BengaluruPolitics

ಕನಕಪುರ ಆದರ್ಶ ವಿಡಿಯೋ ಸರಣಿ‌ ಬಿಡುಗಡೆಗೊಳಿಸಿದ ಡಿಕೆಶಿ

ಬೆಂಗಳೂರು; ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸ ವರ್ಷದ ಸಂದರ್ಭದಲ್ಲಿ ‘ಕರ್ನಾಟಕಕ್ಕೆ ಕನಕಪುರ ಆದರ್ಶ’ ವಿಡಿಯೋ ಸರಣಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬಿಡುಗಡೆಗೊಳಿಸಿದ್ದಾರೆ.

ಡಿ.ಕೆ ಶಿವಕುಮಾರ್ ಅವರು ಕನಕಪುರದಿಂದ ಮೂರು ಬಾರಿ ಶಾಸಕರಾಗಿದ್ದು, ಈ ಅವಧಿಯಲ್ಲಿ ಅವರ ಸಾಧನೆಯಿಂದಾಗಿ ಪ್ರತಿ ಬಾರಿಯೂ ಸತತವಾಗಿ ಅವರ ಗೆಲುವಿನ ಅಂತರ ಹೆಚ್ಚಿದೆ. ಡಿ.ಕೆ ಶಿವಕುಮಾರ್ ಅವರು 2008 ಮತ್ತು 2013ರಲ್ಲಿ ಭಾರಿ ಅಂತರದಿಂದ ಗೆದ್ದಿದ್ದರು. 2018ರಲ್ಲಿ ಅವರು ತಮ್ಮ ಎದುರಾಳಿಯನ್ನು 79,909 ಮತಗಳಿಂದ ಸೋಲಿಸಿ ಆ ಚುನಾವಣೆಯಲ್ಲಿ ದಾಖಲೆಯನ್ನು ಸೃಷ್ಟಿಸಿದರು.

ಡಿ.ಕೆ ಶಿವಕುಮಾರ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಕೈಗೊಂಡ ಸೋಲಾರ್ ವಿದ್ಯುತ್ ಉತ್ಪಾದನಾ ಪಾರ್ಕ್‌ಗಳ ಸ್ಥಾಪನೆ, ಕೆರೆಗಳ ಶುದ್ಧೀಕರಣ, ಶಾಲಾ-ಕಾಲೇಜುಗಳ ಉನ್ನತೀಕರಣ, ಎಲ್ಲಾ ಮನೆಗಳಿಗೆ ನೀರು ಸರಬರಾಜು, ಹೊಸ ಜಿಮ್‌ಗಳು-ಉದ್ಯಾನವನಗಳ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ವೀಡಿಯೊ ಸರಣಿಯಲ್ಲಿ ತೋರಿಸಲಾಗಿದೆ. ಅವರ ಕ್ಷೇತ್ರದಲ್ಲಿ ಹೊಸ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ನಿರ್ಮಾಣಕ್ಕೆ ಉತ್ತೇಜನ ನೀಡಲಾಗಿದೆ.

”ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲು ಕಂದಾಯ ಅಧಿಕಾರಿ ಶ್ರೀ ನಾರಾಯಣಪ್ಪನವರು ನಿರ್ಮಿಸಿದ ಕಾನಕಾನಹಳ್ಳಿ ಕೆರೆ ಇಂದು ಹೊಸ ರೂಪ ಪಡೆದುಕೊಂಡಿದೆ. ಇದು ನಾನು ಶಾಸಕನಾದ ನಂತರ ಕನಕಪುರದ ಜನತೆಗೆ ನೀಡಿದ ಕೊಡುಗೆ. ಈ ಉದ್ಯಾನವನವು ಅಭಿವೃದ್ಧಿಗೆ ಮಾದರಿಯಾಗಿದೆ. ಅದರ ಒಂದು ನೋಟ ಇಲ್ಲಿದೆ” ಎಂದು ಡಿ.ಕೆ ಶಿವಕುಮಾರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ವಿಡಿಯೋ ಸರಣಿ ಕುರಿತು ಟ್ವೀಟ್‌ ಮಾಡಿದ್ದಾರೆ.

“ಕನಕಪುರದ ಸೂರ್ಯ ರೈತ ಯೋಜನೆ ರೈತರನ್ನು ತಲೆ ಎತ್ತಿ ನಡೆಯುವಂತೆ ಮಾಡಿದೆ. ಕನಕಪುರವನ್ನು ಕರ್ನಾಟಕಕ್ಕೆ ಮಾದರಿಯನ್ನಾಗಿ ಮಾಡಲು ಸೌರಶಕ್ತಿಯನ್ನು ಹೇಗೆ ಬಳಸಲಾಗಿದೆ ಎಂಬುದನ್ನು ನೀವೇ ನೋಡಿ” ಎಂದಿರುವ ಡಿ.ಕೆ ಶಿವಕುಮಾರ್, ಕನಕಪುರ ಮಾದರಿಯನ್ನು ಇಟ್ಟುಕೊಂಡು ಕರ್ನಾಟಕವನ್ನು ಇನ್ನೂ ಹೆಚ್ಚಿನ ಅಭಿವೃದ್ಧಿಯತ್ತ ಮುನ್ನಡೆಸಬಹುದು ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.

ಈ ವಿಡಿಯೋ ಸರಣಿಯ ಮೂಲಕ ಕೆಪಿಸಿಸಿ ಅಧ್ಯಕ್ಷರು ತಾವು ಶಾಸಕರಾಗಿದ್ದ ಅವಧಿಯಲ್ಲಿ ಕನಕಪುರ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿಯನ್ನು ಕರ್ನಾಟಕದ ಜನತೆಗೆ ತೋರಿಸಲು ಬಯಸಿದ್ದು, ಮುಖ್ಯಮಂತ್ರಿಯಾಗುವ ಅವಕಾಶ ದೊರೆತಲ್ಲಿ ಇಡೀ ರಾಜ್ಯದಲ್ಲಿ ಇಂತಹ ಅಭಿವೃದ್ಧಿ ಆಗಲಿದೆ ಎಂಬ ಅಂಶವನ್ನು ಒತ್ತಿ ಹೇಳುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಅವರ ಆಪ್ತ ಮೂಲಗಳು ತಿಳಿಸಿವೆ.

ಕನಕಪುರ ಪ್ರದೇಶದ ನಿವಾಸಿಗಳು ಕೆಪಿಸಿಸಿ ಅಧ್ಯಕ್ಷರ ಕಾರ್ಯದ ಬಗ್ಗೆ ತೃಪ್ತಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದನ್ನು ಈ ವಿಡಿಯೋಗಳಲ್ಲಿ ಕಾಣಬಹುದಾಗಿದೆ. ರೈತರು ತಮ್ಮ ಪಂಪ್‌ಸೆಟ್‌ಗಳನ್ನು ಚಲಾಯಿಸಲು ಸೌರಶಕ್ತಿಯನ್ನು ಬಳಸುತ್ತಿದ್ದು, ನಿರಂತರ ವಿದ್ಯುತ್ ಸರಬರಾಜು ಮಾಡುತ್ತಿರುವ ಕನಕಪುರವನ್ನು ವಿದ್ಯುತ್ ಹೆಚ್ಚುವರಿ ಪ್ರದೇಶವನ್ನಾಗಿ ಮಾಡಿದ್ದಕ್ಕಾಗಿ ಜನರು ಡಿ.ಕೆ ಶಿವಕುಮಾರ್ ಅವರನ್ನು ಶ್ಲಾಘಿಸಿದ್ದಾರೆ. ಡಿ.ಕೆ ಶಿವಕುಮಾರ್ ಅವರು ಸ್ಥಾಪಿಸಿರುವ ಜಿಮ್ನಾಷಿಯಂಗಳು ಯುವಕರು ಸದೃಢರಾಗಿರಲು ಮತ್ತು ಮಾದಕ ವ್ಯಸನದಿಂದ ದೂರವಿರಲು ಸಹಾಯ ಮಾಡುತ್ತಿವೆ.

ಈ ವೀಡಿಯೊ ಸರಣಿಯ ಮೂಲಕ ಡಿ.ಕೆ ಶಿವಕುಮಾರ್ ಅವರು ಕರ್ನಾಟಕದ ಜನರಿಗೆ ತಾವು “ದೂರದರ್ಶಿತ್ವ ಹೊಂದಿರುವ ವ್ಯಕ್ತಿ” ಎಂಬುದನ್ನು ತಿಳಿಸುತ್ತಿದ್ದು, ರಾಜ್ಯದ ಅಭಿವೃದ್ಧಿಗೆ ಬದ್ಧರಾಗಿರುವ ವ್ಯಕ್ತಿ ಎಂಬುದನ್ನು ಮತದಾರರಿಗೆ ತೋರಿಸಿಕೊಟ್ಟಿದ್ದಾರೆ.

ಕೆಪಿಸಿಸಿ ಮುಖ್ಯಸ್ಥರು ಹಂಚಿಕೊಂಡ ವಿಡಿಯೋಗಳು ಹಳ್ಳಿಗಳಲ್ಲಿರುವ ಹೊಂಡಗಳನ್ನು ಕೆರೆಗಳನ್ನಾಗಿ ಹೇಗೆ ಪರಿವರ್ತಿಸಲಾಗಿದೆ ಮತ್ತು ಅವುಗಳು ಹೇಗೆ ಸ್ಥಳೀಯ ಪ್ರವಾಸಿ ತಾಣಗಳಾಗಿ ಹೊರಹೊಮ್ಮುತ್ತಿವೆ ಎಂದು ತೋರಿಸಿವೆ. ಕನಕಪುರದ ಎಲ್ಲಾ ಹಳ್ಳಿಗಳು ಪಟ್ಟಣಗಳನ್ನು ​​ಮತ್ತು ಧಾನ್ಯ ಮಾರುಕಟ್ಟೆಗಳನ್ನು ಸಂಪರ್ಕಿಸುವ ವಿಶಾಲವಾದ ರಸ್ತೆ ಜಾಲವನ್ನು ಹೊಂದಿರುವುದನ್ನು ಈ ವಿಡಿಯೋಗಳಲ್ಲಿ ದಾಖಲಿಸಲಾಗಿದೆ.

Share Post