ಅಕ್ಕಿ ಬದಲು ಹಣ; ಪ್ರಾಮಿಸ್ ಮಾಡಿದಂತೆ ನಡೆಯುತ್ತಿದ್ದೇವೆ – ಸಿದ್ದರಾಮಯ್ಯ
ಬೆಂಗಳೂರು; ಜುಲೈ 1 ರಿಂದ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ದಾರರಿಗೆ ತಲಾ ಹತ್ತು ಕೆಜಿ ಆಹಾರ ಧಾನ್ಯವಾಗಿ ಉಚಿತವಾಗಿ ಕೊಡುತ್ತೇವೆ ಎಂದು ಹೇಳಿದ್ದೆವು. ಆದ್ರೆ ಕೇಂದ್ರ ಸರ್ಕಾರ ಅಕ್ಕಿ ಪೂರೈಸಲು ನಿರಾಕರಿಸಿದೆ. ಹೀಗಾಗಿ ತಾತ್ಕಾಲಿಕವಾಗಿ ಅಕ್ಕಿಗೆ ಬದಲಾಗಿ ಹಣ ನೀಡಲು ತೀರ್ಮಾನ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ನಾವು ಹೇಳಿದಂತೆ ಜುಲೈ 1ರಿಂದ ಅನ್ನಭಾಗ್ಯ ಯೋಜನೆ ವಿಸ್ತರಣೆಯಾಗುತ್ತೆ. ಆದ್ರೆ ಕೇಂದ್ರ ಸರ್ಕಾರದ ನೀತಿಯಿಂದ ಸದ್ಯಕ್ಕೆ ಅಕ್ಕಿಗೆ ಬದಲಾಗಿ ಹಣ ನೀಡುತ್ತೇವೆ ಎಂದು ಅವರು ಹೇಳಿದರು.
ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಬಡವರಿಗೆ ನೀಡುತ್ತಿರುವ ಯೋಜನೆ ಇದು. ಹೀಗಾಗಿ ಹಣ ನೀಡುತ್ತೇವೆ ಅಕ್ಕಿ ಪೂರೈಕೆ ಮಾಡಿ ಎಂದು ಕೇಳಿಕೊಂಡಿದ್ದೆ. ಆದ್ರೆ ಅಮಿತ್ ಶಾ ಅವರು ಇದಕ್ಕೆ ಒಪ್ಪಲಿಲ್ಲ. ಕೆ.ಹೆಚ್.ಮುನಿಯಪ್ಪ ಅವರು ಕೇಂದ್ರ ಆಹಾರ ಸಚಿವ ಗೋಯೆಲ್ ಅವರನ್ನು ಭೇಟಿಯಾಗಿದ್ದರು. ಅವರೂ ಕೂಡಾ ಅಕ್ಕಿ ನೀಡುವುದಿಲ್ಲ ಎಂದು ಹೇಳಿದರು. ಹೀಗಾಗಿ, ನಾನು ತಾತ್ಕಾಲಿಕವಾಗಿ ಐದು ಕೆಜಿ ಅಕ್ಕಿಗೆ ಬದಲಾಗಿ ತಿಂಗಳಿಗೆ ಒಬ್ಬರಿಗೆ 170 ರೂಪಾಯಿ ನೀಡಲು ನಿರ್ಧರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಮನೆಗಳಲ್ಲಿ ಎಷ್ಟು ಮಂದಿ ಇದ್ದಾರೋ ಎಲ್ಲರಿಗೂ ತಲಾ 170 ರೂಪಾಯಿ ಸಿಗಲಿದೆ. ಅಷ್ಟೋ ಹಣವನ್ನು ಮನೆಯ ಯಜಮಾನನ ಅಕೌಂಟ್‌ಗೆ ವರ್ಗಾಯಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.