Bengaluru

ಪರಿಷ್ಕೃತ ಪಠ್ಯದಲ್ಲಿ ಒಂದಷ್ಟು ತಿದ್ದುಪಡಿ; ʻಸಂವಿಧಾನ ಶಿಲ್ಪಿʼ ಸೇರ್ಪಡೆ

ಬೆಂಗಳೂರು; ಪಠ್ಯಪುಸ್ತಕ ಪರಿಷ್ಕರಣೆಯಲ್ಲಾಗಿರುವ ಲೋಪಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಕೆಲವೊಂದು ಪಠ್ಯಗಳಲ್ಲಿ ಬದಲಾವಣೆ ಮಾಡಲಾಗಿದೆ. ಅದೇ ಅಂಬೇಡ್ಕರ್‌ ಹೆಸರಿನ ಮುಂದೆ ಸಂವಿಧಾನ ಶಿಲ್ಪಿ ಎಂಬ ಪದವನ್ನು ಕೈಬಿಡಲಾಗಿತ್ತು. ಈಗ ಮತ್ತೆ ಆ ಪದವನ್ನು ಸೇರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

9ನೇ ತರಗತಿ ಸಮಾಜ ವಿಜ್ಞಾನ ಪಾಠದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವೇಳೆ ‘ಸಂವಿಧಾನ ಶಿಲ್ಪಿ’ ಎಂಬ ಪದವನ್ನು ಕೈಬಿಡಲಾಗಿತ್ತು. ಇದಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. 9ನೇ ತರಗತಿ ಸಮಾಜ ವಿಜ್ಞಾನದ‌ ಭಾಗ 1ರ ‘ನಮ್ಮ ಸಂವಿಧಾನ’ ಪಾಠದಲ್ಲಿ ಸಂವಿಧಾನದ ಕರಡು ರಚನೆ ಬಗ್ಗೆ ಉಲ್ಲೇಖವಿದೆ. ಪರಿಷ್ಕೃತ ಪಠ್ಯದಲ್ಲಿ ‘ಇವರು ಸಂವಿಧಾನ ರಚನೆಗೆ ನೀಡಿರುವ ಕೊಡುಗೆಯನ್ನು ಆಧರಿಸಿ ಅವರನ್ನು ‘ಸಂವಿಧಾನ ಶಿಲ್ಪಿ’ ಎಂದು ಕರೆಯಲಾಗಿದೆ’ ಎಂಬ ವಾಕ್ಯವನ್ನು ತೆಗೆಯಲಾಗಿತ್ತು. ಇದರ ಪುನರ್ ಸೇರ್ಪಡೆ ಮಾಡಿ ತಿದ್ದೋಲೆ ಹೊರಡಿಸುವಂತೆ ಸೂಚಿಸಲಾಗಿದೆ.

ಅದೇ ರೀತಿ, 7ನೇ ತರಗತಿ ಸಮಾಜ ವಿಜ್ಞಾನ ಭಾಗ 1ರ ಭಕ್ತಿ ಪಂಥ ಹಾಗೂ ಸೂಫಿ ಸಂತರ ಪಾಠವನ್ನು ಪೂರ್ಣವಾಗಿ ಕೈಬಿಡಲಾಗಿತ್ತು. ಇದನ್ನು ಸೇರ್ಪಡೆಗೊಳಿಸಿ ತಿದ್ದೋಲೆ ಹೊರಡಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಸರ್ಕಾರದ ಆದೇಶ ತಿಳಿಸಿದೆ.

Share Post