Bengaluru

ಎನ್‌-95 ಅಥವಾ ತ್ರಿಪಲ್‌ ಲೇಯರ್‌ ಮಾಸ್ಕ್‌; ಯಾವುದು ಉತ್ತಮ..?- ಅಸಲಿ ಯಾವುದು, ನಕಲಿ ಯಾವುದು..?

ಬೆಂಗಳೂರು: ಕೊರೊನಾ ಬಂದಾದ ಮೇಲೆ ಮಾಸ್ಕ್‌ ನಮ್ಮ ಜೀವನದ ಭಾಗವಾಗಿಬಿಟ್ಟಿದೆ. ಇನ್ನೂ ಒಂದಷ್ಟು ವರ್ಷ ನಮ್ಮ ಜೊತೆ ಮಾಸ್ಕ್‌ ಇರಲೇಬೇಕು. ಕೊರೊನಾ ಮೂರು ಅಲೆಗಳು ಬಂದಿ ಹೋಗಿವೆ. ಇದ್ರಲ್ಲಿ ನಾವು ನೀವೆಲ್ಲಾ ಕೊರೊನಾದಿಂದ ಪಾರಾಗಿದ್ದೇವೆ ಅಂದ್ರೆ ಅದಕ್ಕೆ ಪ್ರಮುಖ ಕಾರಣವೇ ಮಾಸ್ಕ್‌. ನಾವು ಕಡ್ಡಾಯವಾಗಿ ಮಾಸ್ಕ್‌ ಧರಿಸುವುದರಿಂದ ಕೊರೊನಾದಿಂದ ನಾವು ದೂರ ಇರಬಹುದು.

ಆದ್ರೆ ಇತ್ತೀಚೆಗೆ ತುಂಬಾನೇ ಮಾಸ್ಕ್‌ಗಳು ಮಾರುಕಟ್ಟೆಗೆ ಬಂದಿವೆ. ಎಲ್ಲರದ ಮೇಲೂ ಎನ್‌-95 ಎಂಬ ಗುರುತು ಇರುತ್ತದೆ. ಯಾಕಂದ್ರೆ ವೈದ್ಯರು ಹೆಚ್ಚು ಶಿಫಾರಸು ಮಾಡುವುದು ಎನ್‌95 ಹಾಗೂ ತ್ರೀ ಲೇಯರ್‌ ಸರ್ಜಿಕಲ್‌ ಮಾಸ್ಕ್‌ಗಳನ್ನು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಎಲ್ಲದಕ್ಕೂ ಎನ್‌-95 ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಒರಿಜಿನಲ್‌ ಎನ್‌-95 ಮಾಸ್ಕ್‌ ಗುರುತಿಸುವುದೇ ಕಷ್ಟಸಾಧ್ಯವಾಗುತ್ತಿದೆ.

ಅಂದಹಾಗೆ ಯಾವ ಮಾಸ್ಕ್‌ ಧರಿಸಿದರೆ ನಮಗೆ ಸೋಂಕು ತಗುಲುವುದಿಲ್ಲ. ಯಾವ ಮಾಸ್ಕ್‌ ನಮಗೆ ಹೆಚ್ಚು ರಕ್ಷಣೆ ನೀಡುತ್ತದೆ..? ಕೇಂದ್ರ ಆರೋಗ್ಯ ಇಲಾಖೆ ಹೇಳೋದು ಏನು..? ನೋಡೋಣ ಬನ್ನಿ..

ಎನ್‌-95 ಹಾಗೂ ತ್ರಿಪಲ್‌ ಲೇಯರ್‌ ಮಾಸ್ಕ್‌ ಪರಿಣಾಮಕಾರಿ (N-95, triple layer mask )

ಆರೋಗ್ಯ ಕಾರ್ಯಕರ್ತರು, ರೋಗಿಗಳು, ಸಾಮಾನ್ಯ ಜನರು ತ್ರಿಪಲ್‌ ಲೇಯರ್‌ ಸರ್ಜಿಕಲ್‌ ಮಾಸ್ಕ್‌ ಹಾಗೂ ಎನ್‌-95 ಮಾಸ್ಕ್‌ಗಳನ್ನು ಬಳಸಿದರೆ ಅವು ವೈರಾಣುಗಳಿಂದ ನಮ್ಮನ್ನು ರಕ್ಷಿಸುತ್ತವೆ. ಇತರೆ ಬಟ್ಟೆಯಿಂದ ತಯಾರಿಸಿದ ಅಥವಾ ಸಾಮಾನ್ಯ ಮಾಸ್ಕ್‌ಗಳು ನಮಗೆ ಹೆಚ್ಚು ರಕ್ಷಣೆ ನೀಡುವುದಿಲ್ಲ. ಈ ಎರಡೂ ಮಾಸ್ಕ್‌ಗಳು ನಮಗೆ ರಕ್ಷಣಾ ಸಾಧನಗಳಾಗಿವೆ. ಈ ಮಾಸ್ಕ್‌ಗಳು ನಮಗೆ ವೈಯಕ್ತಿಕ ರಕ್ಷಣಾ ಸಾಧನಗಳಾಗಿವೆ. ಹಾಗೂ ಇವುಗಳನ್ನು ನಾವು ಸರಿಯಾಗಿ ಅಂದರೆ ಮೂಗು, ಬಾಯಿ ಮುಚ್ಚುವಂತೆ ಧರಿಸಿದರೆ ಮಾತ್ರ ನಮಗೆ ರಕ್ಷಣೆ ಒದಗಿಸುತ್ತವೆ.

ತ್ರಿಪಲ್‌ ಲೇಯರ್‌ ಮಾಸ್ಕ್‌ ಎಲ್ಲಿ ಬಳಸುತ್ತಾರೆ..?   (triple layer mask )

ನರ್ಸ್‌ಗಳು, ಅರೆವೈದ್ಯಕೀಯ ಸಿಬ್ಬಂದಿ, ವೈದ್ಯರು ಯಾವಾಗಲೂ ಡಿಸ್ಲೋಸಬಲ್‌ ಮಾಸ್ಕ್‌ಗಳನ್ನು ಬಳಸುತ್ತಾರೆ. ರೋಗಿಗಳೊಂದಿಗೆ ಸಂವಹನ ನಡೆಸುವಾಗ ಈ ಟ್ರಿಪಲ್‌ ಲೇಯರ್‌ ಡಿಸ್ಫೋಸಬಲ್‌ ಸರ್ಜಿಕಲ್‌ ಮಾಸ್ಕ್‌ ಬಳಸುತ್ತಾರೆ. ಮೊದಲಿನಿಂದಲೂ ವೈದ್ಯರು ಇದೇ ತ್ರಿಪಲ್‌ ಲೇಯರ್‌ ಮಾಸ್ಕ್‌ ಬಳಸುವುದರಿಂದ ಎಲ್ಲರೂ ಇದನ್ನೇ ಬಳಸುವುದು ಹೆಚ್ಚು ಸೂಕ್ತ. ಆದ್ರೆ ಈ ಮಾಸ್ಕ್‌ ಒಂದು ಬಾರಿ ಮಾತ್ರ ಬಳಸಬೇಕು. ಅಲ್ಲದೇ ಆರು ಗಂಟೆಗೂ ಹೆಚ್ಚು ಕಾಲ ಈ ಮಾಸ್ಕ್‌ ಹಾಕುವಂತಿಲ್ಲ ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ದಿನಕ್ಕೆ ಎರಡು ಮೂರು ಮಾಸ್ಕ್‌ ಬದಲಿಸುವುದಕ್ಕೆ ಇಷ್ಟವಿಲ್ಲದವರು ಎನ್‌-95 ಮಾಸ್ಕ್‌ ಬಳಸಬಹುದು.

 ತೀವ್ರ ನಿಗಾ ಘಟಕದಲ್ಲಿದ್ದಾಗ ಎನ್‌-95 ಮಾಸ್ಕ್‌ ಬಳಸಿದರೆ ಉತ್ತಮ  (N-95 Mask)

ವೈದ್ಯರು ಹೇಳುವ ಪ್ರಕಾರ ತೀವ್ರ ನಿಗಾ ಘಟಕದಲ್ಲಿದ್ದಾಗ ರೋಗಿಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿ ಎನ್‌-95 ಮಾಸ್ಕ್‌ ಧರಿಸಿದರೆ ಉತ್ತಮ. ಈ ವೇಳೆ ರೋಗಿಗಳಿಂದ ಕ್ಲಿನಿಕಲ್‌ ಮಾದರಿಗಳನ್ನು ಸಂಗ್ರಹಿಸುವುದರಿಂದ ಈ ವೇಳೆ ಹೆಚ್ಚು ಸುರಕ್ಷತೆ ನೀಡುವ ಎನ್‌-95 ಮಾಸ್ಕ್‌ ಧರಿಸುವುದು ಹೆಚ್ಚು ಸೂಕ್ತ ಎಂದು ವೈದ್ಯರು ಹೇಳುತ್ತಾರೆ.

ಎನ್‌-95 ಮಾಸ್ಕ್‌ನಿಂದ ಏನು ಉಪಯೋಗ..?

ಎನ್‌-95 ಮಾಸ್ಕ್‌ ಅತ್ಯಂತ ಸುರಕ್ಷಿತ. ಅದರಲ್ಲಿ ಎರಡು ಮಾತಿಲ್ಲ. ಯಾಕಂದ್ರೆ, ಈ ಮಾಸ್ಕ್‌ನ್ನು ತಯಾರಿಸಲು ಪಾಲಿಪ್ರೊಪಿಲೀನ್ ಎಂಬ ಫೈಬರ್ ಬಳಸುತ್ತಾರೆ. ಇದು ಸೂಕ್ಷ್ಮಾತಿ ಸೂಕ್ಷ್ಮ ವೈರಸ್‌ಗಳನ್ನೂ ತಡೆಯುತ್ತದೆ. ಮುಖ, ಬಾಯಿಯನ್ನು ಎನ್‌-95 ಮಾಸ್ಕ್‌ನಿಂದ ಸರಿಯಾಗಿ ಮುಚ್ಚಿಕೊಳ್ಳುವುದರಿಂದ ಯಾವುದೇ ರೀತಿಯ ವೈರಾಣುಗಳಿಂದ ಬಹುತೇಕ ರಕ್ಷಿಸಿಕೊಳ್ಳಬಹುದು. ವೈದ್ಯರು ಮೊದಲು ತೀವ್ರ ನಿಗಾ ಘಟಕಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಮಾತ್ರ ಇಂತಹ ಮಾಸ್ಕ್‌ಗಳನ್ನು ಬಳಸುತ್ತಿದ್ದರು.

ಕೊರೊನಾ ಬರುವವರೆಗೂ ಸಾಮಾನ್ಯ ಜನಕ್ಕೆ ಎನ್‌-95 ಮಾಸ್ಕ್‌ ಬಗ್ಗೆ ಹೆಚ್ಚಿನ ಅರಿವಿರಲಿಲ್ಲ. ಆದ್ರೆ ಕೊರೊನಾ ಬಂದ ಮೇಲೆ ಯಾವ ಮಾಸ್ಕ್‌ ಹೆಚ್ಚು ಸೂಕ್ತ ಎಂಬ ವಿಚಾರ ಬಂದಾಗ ವೈದ್ಯರು ಹೆಚ್ಚಾಗಿ ಎನ್‌-95 ಮಾಸ್ಕ್‌ ಬಗ್ಗೆ ಮಾತನಾಡಲು ಶುರು ಮಾಡಿದರು. ಆಗ ಈ ಮಾಸ್‌ಕೆ ಹೆಚ್ಚು ಬೇಡಿಕೆ ಬಂತು. ಆದರೂ ವೈದ್ಯರು ಎನ್‌-95 ಮಾಸ್ಕ್‌ಗಿಂತ ತ್ರಿಪಲ್‌ ಲೇಯರ್‌ ಮಾಸ್ಕ್‌ ಧರಿಸಿದರೆ ಸಾಕು ಎಂದೇ ಹೇಳುತ್ತಾರೆ. ಯಾಕಂದ್ರೆ, ಎನ್‌-95 ಮಾಸ್ಕ್‌ ತುಂಬಾ ದುಬಾರಿಯಾದದ್ದು. 250 ರೂಪಾಯಿ ಹೆಚ್ಚು ಬೆಲೆ ಅದಕ್ಕಿದೆ. ಅದೂ ಕೂಡಾ ನಾಲ್ಕು ದಿನಕ್ಕಿಂತ ಹೆಚ್ಚು ಈ ಮಾಸ್ಕ್‌ನ್ನು ಬಳಸಬಾರದು ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ಕಡಿಮೆ ಬೆಲೆಗೆ ಸಿಗುವ  ತ್ರಿಪಲ್‌ ಲೇಯರ್‌ ಮಾಸ್ಕ್‌ ಬಳಸುವುದೇ ಹೆಚ್ಚು ಸೂಕ್ತ ಎಂಬುದು ವೈದ್ಯರ ಶಿಫಾರಸು.

 ಒಳ್ಳೆಯ ಮಾಸ್ಕ್‌ ಎಲ್ಲಿ ಸಿಗುತ್ತೆ..? ಒರಿಜಿನಲ್‌ ಎನ್‌-95 ಮಾಸ್ಕ್‌ ಯಾವುದು..?

ಮೊದಲು ಮೆಡಿಕಲ್‌ ಶಾಪ್‌ಗಳಲ್ಲಿ ಮಾತ್ರ ಮಾಸ್ಕ್‌ ಗಳು ಸಿಗುತ್ತಿದ್ದವು. ಆದ್ರೆ ಈಗ ಬೀದಿ ಬೀದಿಯಲ್ಲಿ ಮಾಸ್ಕ್‌ಗಳು ಸಿಗುತ್ತಿವೆ. ಅದ್ರಲ್ಲೂ ಎನ್‌-95 ಹೆಸರಿನಲ್ಲಿ ಅತಿ ಕಡಿಮೆ ಬೆಲೆಗೆ ಮಾಸ್ಕ್‌ಗಳು ದೊರೆಯುತ್ತಿವೆ. ಆದ್ರೆ ಅವೆಲ್ಲಾ ನಿಜವಾದ ಎನ್‌-95 ಮಾಸ್ಕ್‌ಗಳು ಅಲ್ಲವೇ ಅಲ್ಲ. ಅವುಗಳನ್ನು ಧರಿಸುವುದರಿಂದ ಹೆಚ್ಚು ರಕ್ಷಣೆ ಸಿಗುವುದಿಲ್ಲ. ಮಾರುಕಟ್ಟೆಯಲ್ಲಿ ಸರ್ಜಿಕಲ್‌ ಮಾಸ್ಕ್‌ಗಳು ಕೂಡಾ ಡೂಪ್ಲಿಕೇಟ್‌ ಬಂದಿವೆ. ಹೀಗಾಗಿ ಮಾಸ್ಕ್‌ಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

ಆದಷ್ಟು ಮಾಸ್ಕ್‌ಗಳನ್ನು ನಮಗೆ ಗೊತ್ತಿರುವ ಮೆಡಿಕಲ್‌ ಸ್ಟೋರ್‌ಗಳಿಂದಲೇ ಖರೀದಿಸಬೇಕು. ಒರಿಜಿನಲ್‌ ಮಾಸ್ಕ್‌ ಬೇಕೆಂದು ಕೇಳಿ ಖರೀದಿಸಿದರೆ ಉತ್ತಮ. ತ್ರಿಪಲ್‌ ಲೇಯರ್‌ ಮಾಸ್ಕ್‌ ಎಂದು ಕೇವಲ ಎರಡೂ ರೂಪಾಯಿಗೇ ಕೊಡುವವರಿದ್ದಾರೆ. ಹತ್ತು ರೂಪಾಯಿ ಎನ್‌-95 ಹೆಸರಿನ ಮಾಸ್ಕ್‌ ಮಾರುತ್ತಿದ್ದಾರೆ. ಆದ್ರೆ ಕಡಿಮೆ ಬೆಲೆಯ ಮಾಸ್ಕ್‌ಗಳು ಎಂದಿಗೂ ಉಪಯೋಗಕ್ಕೆ ಬರುವುದಿಲ್ಲ. ಕೊಂಚ ಬೆಲೆ ಹೆಚ್ಚಾದರೂ ಉತ್ತಮ ಗುಣಮಟ್ಟದ ಮಾಸ್ಕ್‌ಗಳನ್ನು ಖರೀದಿ ಮಾಡಿದರೆ ನಾವು ಕೊರೊನಾದಿಂದ ರಕ್ಷಿಸಿಕೊಳ್ಳಬಹುದು.

 

Share Post