BengaluruPolitics

NewsX Kannada Special; ಬೆಂಗಳೂರಲ್ಲಿ ಮೋದಿ ಅಹಮದಾಬಾದ್‌ ಸ್ಟ್ರ್ಯಾಟಜಿ; ಏನಿದು 40 ಕಿ.ಮೀ., 25 ಸೀಟು ಸೂತ್ರ..?

ಬೆಂಗಳೂರು; ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಭಾರಿ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಅವರ ಜನಪ್ರಿಯತೆ ಹಾಗೆಯೇ ಇದೆ. ಮೋದಿ ಬರುತ್ತಾರೆ ಎಂದರೆ ಅಲ್ಲಿ ಜನ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರುತ್ತಾರೆ. ಹೀಗಾಗಿಯೇ ರಾಜ್ಯ ಬಿಜೆಪಿ ನಾಯಕರು ಈ ಬಾರಿ ಮೋದಿಯವರನ್ನೇ ಹೆಚ್ಚು ನಂಬಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಪಣ ತೊಟ್ಟಂತೆ ಕಾಣುತ್ತಿದೆ. ಅದಕ್ಕಾಗಿ ಅವರು ನಿರಂತರವಾಗಿ ರಾಜ್ಯವನ್ನು ಸುತ್ತಾಡುತ್ತಿದ್ದಾರೆ. ಪ್ರಖರ ಭಾಷಣಗಳನ್ನು ಮಾಡುವ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ. ಈಗಾಗಲೇ ಅವರು ಹದಿನೈದಕ್ಕೂ ಹೆಚ್ಚು ರ್ಯಾಲಿಗಳಲ್ಲಿ ನಡೆಸಿದ್ದಾರೆ. ಕಾಂಗ್ರೆಸ್‌ ವಿರುದ್ಧ ವಾಗ್ಯುದ್ಧಗಳನ್ನು ಮಾಡುತ್ತಿದ್ದಾರೆ.

ಇದೀಗ ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಮೋದಿಯವರು ಮೇ 6 ರಂದು ಕರ್ನಾಟಕ ಪ್ರವಾಸವನ್ನು ಅಂತ್ಯಗೊಳಿಸಲಿದ್ದಾರೆ. ಅಂದು ಅವರು ಬೆಂಗಳೂರಲ್ಲಿ ಮೆಗಾ ರೋಡ್‌ ಶೋ ಹಮ್ಮಿಕೊಂಡಿದ್ದಾರೆ. ಇದರ ಹಿಂದೆ ಭಾರಿ ಸ್ಟ್ರ್ಯಾಟಜಿ ಅಡಗಿದೆ. ಅಹಮದಾಬಾದ್‌ನಲ್ಲಿ ಆಯೋಜಿಸಿದ್ದ ಭಾರಿ ರೋಡ್‌ ಶೋನಿಂದಾಗಿ ಬಿಜೆಪಿಗೆ ಅಂದು ದೊಡ್ಡ ಮಟ್ಟದಲ್ಲಿ ಗೆಲುವು ಸಿಕ್ಕಿತ್ತು. ಅದೇ ಸ್ಟ್ರಾಟಜಿಯನ್ನು ಮೋದಿ ಬೆಂಗಳೂರಿನಲ್ಲಿ ಉಪಯೋಗಿಸಲು ಹೊರಟಿದ್ದಾರೆ. ಅದಕ್ಕಾಗಿ ಮೆಗಾ ಪ್ಲ್ಯಾನ್‌ ಈಗಾಗಲೇ ರೆಡಿಯಾಗಿದೆ.

ಕಳೆದ ವರ್ಷ ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಅದ್ರಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿತ್ತು. ಭಾರಿ ಬಹುಮತ ಬರೋದಕ್ಕೆ ಕಾರಣ ಮೋದಿಯವರ ಮೆಗಾ ಪ್ಲ್ಯಾನ್‌. ಗುಜರಾತ್‌ ಚುನಾವಣೆ ವೇಳೆ ಮೋದಿಯವರು ಅಹಮದಾಬಾದ್‌ನಲ್ಲಿ ಮೆಗಾ ರೋಡ್‌ ಶೋ ನಡೆಸಿದ್ದರು. ಅದು 50 ಕಿಲೋ ಮೀಟರ್‌ ಬೃಹತ್‌ ರೋಡ್‌ ಶೋ ಆಗಿತ್ತು. ಸುಮಾರು 13 ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಮೋದಿ ಅಂದು ರೋಡ್‌ ಶೋ ಮಾಡಿದ್ದರು. ಅಂದು ಮೋದಿ ರೋಡ್‌ ಶೋನಲ್ಲಿ ಭಾರಿ ಜನಸ್ತೋಮ ಸೇರಿತ್ತು… ಅಂದು ಅವರು ಮಾಡಿದ ಹಲವು ಭಾಷಣಗಳು ಜನರನ್ನು ಸಾಕಷ್ಟು ಸೆಳೆದಿದ್ದವು. ಅಂದಿನ ಮೋದಿ ಭಾಷಣಗಳು ಫಲಿತಾಂಶವನ್ನು ಉಲ್ಟಾ ಮಾಡಿದ್ದವು. ಆ ಹದಿಮೂರು ಕ್ಷೇತ್ರಗಳಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರಿ ಮತಗಳ ಅಂತರದಿಂದ ಗೆದ್ದಿದ್ದರು.

ಇದೀಗ ಮೋದಿ ಅದೇ ಅಸ್ತ್ರವನ್ನು ಬೆಂಗಳೂರಿನಲ್ಲಿ ಉಪಯೋಗಿಸಲು ಹೊರಟಿದ್ದಾರೆ. ಮೇ 6ರಂದು ಮೋದಿ ಬೆಂಗಳೂರು ನಗರದಲ್ಲಿ ಬೃಹತ್‌ ರೋಡ್‌ ಶೋ ನಡೆಸಲು ಸಿದ್ಧತೆ ನಡೆಸಿದ್ದಾರೆ. ಸುಮಾರು 40 ಕಿಲೋ ಮೀಟರ್‌ ರೋಡ್‌ ಶೋ ಅದಾಗಿದ್ದು, ಹಲವು ಕಡೆ ಅವರು ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. ವಿಷ ಸರ್ಪ, ಬಜರಂಗದಳ ನಿಷೇಧ ಸೇರಿದಂತೆ ಕಾಂಗ್ರೆಸ್‌ ವಿರುದ್ಧ ಹರಿಹಾಯಲು ಮೋದಿಗೆ ಹಲವು ಅಸ್ತ್ರಗಳು ಸಿಕ್ಕಿವೆ. ಅವುಗಳನ್ನೇ ಇಟ್ಟುಕೊಂಡು ಮೋದಿ ಪ್ರಖರ ಭಾಷಣ ಮಾಡಲು ಸಿದ್ಧತೆ ನಡೆಸಿದ್ದಾರೆ.

ಅಂದಹಾಗೆ ಬೆಂಗಳೂರು ನಗರದಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಸದ್ಯ ಬಿಜೆಪಿ 15 ಸ್ಥಾನಗಳನ್ನು ಹೊಂದಿದೆ. ಇದನ್ನು 25ಕ್ಕೆ ಏರಿಸಬೇಕೆಂಬ ಕನಸು ಮೋದಿಯವರದ್ದು. ಕೆಲವು ಕ್ಷೇತ್ರಗಳಲ್ಲಿ ನೆಕ್‌ ಟು ನೆಕ್‌ ಫೈಟ್‌ ಇದೆ. ಅಂತಹ ಕ್ಷೇತ್ರಗಳಲ್ಲಿ ಮೋದಿ ಮೇನಿಯಾ ವರ್ಕೌಟ್‌ ಆಗೋ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ ಮತದಾನಕ್ಕೆ ನಾಲ್ಕು ದಿನದ ಮುಂದೆ ಮೋದಿ ಮೆಗಾ ರೋಡ್‌ ಶೋ ಹಮ್ಮಿಕೊಂಡಿದ್ದಾರೆ.

ಮೇ 6ರಂದು ಮೋದಿಯವರು ಬೆಂಗಳೂರಿನಲ್ಲಿ ಬೆಳಗ್ಗೆ ಹಾಗೂ ಸಂಜೆ ಎರಡು ಹಂತದಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಅಂದು ಬೆಳಗ್ಗೆ ನಡೆಯು ರೋಡ್‌ ಶೋ 8 ಕಿಲೋ ಮೀಟರ್‌ ನಡೆಯಲಿದೆ. ಇದಕ್ಕಾಗಿ ಈಗಾಗಲೇ ರೂಟ್‌ ಮ್ಯಾಪ್‌ ಸಿದ್ಧ ಮಾಡಲಾಗಿದೆ. ಇನ್ನೊಂದೆಡೆ ಮಧ್ಯಾಹ್ನದ ನಂತರ ಸುಮಾರು 29.5 ಕಿಲೋ ಮೀಟರ್‌ನಷ್ಟು ಮೋದಿ ರೋಡ್‌ ಶೋ ಮಾಡಲಿದ್ದಾರೆ. ಈ ಎರಡೂ ರೋಡ್‌ ಶೋಗಳಲ್ಲಿ ಮೋದಿ ಬಿಜೆಪಿ ರಥವೇರಿ ಜನರತ್ತ ಕೈ ಬೀಸಲಿದ್ದಾರೆ. ಈ ವೇಳೆ ಬಿಜೆಪಿ ರಥದಲ್ಲಿ ಬಿಜೆಪಿ ಅಭ್ಯರ್ಥಿಗಳೂ ಇರಲಿದ್ದಾರೆ. ಅಲ್ಲಲ್ಲಿ ರಥದಿಂದ ಇಳಿಯುವ ಮೋದಿಯವರು ಜನರಿಗೆ ಹಸ್ತಲಾಘವ ಕೂಡಾ ಮಾಡಲಿದ್ದಾರೆ. ಅಲ್ಲಲ್ಲಿ ಪಾದಯಾತ್ರೆ ಕೂಡಾ ನಡೆಸಿ ಜನರನ್ನು ಸೆಳೆಯಲಿದ್ದಾರೆ.

ಎಲ್ಲಿ ಹೋದರೂ ಕರ್ನಾಟಕವನ್ನು ನಂಬರ್‌ ಮಾಡುತ್ತೇವೆ ಎಂದು ಹೇಳುತ್ತಿರುವ ಮೋದಿ, ಬೆಂಗಳೂರಿನ ಜನರನ್ನು ಸೆಳೆಯಲು ಇಂತಹದ್ದೇ ಒಂದು ತಂತ್ರವನ್ನು ಉಪಯೋಗಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿಯೇ ಮೋದಿ ಭಾರಿ ಸ್ಟ್ರ್ಯಾಟಜಿ ನಡೆಸಿದ್ದಾರೆ. ಈ ಬಾರಿಯೂ ಬಿಜೆಪಿಯನ್ನು ಗೆಲ್ಲಿಸಿದರೆ ಬೆಂಗಳೂರಿನ ಎಲ್ಲಾ ಸಮಸ್ಯೆ ಬಗೆ ಹರಿಸುತ್ತೇವೆ. ರಸ್ತೆ ಗುಂಡಿ ಸಮಸ್ಯೆ, ಮಳೆ ನೀರ ಸಮಸ್ಯೆ, ನಿರುದ್ಯೋಗ ಸಮಸ್ಯೆ ನಿವಾರಿಸುತ್ತೇವೆ ಎಂದು ಮೋದಿ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆ ಐಟಿ ಉದ್ಯೋಗಿಗಳನ್ನು ಮೋದಿ ಸೆಳೆಯಲಿದ್ದಾರೆ ಎಂದು ತಿಳಿದುಬಂದಿದೆ.

Share Post