ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲು ಎಷ್ಟು ಸಮಯ ತೆಗೆದುಕೊಳ್ಳುತ್ತೆ..?
ಬೆಂಗಳೂರು; ಚಂದ್ರಯಾನ-3 ಬುಧವಾರ ಸಂಜೆ 6.04ಕ್ಕೆ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್‌ಗೆ ಸಿದ್ಧತೆ ನಡೆಸುತ್ತಿದೆ. ನಿಗದಿತ ವೇಳಾಪಟ್ಟಿಯಂತೆ ಈ ಪ್ರಕ್ರಿಯೆ ನಡೆಯುತ್ತದೆ. ಸಂಜೆ 5:20 ರಿಂದ ನೇರ ಪ್ರಸಾರ ಪ್ರಾರಂಭವಾಗಲಿದೆ ಎಂದು ಇಸ್ರೋ ಹೇಳಿದೆ.
ಸಂಪೂರ್ಣ ಲ್ಯಾಂಡಿಂಗ್ ಪ್ರಕ್ರಿಯೆಯು 30 ನಿಮಿಷಗಳವರೆಗೆ ತೆಗೆದುಕೊಳ್ಳಬಹುದು ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ತಿಳಿಸಿದ್ದಾರೆ. “ಲ್ಯಾಂಡರ್ ಮಾಡ್ಯೂಲ್‌ನ ಸ್ಥಿತಿ, ವ್ಯವಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ, ಸುತ್ತಮುತ್ತಲಿನ ಪರಿಸರ ಹೇಗಿದೆ? ಅದು ಯಾವ ಸಮಯದಲ್ಲಿ ಇಳಿಯುತ್ತದೆ ಎಂಬುದು ಅನೇಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಪೂರ್ವ ನಿರ್ಧರಿತ ಸ್ಥಳದಲ್ಲಿ ಇಳಿಯಬೇಕೋ ಅಥವಾ ಪರಿಸ್ಥಿತಿಗೆ ಅನುಗುಣವಾಗಿ ಹೊಸ ಜಾಗದಲ್ಲಿ ಇಳಿಯಬೇಕೋ ಎಂಬುದನ್ನು ನಿರ್ಧರಿಸುತ್ತೇವೆ ಎಂದು ಸೋಮನಾಥ್ ಹೇಳಿದ್ದಾರೆ.
ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಮೃದುವಾಗಿ ಇಳಿಯುವುದಾದರೆ, ಭಾರತವು ಹಾಗೆ ಮಾಡಿದ ಮೊದಲ ದೇಶವಾಗಲಿದೆ. ಅಲ್ಲದೆ, ಅಮೆರಿಕ, ಚೀನಾ ಮತ್ತು ಸೋವಿಯತ್ ಒಕ್ಕೂಟದ ನಂತರ ಭಾರತವು ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯುವ ನಾಲ್ಕನೇ ರಾಷ್ಟ್ರವಾಗಲಿದೆ.