BengaluruPolitics

ಅಕ್ಕಿ ಬದಲು ಹಣ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನ

ಬೆಂಗಳೂರು; ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ನೀಡಲು ಅಕ್ಕಿ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಅಕ್ಕಿಗೆ ಬದಲಾಗಿ ಹಣವನ್ನು ನೀಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಈ ವಿಚಾರವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್‌.ಮುನಿಯಪ್ಪ ಹೇಳಿದ್ದಾರೆ.

ಈಗಾಗಲೇ ಐದು ಕೆಜಿ ಅಕ್ಕಿ ಪೂರೈಸಲಾಗುತ್ತಿದೆ. ಜೊತೆಗೆ ಇನ್ನೂ ಐದು ಕೆಜಿ ಉಚಿತವಾಗಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಆದ್ರೆ ಕೇಂದ್ರ ಸರ್ಕಾರ ಅಕ್ಕಿ ಪೂರೈಸಲು ನಿರಾಕರಿಸಿದೆ. ಇನ್ನು ಅಕ್ಕಿ ಬೆಳೆಯುವ ರಾಜ್ಯಗಳು ಕೂಡಾ ಅಕ್ಕಿ ದಾಸ್ತಾನಿಲ್ಲ ಎಂದು ಹೇಳುತ್ತಿವೆ. ಕೆಲ ರಾಜ್ಯಗಳು ಅಕ್ಕಿ ಕೊಡಲು ಒಪ್ಪಿದ್ದರೂ, ಆ ಅಕ್ಕಿ ಸಾಲುವುದಿಲ್ಲ. ಹೀಗಾಗಿ ಐದು ಕೆಜಿ ಅಕ್ಕಿಗೆ ಬದಲಾಗಿ ಹಣ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಒಂದು ಕೆಜಿ 34 ರೂಪಾಯಿ ಲೆಕ್ಕದಲ್ಲಿ ಅಂತ್ಯೋದಯ ಹಾಗೂ ಬಿಪಿಎಲ್‌ ಕಾರ್ಡ್‌ ದಾರರಿಗೆ ಹಣ ನೀಡಲು ನಿರ್ಧರಿಸಲಾಗಿದೆ ಎಂದು ಕೆ.ಹೆಚ್‌.ಮುನಿಯಪ್ಪ ತಿಳಿಸಿದ್ದಾರೆ.

ಬಿಪಿಎಲ್‌ ಹಾಗೂ ಅಂತ್ಯೋದಯ ಪಡಿತರ ಕಾರ್ಡ್‌ದಾರರಿಗೆ ತಿಂಗಳಿಗೆ ತಲಾ 170 ರೂಪಾಯಿ ನೀಡಲು ಸರ್ಕಾರ ನಿರ್ಧರಿಸಿದೆ. ಅಂದರೆ ಒಂದು ಮನೆಯಲ್ಲಿ ನಾಲ್ಕು ಜನರಿದ್ದಂತೆ ಒಬ್ಬರಿಗೆ 170 ರೂಪಾಯಿಯಂತೆ ಒಟ್ಟು 680 ರೂಪಾಯಿ ಸಿಗಲಿದೆ. ಬಿಪಿಎಲ್‌ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಈ ಹಣ ನೇರವಾಗಿ ಜಮಾವಣೆಯಾಗಲಿದೆ. ಜುಲೈ ತಿಂಗಳಿಂದಲೇ ಈ ಯೋಜನೆ ಜಾರಿಯಾಗಲಿದೆ ಎಂದು ಸಚಿವ ಕೆ.ಹೆಚ್‌.ಮುನಿಯಪ್ಪ ಹೇಳಿದ್ದಾರೆ.

ಇನ್ನು ಈ ಹಣ ಕೊಡುವ ಪದ್ಧತಿ ತಾತ್ಕಾಲಿಕ ಮಾತ್ರ. ಅಕ್ಕಿಗಾಗಿ ಸರ್ಕಾರದ ವತಿಯಿಂದ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ. ಎಷ್ಟು ಬೇಗ ಅಕ್ಕಿ ಪೂರೈಕೆಯಾಗುತ್ತದೋ ಅಷ್ಟು ಬೇಗ ಅಕ್ಕಿಯನ್ನು ಕೊಡುತ್ತೇವೆ. ಅಲ್ಲಿಯವರೆಗೂ ಮನೆಯ ಯಜನಮಾನನ ಬ್ಯಾಂಕ್‌ ಖಾತೆಗೆ ಮನೆಯಲ್ಲಿರುವ ಎಲ್ಲರ ಪಾಲಿನ ಹಣ ಜಮೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

Share Post