ವಿಧಾನಸಭಾ ಚುನಾವಣಾ ಅಖಾಡಕ್ಕಿಳಿದ ಮಾಜಿ ಕ್ರಿಕೆಟಿಗ ಅಜರುದ್ದಿನ್; ಸ್ವಂತ ಊರಲ್ಲಿ ಗೆಲ್ತಾರಾ..?
ಹೈದರಾಬಾದ್; ಮಹಮದ್ ಅಜರುದ್ದಿನ್… ಭಾರತ ಕ್ರಿಕೆಟ್ ತಂಡ ಮುನ್ನಡೆಸಿದ, ಹಲವು ದಾಖಲೆಯ ಗೆಲುವುಗಳನ್ನು ತಂದುಕೊಟ್ಟ ನಾಯಕ… ಈ ಮಾಜಿ ಕ್ರಿಕೆಟಿಗ ಈ ಹಿಂದೆಯೇ ರಾಜಕೀಯಕ್ಕೆ ಬಂದಿದ್ದರು.. ಆದ್ರೆ ಅವರು ತಮ್ಮ ಸ್ವಂತ ಊರು ಹೈದರಾಬಾದ್ ಬಿಟ್ಟು ಬೇರೆ ರಾಜ್ಯಗಳಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದರು.. ಆದ್ರೆ ಇದೀಗ ಅಜರುದ್ದಿನ್ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕಿಳಿಯುತ್ತಿದ್ದಾರೆ. ಹೈದರಾಬಾದ್‌ನ ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದಿಂದ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ. ಈ ಮೂಲಕ ಅಜರುದ್ದಿನ್ ಅವರು ಇದೇ ಮೊದಲ ಬಾರಿಗೆ ತಮ್ಮ ಸ್ವಂತ ನಾಡಿನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಇದು ಮೊದಲ ಸ್ಪರ್ಧೆ ಕೂಡಾ ಹೌದು.
ಕೆಲ ದಿನಗಳ ಹಿಂದೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ) ಚುನಾವಣೆಗೆ ಸ್ಪರ್ಧಿಸದಂತೆ ಸುಪ್ರೀಂ ಕೋರ್ಟ್ ಅವರನ್ನು ಅನರ್ಹಗೊಳಿಸಿತ್ತು. ಆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿರುವ ಅಜರ್ ಈಗ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅಜರುದ್ದೀನ್ ಅವರಿಗೆ ಇದು ಮೊದಲ ಚುನಾವಣೆಯಲ್ಲ. ಈ ಹಿಂದೆ ಎರಡು ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಒಮ್ಮೆ ಗೆದ್ದಿದ್ದರು.
ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿದ್ದರು ಮತ್ತು 2000 ರಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ನಿಷೇಧಕ್ಕೊಳಗಾದ ನಂತರ 2009 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಅದೇ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅವರನ್ನು ಕಣಕ್ಕಿಳಿಸಿತು. ಆ ಚುನಾವಣೆಯಲ್ಲಿ ಅಜರ್ ಅವರು ಬಿಜೆಪಿ ಅಭ್ಯರ್ಥಿ ಕುನ್ವರ್ ಸರ್ವೇಶ್ ಕುಮಾರ್ ಸಿಂಗ್ ವಿರುದ್ಧ 49,000 ಮತಗಳ ಅಂತರದಿಂದ ಗೆದ್ದು ಸಂಸತ್ ಪ್ರವೇಶಿಸಿದರು.
2014ರಲ್ಲಿ ರಾಜಸ್ಥಾನದ ಟೋಂಕ್ ಸವಾಯಿ ಮಾಧೋಪುರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಜರುದ್ದೀನ್ ಸೋಲನುಭವಿಸಿದ್ದರು. ಬಿಜೆಪಿ ಅಭ್ಯರ್ಥಿ ಸುಖ್‌ಬೀರ್ ಸಿಂಗ್ ಜೊನಪುರಿಯಾ ವಿರುದ್ಧ 1,35,000 ಮತಗಳ ಅಂತರದಿಂದ ಸೋತರು. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಜರುದ್ದಿನ್‌ಗೆ ಟಿಕೆಟ್ ನೀಡಲಿಲ್ಲ. ಪ್ರಸ್ತುತ ತೆಲಂಗಾಣ ಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಯಲ್ಲಿರುವ ಅವರನ್ನು ಕಾಂಗ್ರೆಸ್ ಪಕ್‌ಷ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿದೆ.
ಪಕ್ಷ ಆದೇಶ ನೀಡಿದರೆ ಮುಖ್ಯಮಂತ್ರಿ ಕಲ್ವಕುಂಟ್ಲ ಚಂದ್ರಶೇಖರ್ ರಾವ್ ವಿರುದ್ಧ ಕಾಮರೆಡ್ಡಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಅಜರುದ್ದೀನ್ ಘೋಷಣೆ ಮಾಡಿದ್ದರು. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಅಜರ್ ಅವರನ್ನು ಹೈದರಾಬಾದ್‌ನ ಜೂಬಿಲಿ ಹಿಲ್ಸ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚಿಸಿದೆ.
ಕಾಮರೆಡ್ಡಿ ಮುಸ್ಲಿಂ ಮತದಾರರು ಹೆಚ್ಚಿರುವ ಕ್ಷೇತ್ರವಾಗಿರುವುದರಿಂದ ಸಿಎಂ ಕೆಸಿಆರ್ ವಿರುದ್ಧ ಅಜರ್ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದರು. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಈ ಹಿಂದಿನ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಶಬ್ಬೀರ್ ಅಲಿ ಅವರನ್ನೇ ಮತ್ತೆ ಕಣಕ್ಕಿಳಿಸಿದೆ. ಜುಬ್ಲಿ ಹಿಲ್ಸ್ ಕ್ಷೇತ್ರದಲ್ಲಿ ಮಾಜಿ ಶಾಸಕ ವಿಷ್ಣುವರ್ಧನ್ ರೆಡ್ಡಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಕಾಂಗ್ರೆಸ್ ಪಕ್ಷ ಅಜರುದ್ದೀನ್ ಗೆ ಟಿಕೆಟ್ ನೀಡಿದೆ. ಹೀಗಾಗಿ ವಿಷ್ಣುವರ್ಧನ್ ರೆಡ್ಡಿಯಿಂದ ಅಜರ್ ಅಸಹಕಾರ ಎದುರಿಸುತ್ತಿದ್ದಾರೆ.
ಕ್ರಿಕೆಟ್ ಮತ್ತು ರಾಜಕೀಯ ಎರಡಲ್ಲೂ ವಿವಾದ
ಟೀಂ ಇಂಡಿಯಾ ಆಟಗಾರನಾಗಿ ಹಾಗೂ ನಾಯಕನಾಗಿ ಉತ್ತಮ ಹೆಸರು ಗಳಿಸಿದ್ದ ಅಜರ್ ಗೆ ಕೆಟ್ಟ ಹೆಸರು ಕೂಡ ಬಂದಿತ್ತು. ಅಜರುದ್ದಿನ್ ಮಣಿಕಟ್ಟಿನ ಚಲನವಲನದಿಂದ ನಾಜೂಕಾಗಿ ಬ್ಯಾಟ್ ಬೀಸಿ ರನ್ ಗಳ ಸುರಿಮಳೆ ಸುರಿಸಿದ ನಾಯಕನಾಗಿ ತನ್ನದೇ ಆದ ಛಾಪು ಮೂಡಿಸಿದ್ದ ಬ್ಯಾಟ್ಸ್ ಮನ್. ತಮ್ಮ ವೃತ್ತಿಜೀವನದಲ್ಲಿ 99 ಟೆಸ್ಟ್ ಪಂದ್ಯಗಳು ಮತ್ತು 334 ಏಕದಿನ ಪಂದ್ಯಗಳನ್ನು ಆಡಿರುವ ಅಜರುದ್ದೀನ್, 47 ಟೆಸ್ಟ್ ಮತ್ತು 174 ODIಗಳಲ್ಲಿ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಅಜರುದ್ದೀನ್ ನಾಯಕತ್ವದಲ್ಲಿ ಟೀಂ ಇಂಡಿಯಾ 14 ಟೆಸ್ಟ್ ಮತ್ತು 90 ಏಕದಿನ ಪಂದ್ಯಗಳನ್ನು ಗೆದ್ದಿದೆ. ಸೌರವ್ ಗಂಗೂಲಿ ಟೆಸ್ಟ್ ಗೆಲುವಿನ ದಾಖಲೆ ಮತ್ತು ಧೋನಿ ಅವರು ODI ಗೆಲುವಿನ ದಾಖಲೆಯನ್ನು ಮುರಿಯುವವರೆಗೂ ಅಜರ್ ಅತ್ಯಂತ ಯಶಸ್ವಿ ನಾಯಕರಾಗಿದ್ದರು. ಆದಾಗ್ಯೂ, 2000ರಲ್ಲಿ ಬಿಸಿಸಿಐ ಮ್ಯಾಚ್ ಫಿಕ್ಸಿಂಗ್ ವಿವಾದದಲ್ಲಿ ಭಾಗಿಯಾಗಿದ್ದ ಮತ್ತು ಸಿಬಿಐ ತನಿಖೆಯನ್ನು ಎದುರಿಸಿದ ಅಜರುದ್ದೀನ್ ಮೇಲೆ ಆಜೀವ ನಿಷೇಧವನ್ನು ವಿಧಿಸಿತು.
ಆದ್ರೆ ಸುದೀರ್ಘ ತನಿಖೆಯ ನಂತರ ಯಾವುದೇ ಪುರಾವೆಗಳು ಸಿಗದ ಕಾರಣ 2012ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಅವರ ವಿರುದ್ಧದ ನಿಷೇಧವನ್ನು ತೆಗೆದುಹಾಕಿತು. ಆದರೆ, ಆಗಲೇ 50ರ ಹರೆಯಕ್ಕೆ ಕಾಲಿಟ್ಟಿದ್ದರಿಂದ ಅಜರುದ್ದಿನ್ ಅವರು ಮತ್ತೆ ಕ್ರಿಕೆಟ್ ಆಡಲಿಲ್ಲ.
ಹೈದರಾಬಾದ್ ಕ್ರಿಕೆಟ್ ಸಂಸ್ಥೆಯಲ್ಲಿಯೂ ಅಜರ್ ಬಗ್ಗೆ ವಿವಾದಗಳಿವೆ. ಎಚ್‌ಸಿಎ ಮತ್ತು ಡೆಕ್ಕನ್ ಬ್ಲೂಸ್ ಕ್ಲಬ್‌ನ ಅಧ್ಯಕ್ಷರಾಗಿದ್ದ ಅವರು ಅದೇ ಸಮಯದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಲಾವ್ ನಾಗೇಶ್ವರ ರಾವ್ ನೇತೃತ್ವದ ಏಕಸದಸ್ಯ ಆಯೋಗ ಅವರನ್ನು ಅನರ್ಹಗೊಳಿಸಿದೆ.