ಅಕ್ಕಿಗೆ ಬದಲು ಹಣ; ಬಿಜೆಪಿಯ ಬಾಯಿ ಮುಚ್ಚಿಸಿತಾ ಸಿದ್ದರಾಮಯ್ಯ ಸರ್ಕಾರ..?
ಬೆಂಗಳೂರು; ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸೋದಕ್ಕೆ ಬಿಜೆಪಿಯವರಿಗೆ ಒಂದು ಅಸ್ತ್ರವೇ ಅನ್ನಭಾಗ್ಯ ಯೋಜನೆಯ ಅಕ್ಕಿ. ಕೇಂದ್ರ ಸರ್ಕಾರ ಅಕ್ಕಿ ಕೊಡೋದಿಲ್ಲ ಎಂದು ಹೇಳಿಬಿಟ್ಟಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅಕ್ಕಿ ತರೋದಕ್ಕೆ ಆಗೋದಿಲ್ಲ. ಇದರಿಂದ ಯೋಜನೆ ಜಾರಿಯಾಗೋದಿಲ್ಲ. ಇದರ ವಿರುದ್ಧ ಹೋರಾಟ ರೂಪಿಸಬಹುದು. ಈಗ ಕೊಡುತ್ತಿರುವ ಐದು ಕೆಜಿ ಅಕ್ಕಿ ಮೋದಿ ಕೊಡುತ್ತಿದ್ದಾರೆ. ರಾಜ್ಯ ಸರ್ಕಾರ ಏನೂ ಕೊಡುತ್ತಿಲ್ಲ ಎಂದು ಹೇಳಬಹುದು ಎಂದು ಬಿಜೆಪಿ ಯೋಜನೆ ಹಾಕಿಕೊಂಡಿತ್ತು. ಆದ್ರೆ ಬಿಜೆಪಿ ಹೋರಾಟ ಯೋಜನೆಗೆ ಈಗ ಹಿನ್ನಡೆಯಾಗಿದೆ.
ಯಾಕಂದ್ರೆ ರಾಜ್ಯ ಸಚಿವ ಸಂಪುಟ ಅಕ್ಕಿಗೆ ಬದಲಾಗಿ ಹಣ ನೀಡೋದಕ್ಕೆ ತೀರ್ಮಾನ ಮಾಡಿದೆ. ಅಕ್ಕಿ ಸಿಗುತ್ತಿಲ್ಲವಾದ್ದರಿಂದ ತಾತ್ಕಾಲಿಕವಾಗಿ ಅಕ್ಕಿಗೆ ಬದಲಾಗಿ ಕೆಜಿ 34 ರೂಪಾಯಿಯಂತೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಜೊತೆಗೆ ಇದೇ ಜುಲೈನಿಂದಲೇ ಈ ಯೋಜನೆ ಜಾರಿ ಮಾಡೋದಕ್ಕೂ ಸಂಪುಟ ಒಪ್ಪಿಗೆ ಕೊಟ್ಟಿದೆ. ಇದರಿಂದಾಗಿ ಬಿಜೆಪಿ ನಾಯಕರು ಮಾತನಾಡೋದಕ್ಕೆ ಈಗ ವಿಷಯವೇ ಇಲ್ಲದಂತಾಗಿದೆ.
ಅಂದಹಾಗೆ ಅಕ್ಕಿ ಕೊಡದೇ ಹಣ ಕೊಡುತ್ತಿರುವುದಕ್ಕೆ ವಿರೋಧ ಮಾಡುವುದಕ್ಕೆ ಬಿಜೆಪಿ ನಾಯಕರಿಗೆ ಅವಕಾಶವಿತ್ತು. ಆದ್ರೆ ಕೇಂದ್ರ ಸರ್ಕಾರ ಅಕ್ಕಿ ಕೊಡೋದಿಲ್ಲ ಎಂದಾಗ ಕೆಲ ಬಿಜೆಪಿ ನಾಯಕರು ಅಕ್ಕಿಗೆ ಬದಲಾಗಿ ಹಣವನ್ನು ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದರು. ಈಗ ರಾಜ್ಯ ಸರ್ಕಾರ ಅದೇ ತರದ ತೀರ್ಮಾನ ಕೈಗೊಂಡಿದೆ. ಹೀಗಾಗಿ ಈಗ ಬಿಜೆಪಿ ನಾಯಕರನ್ನು ಹಣ ಕೊಡೋದನ್ನು ವಿರೋಧಿಸೋದಕ್ಕೆ ಆಗೋದಿಲ್ಲ.
ಈಗ ಬಿಜೆಪಿ ನಾಯಕರಿಗೆ ಒಂದೇ ಆಯ್ಕೆ ಇರೋದು. ಕಾಂಗ್ರೆಸ್ ಹೇಳಿರೋದು ಹತ್ತು ಕೆಜಿ ಅಕ್ಕಿ ಕೊಡ್ತೀವಿ ಅಂತ. ಮೋದಿ ಸರ್ಕಾರ ಸರ್ಕಾರ ಈಗಾಗಲೇ ಐದು ಕೆಜಿ ಅಕ್ಕಿ ಕೊಡ್ತಿದೆ. ಕಾಂಗ್ರೆಸ್ ಸರ್ಕಾರ ಪ್ರತ್ಯೇಕವಾಗಿ ಹತ್ತು ಕೆಜಿ ಕೊಡಬೇಕು. ಹೀಗಾಗಿ ಹತ್ತು ಕೆಜಿ ಅಕ್ಕಿಯ ಹಣ ಕೊಡಬೇಕು ಎಂದು ಆಗ್ರಹಿಸಬಹುದು. ಆದ್ರೆ, ಈ ವಿಚಾರ ಜನರನ್ನು ಮುಟ್ಟೋದು ಕಷ್ಟವಾಗಬಹುದು.
ಕಾಂಗ್ರೆಸ್ ಸರ್ಕಾರ ಹಲವು ಉಚಿತ ಯೋಜನೆಗಳು ಜಾರಿಗೆ ತಂದಿದ್ದರೂ, ಅನ್ನಭಾಗ್ಯ ಯೋಜನೆ ಅತ್ಯಂತ ಜನಪ್ರಿಯ ಯೋಜನೆ. ಇದು ಕೋಟ್ಯಂತರ ಬಡಜನರ ಹೊಟ್ಟೆ ತುಂಬಿಸುತ್ತಿದೆ. ಹೀಗಾಗಿ, ರಾಜ್ಯ ಸರ್ಕಾರ ಈ ವಿಚಾರದಲ್ಲಿ ವಿರೋಧ ಪ್ರಕ್ಷಗಳಿಗೆ ಅಸ್ತ್ರ ನೀಡದೇ, ಚಾಲಾಕಿತನ ಪ್ರದರ್ಶಿಸಿದೆ.