BengaluruPolitics

ಸರ್ಕಾರದಲ್ಲಿ ಮೂರನೇ ಪವರ್‌ ಸೆಂಟರ್‌ಗೆ ಬೇಡಿಕೆ ಇಟ್ಟರಾ ಹಿರಿಯ ಕಾಂಗ್ರೆಸ್ಸಿಗರು..?

ಬೆಂಗಳೂರು; ರಾಜ್ಯದಲ್ಲಿ ಇರೋದು ಒಂದೇ ಸರ್ಕಾರ.. ಆದ್ರೆ ಇದ್ರಲ್ಲಿ ಎರಡು ಪವರ್‌ ಸೆಂಟರ್‌ಗಳಿವೆ… ಒಂದು ಸಿದ್ದರಾಮಯ್ಯ, ಮತ್ತೊಂದು ಡಿ.ಕೆ.ಶಿವಕುಮಾರ್‌… ಎರಡೂ ಗುಂಪುಗಳ ನಡುವೆ ಹೊಂದಾಣಿಕೆ ಕೊರತೆಯಿಂದ ತಿಕ್ಕಾಟ ಶುರುವಾಗಿದೆ. ಇದು ಕಾಂಗ್ರೆಸ್‌ ಹೈಕಮಾಂಡ್‌ಗೆ ತಲೆನೋವು ತಂದಿಟ್ಟಿದೆ.. ಹೀಗಾಗಿ ಎರಡು ಪವರ್‌ ಸೆಂಟರ್‌ಗಳನ್ನು ಕಂಟ್ರೋಲ್‌ ಮಾಡೋದಕ್ಕಾಗಿ ಮೂರನೇ ಪವರ್‌ ಸೆಂಟರ್‌ ಸೃಷ್ಟಿ ಮಾಡೋದಕ್ಕೆ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

ಅಧಿಕಾರ ಹಂಚಿಕೆ, ಸಂಪುಟದಲ್ಲಿ ಬದಲಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಕೆಲವರು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ ನವೆಂಬರ್‌ 1ರಂದು ರಣದೀಪ್‌ ಸುರ್ಜೇವಾಲಾ ಹಾಗೂ ಕೆ.ಸಿ.ವೇಣುಗೋಪಾಲ್‌ ಅವರು ಬೆಂಗಳೂರಿಗೆ ಆಗಮಿಸಿ ಹೈವೋಲ್ಟೇಜ್‌ ಮೀಟಿಂಗ್‌ ಮಾಡಿದ್ದರು. ಇದ್ರಲ್ಲಿ ಯಾರೂ ಕೂಡಾ ಬಹಿರಂಗ ಹೇಳಿಕೆ ನೀಡದಂತೆ ಕಟ್ಟು ನಿಟ್ಟಿನ ಸೂಚನೆ ನೀಡಿ ಹೋಗಿದ್ದಾರೆ. ಆದ್ರೂ ಕೂಡಾ ಎರಡೂ ಗುಂಪುಗಳ ನಡುವಿನ ತಿಕ್ಕಾಟ ಮುಂದುವರೆಯೂ ಸಾಧ್ಯತೆ ಅಂತೂ ಇದ್ದೇ ಇದೆ. ಕಾರಣಕ್ಕಾಗಿಯೇ ಕೆಲವರು ನಿನ್ನೆಯ ಸಭೆಯಲ್ಲಿ ಹೈಕಮಾಂಡ್‌ ನಾಯಕರ ಮುಂದೆ ಹೊಸ ಡಿಮ್ಯಾಂಡ್‌ ಇಟ್ಟಿದ್ದಾರಂತೆ.

ಈಗ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಇಬ್ಬರೇ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ… ಹೀಗಾಗಿ ಕೆಲವೊಂದು ಮನಸ್ತಾಪಗಳು ಶುರುವಾಗಿದೆ. ಹೀಗಾಗಿ ಎರಡು ಪವರ್‌ ಸೆಂಟರ್‌ಗಳ ಮಧ್ಯೆ ಮೂರನೇ ಪವರ್‌ ಸೆಂಟರ್‌ ತಂದರೆ ಒಳ್ಳೆಯದು ಎಂದು ಕೆಲ ಹಿರಿಯ ಪ್ರಭಾವಿ ನಾಯಕರು ಹೇಳಿದ್ದಾರೆ ಎನ್ನಲಾಗಿದೆ. ಅಂದರೆ ಮೂರನೇ ಪವರ್‌ ಸೆಂಟರ್‌ ಆಗಿ ಕೋರ್‌ ಕಮಿಟಿ ರಚನೆ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರಂತೆ. ಶಾಮನೂರು ಶಿವಶಂಕರಪ್ಪ, ಸತೀಶ್‌ ಜಾರಕಿಹೊಳಿ ಸೇರಿದಂತೆ ಹಲವು ಹಿರಿಯ ನಾಯಕರು ಇಂತಹದ್ದೊಂದು ಬೇಡಿಕೆಯನ್ನು ಹೈಕಮಾಂಡ್‌ ಮುಂದಿಟ್ಟಿದ್ದಾರೆ.

ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹೊರಗಿನವರು ಮೂಗು ತೂರಿಸುತ್ತಿದ್ದಾರೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಅಸಮಾಧಾನಗೊಂಡಿದ್ದಾರೆ. ಹೀಗಾಗಿಯೇ ಅವರು 20 ಶಾಸಕರನ್ನು ಗುಂಪು ಮಾಡಿಕೊಂಡು ಮೈಸೂರಿಗೆ ಪ್ರವಾಸ ಹೊರಡಲು ತೀರ್ಮಾನ ಮಾಡಿದ್ದರು. ಅದಕ್ಕಾಗಿ ಬಸ್‌ ಕೂಡಾ ಬುಕ್‌ ಮಾಡಿದ್ದರು. ಆಗ ರಾತ್ರೋರಾತ್ರಿ ಬೆಂಗಳೂರಿಗೆ ಬಂದಿದ್ದ ಕೆ.ಸಿ.ವೇಣುಗೋಪಾಲ್‌ ಅವರು, ಸತೀಶ್‌ ಜಾರಕಿಹೊಳಿ ಮನವೊಲಿಸಿ ಪ್ರವಾಸವನ್ನು ನಿಲ್ಲಿಸಿದ್ದರು. ಈಗ ಮತ್ತೆ ಸತೀಶ್‌ ಜಾರಕಿಹೊಳಿ ವಿದೇಶ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಈ ನಡುವೆಯೇ ಕೆ.ಸಿ.ವೇಣುಗೋಪಾಲ್‌ ಹಾಗೂ ರಣದೀಪ್‌ ಸುರ್ಜೇವಾಲಾ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹೈವೋಲ್ಟೇಜ್‌ ಮೀಟಿಂಗ್‌ ನಡೆಸಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೇ ರಾಜ್ಯದ ಎಲ್ಲಾ ನಿರ್ಧಾರಗಳನ್ನು ಕೈಗೊಂಡರೆ ಸರಿಯಾಗುವುದಿಲ್ಲ. ಅವರ ನಿರ್ಧಾರಗಳು ಕೆಲವರಿಗೆ ಇಷ್ಟವಾಗುವುದಿಲ್ಲ. ಜೊತೆಗೆ ಯಾವುದೇ ನಿರ್ಧಾರ ಕೈಗೊಳ್ಳುವಾಗಲೂ, ಇಬ್ಬರ ನಡುವೆ ಪ್ರತಿಷ್ಠೆಯ ಕದನ ಏರ್ಪಡುತ್ತೆ… ಗೊಂದಲಗಳಿಗೂ ಕಾರಣವಾಗುತ್ತೆ… ಇದರಿಂದಾಗಿ ಯಾವುದೇ ನಿರ್ಧಾರಗಳು ಹೊರಬೀಳುವುದು ಕೂಡಾ ತಡವಾಗುತ್ತದೆ ಎಂದು ಹಿರಿಯ ನಾಯಕರು ಹೈಕಮಾಂಡ್‌ ನಾಯಕರ ಮುಂದೆ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಎಲ್ಲಾ ಜಾತಿ, ಸಮುದಾಯಕ್ಕೆ ಆದ್ಯತೆ ನೀಡಿ 10 ಜನ ಪ್ರಮುಖರ ಕೋರ್ ಕಮಿಟಿ ರಚಿಸಲು ಸಲಹೆ ಕೊಟ್ಟಿದ್ದಾರೆ. ಕೋರ್ ಕಮಿಟಿ ಮೂಲಕ ಎಲ್ಲಾ ನಿರ್ಧಾರಗಳೂ ತೀರ್ಮಾನವಾದರೆ ಅದು ಸಾಮೂಹಿಕ ಅಭಿಪ್ರಾಯವಾಗುತ್ತದೆ. ಇದರಿಂದ ಗೊಂದಲ, ಪ್ರತಿಷ್ಠೆಯ ಫೈಟ್‌ಗಳು ಕಡಿಮೆಯಾಗುತ್ತವೆ ಅನ್ನೋದು ಆ ಹಿರಿಯರ ಸಲಹೆ.

ಇದರಿಂದಾಗಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಪ್ರತಿಷ್ಠೆಯ ಕದನಕ್ಕೂ ಬ್ರೇಕ್ ಬೀಳುತ್ತೆ, ಜೊತೆಗೆ ಸರ್ಕಾರದಲ್ಲಿ ಬಣ ರಾಜಕಾರಣಕ್ಕೂ ತಿಲಾಂಜಲಿ ಹಾಡಬಹುದು. ಕೋರ್‌ ಕಮಿಟಿ ರಚನೆ ಮಾಡುವುದರಿಂದ ಸಾಮೂಹಿಕ ಅಭಿಪ್ರಾಯಕ್ಕೆ ಮಣೆ ಹಾಕಿದಂತಾಗುತ್ತದೆ. ಈ ಎಲ್ಲಾ ಕಾರಣ ಮುಂದಿಟ್ಟು ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯ ಕಾಂಗ್ರೆಸ್ ಗೆ ಕೋರ್ ಕಮಿಟಿ ರಚಿಸುವಂತೆ ಒತ್ತಡ ಹೇರತೊಡಗಿದ್ದಾರೆ ಎನ್ನಲಾಗಿದೆ. ಆದ್ರೆ ಈ ಬಗ್ಗೆ ಕಾಂಗ್ರೆಸ್‌ ಯಾವ ತೀರ್ಮಾನ ಕೈಗೊಳ್ಳುತ್ತದೋ ಕಾದುನೋಡಬೇಕು.

Share Post