ಮಿಳಾ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇಂದು ಎಐಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ವೈಎಸ್‌ಆರ್ ತೆಲಂಗಾಣ ಪಾರ್ಟಿಯಲ್ಲಿ ಕಾಂಗ್ರೆಸ್ ಜೊತೆ ವಿಲೀನ ಮಾಡಲಾಯಿತು.
ಇನ್ನು ಕಾಂಗ್ರೆಸ್ ಸೇರ್ಪಡೆಯ ನಂತರ ಶರ್ಮಿಳಾ ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಆಂಧ್ರಪ್ರದೇಶದ ರಾಜಕೀಯ ಪರಿಸ್ಥಿತಿ ಬಗ್ಗೆ ಮಾತುಕತೆ ನಡೆಸಿದರು. ಅಂದಹಾಗೆ, ಶರ್ಮಿಳಾಗೂ ಆಂಧ್ರ ಸಿಎಂ ಹಾಗೂ ಸಹೋದರ ಜಗನ್ ಮೋಹನ್ ರೆಡ್ಡಿಗೂ ವೈಮನಸ್ಯವಿದೆ. ಇದರ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿದೆ.
ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಪಾರ್ಟಿ ಅಧಿಕಾರಕ್ಕೆ ತರುವುದರಲ್ಲಿ ಶರ್ಮಿಳಾ ಪಾತ್ರ ದೊಡ್ಡದಿದೆ. ಜಗನ್ ಜೈಲಿನಲ್ಲಿದ್ದಾಗ ಶರ್ಮಿಳಾ ಸಹೋದರನ ಪರವಾಗಿ 3000 ಕಿಲೋ ಮೀಟರ್ ಪಾದಯಾತ್ರೆ ನಡೆಸಿದ್ದರು. ಅನಂತರ ಚುನಾವಣೆ ವೇಳೆ ಬಸ್ ಯಾತ್ರೆ ನಡೆಸಿ ಪಕ್ಷ ಸಂಘಟನೆ ಮಾಡಿದ್ದರು. ಆದ್ರೆ ಗೆದ್ದ ಮೇಲೆ ಜಗನ್ ಸಹೋದರಿಯನ್ನು ದೂರ ಇಟ್ಟಿದ್ದರು. ಈ ಕಾರಣಕ್ಕಾಗಿ ಶರ್ಮಿಳಾ ಅಣ್ಣನ ವಿರುದ್ಧ ತೊಡೆತಟ್ಟಿದ್ದಾರೆ. ಮಾಹಿತಿ ಪ್ರಕಾರ ಜಗನ್ ವಿರುದ್ಧವೇ ಶರ್ಮಿಳಾ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.