BengaluruPolitics

ಕಾಂಗ್ರೆಸ್‌ ಪಕ್ಷಕ್ಕೆ ಬ್ರಿಜೇಶ್‌ ಕಾಳಪ್ಪ ರಾಜೀನಾಮೆ

ಬೆಂಗಳೂರು; ಚುನಾವಣೆಗಳು ಹತ್ತಿರವಾಗುತ್ತಿರುವಾಗಲೇ ದೇಶಾದ್ಯಂತ ಕಾಂಗ್ರೆಸ್‌ ತೊರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಕಾಂಗ್ರೆಸ್ ಪಕ್ಷದ ವಕ್ತಾರ ಹಾಗೂ ಸುಪ್ರೀಂ ಕೋರ್ಟ್‌ ವಕೀಲ ಬ್ರಿಜೇಶ್ ಕಾಳಪ್ಪ ಅವರು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣದಿಂದ ಪಕ್ಷ ತೊರೆಯುತ್ತಿರುವುದಾಗಿ ಅವರು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 

ಬ್ರಿಜೇಶ್ ಕಾಳಪ್ಪ ಅವರು ಕಾಂಗ್ರೆಸ್ ವಕ್ತಾರರಾಗಿ ಹಾಗೂ ಕಾನೂನು ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಹಿಂದೆ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಬಯಸಿದ್ದರು. ಸದ್ಯ ಅವರು ವಿಧಾನಪರಿಷತ್‌ ಟಿಕೆಟ್‌ ಆಕಾಂಕ್ಷಿ ಆಗಿದ್ದರು. ಆದ್ರೆ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ ಪಕ್ಷ ನನಗೆ ಹಲವು ಅವಕಾಶಗಳನ್ನು ನೀಡಿದೆ. ಅದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. 2013 ರಿಂದ ನಾನು ರಾಷ್ಟ್ರೀಯ ಹಾಗೂ ವಿವಿಧ ಮಾಧ್ಯಮಗಳಲ್ಲಿ ಕಾಂಗ್ರೆಸ್ ವಕ್ತಾರನಾಗಿ ಪಕ್ಷದ ಪರವಾಗಿ ಮಾತನಾಡಿದ್ದೇನೆ. 6,497 ಮಾಧ್ಯಮ ಚರ್ಚೆಗಳಲ್ಲಿ ಭಾಗಿಯಾಗಿ, ನನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ನಾನು ಈ ವಿಚಾರವಾಗಿ ನಿರಾಸಕ್ತನಾಗಿದ್ದೇನೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಈ ಮೂಲಕ 1997 ರಿಂದ ಆರಂಭವಾದ ನನ್ನ ಕಾಂಗ್ರೆಸ್ ಪಕ್ಷದ ಜೊತೆಗಿನ ಪಯಣವನ್ನು ಕೊನೆಗೊಳಿಸುತ್ತೇನೆ ಎಂದು ಸೋನಿಯಾಗಾಂಧಿಗೆ ಬರೆದ ಪತ್ರದಲ್ಲಿ ಬ್ರಿಜೇಶ್‌ ಕಾಳಪ್ಪ ಹೇಳಿದ್ದಾರೆ.

 

Share Post