BengaluruCinema

EXCLUSIVE INTERVIEW: ಮೆಟ್ರೋ, ನಂದಿ ರೋಪ್‌ವೇಗೆ ಶಂಕರ್‌ನಾಗ್‌ ಹೆಸರಿಡಬೇಕು; ಮಾಸ್ಟರ್‌ ಮಂಜುನಾಥ್‌

80-90ರ ದಶಕದಲ್ಲಿ ದೂರದರ್ಶನದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗಿದ್ದಂತಹ ಧಾರಾವಾಹಿ ಮಾಲ್ಗುಡಿ ಡೇಸ್‌… ಅದನ್ನು ಇಂದಿಗೂ ಜನ ಮರೆಯೋದಿಲ್ಲ… ಸ್ವಾಮಿ ಹಾಗೂ ಅವರ ಸಂಗಡಿಗರ ಪಾತ್ರಗಳು ಈಗಲೂ ಜನರ ಕಣ್ಣ ಮುಂದೆ ಬರುತ್ತವೆ… ಹಾಗೆ ಜನಮಾನಸದಲ್ಲಿ ಸದಾ ಉಳಿದುಹೋಗುವಂತೆ ಚಿತ್ರೀಕರಣ ಮಾಡಿದ ಕೀರ್ತಿ ಶಂಕರ್‌ ನಾಗ್‌ ಅವರಿಗೆ ಸಲ್ಲುತ್ತದೆ. ಅಂದಹಾಗೆ, ಖ್ಯಾತ ಇಂಗ್ಲೀಷ್‌ ಕಾದಂಬರಿಕಾರ ಆರ್‌.ಕೆ.ನಾರಾಯಣ್‌ ಬರೆದ ಕಾದಂಬರಿ ಆಧರಿಸಿ ಈ ಧಾರಾವಾಹಿ ಚಿತ್ರೀಕರಣ ಮಾಡಲಾಗಿತ್ತು. ಈ ಧಾರಾವಾಹಿ ಎವರ್‌ ಗ್ರೀನ್‌.. ಅಂದಹಾಗೆ, ಆರ್‌.ಕೆ.ನಾರಾಯಣ್‌ ಅವರು ಮೈಸೂರಿನ ಯಾದವಗಿರಿಯಲ್ಲಿ ನೆಲೆಸಿದ್ದರು. ಆರ್‌.ಕೆ.ನಾರಾಯಣ್‌ ಅವರಿದ್ದ ಮನೆಯ ಬಳಿ ಸರ್ಕಲ್‌ನಲ್ಲಿ ಮಾಲ್ಗುಡಿ ಡೇಸ್‌ನಲ್ಲಿ ಬರುವ ಸ್ವಾಮಿ ಮತ್ತು ಸಂಗಡಿಗರ ಪಾತ್ರಗಳ ಮೂರ್ತಿಗಳನ್ನು ಸ್ಥಾಪನೆ ಮಾಡಲಾಗಿದೆ. ಉದ್ಯಮಿ ಪಿ.ವಿ. ಗಿರಿ ಅವರ ಕುಟುಂಬದ ಸಿದ್ಧಾರ್ಥ ಗ್ರೂಪ್ಸ್‌ ಈ ಪ್ರತಿಮೆಗಳನ್ನು ಸ್ಥಾಪನೆ ಮಾಡಿದೆ. ಸ್ಥಳೀಯ ಪಾಲಿಕೆ ಹಾಗೂ ಯಾದವಗಿರಿ ನಿವಾಸಿಗಳ ಶ್ರಮ ಕೂಡಾ ಇದರ ಹಿಂದೆ. ಇತ್ತೀಚೆಗೆ ಈ ಪ್ರತಿಮೆಗಳನ್ನು ಅನಾವರಣಗೊಳಿಸಲಾಯಿತು. ಮಾಲ್ಗುಡಿ ಡೇಸ್‌ನಲ್ಲಿ ಸ್ವಾಮಿ ಪಾತ್ರದಾರಿಯಾಗಿದ್ದ ಮಾಸ್ಟರ್‌ ಮಂಜುನಾಥ್‌ ಅವರು ಕೂಡಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಂದಹಾಗೆ ಮಾಲ್ಗುಡಿ ಡೇಸ್‌ ಎಂದೆಂದಿಗೂ ಮರೆಲಾಗದ್ದು, ಹಾಗೆಯೇ ಸ್ವಾಮಿ ಪಾತ್ರ ಕೂಡಾ. ಸ್ವಾಮಿ ಪಾತ್ರ ನಿರ್ವಹಿಸಿದ್ದ ಮಾಸ್ಟರ್ ಮಂಜುನಾಥ್‌ ಅವರು ಮಾಲ್ಗುಡಿ ಡೇಸ್‌ ಪ್ರತಿಮೆಗಳ ಅನಾವರಣವಾದ ಸಂದರ್ಭದಲ್ಲಿ ನ್ಯೂಸ್‌ ಎಕ್ಸ್‌ ಕನ್ನಡ ಜಾಲತಾಣಕ್ಕೆ ಎಕ್ಸ್‌ಕ್ಲ್ಯೂಸಿವ್‌ ಸಂದರ್ಶನ ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ.

ಪ್ರಶ್ನೆ-೧: ಸರ್‌, ನಮಸ್ತೆ, ಮೈಸೂರಿನಲ್ಲಿ ಸ್ವಾಮಿ ಮತ್ತು ಸಂಗಡಿಗರ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ.‌ ಮೂರು ದಶಕಗಳು ಕಳೆದರೂ ಜನ ಮಾಲ್ಗುಡಿ ಡೇಸ್ ಮರೆಯುತ್ತಿಲ್ಲ. ನಿಮಗೆ ಹೇಗನಿಸುತ್ತೆ..?

ಮಾಸ್ಟರ್‌ ಮಂಜುನಾಥ್‌; ನಿಜ ಹೇಳಬೇಕು ಅಂದ್ರೆ ನನ್ನನ್ನು ಕಾರ್ಯಕ್ರಮಕ್ಕೆ ಕರೆದಾಗ ತುಂಬಾ ಡೀಟೇಲ್ಸ್‌ ಕೊಟ್ಟಿರಲಿಲ್ಲ. ಆರ್‌.ಕೆ.ನಾರಾಯಣ್‌ ಅವರ ನೆನಪಲ್ಲಿ ಅವರ ಮನೆ ಬಳಿಯ ಒಂದು ಸರ್ಕಲ್‌ನಲ್ಲಿ ಮೂರ್ತಿ ನಿರ್ಮಾಣ ಮಾಡಿದ್ದೇವೆ. ಅದರ ಅನಾವರಣಕ್ಕೆ ಬರಬೇಕು ಎಂದು ಕರೆದಿದ್ದರು. ನಾನು ಆರ್‌.ಕೆ.ನಾರಾಯಣ್‌ ಅವರ ಪ್ರತಿಮೆ ಸ್ಥಾಪಿಸಿರಬಹುದು ಅಂತ ಅಂದುಕೊಂಡಿದ್ದೆ. ಆದ್ರೆ ಅಲ್ಲಿ ಹೋಗಿ ನೋಡಿದಾಗ ನನಗೆ ಅಚ್ಚರಿಯಾಯಿತು. ತುಂಬಾನೇ ಖುಷಿಯೂ ಆಯಿತು. ಮಾಲ್ಗುಡಿ ಡೇಸ್‌ ಪಾತ್ರದಾರಿಗಳಾದ ಸ್ವಾಮಿ, ಮಣಿ ಹಾಗೂ ಸೋಮು ಮೂರ್ತಿಗಳನ್ನು ಅಲ್ಲಿ ಸ್ಥಾಪಿಸಲಾಗಿತ್ತು.

ತುಂಬಾ ದಿನಗಳಿಂದ ಇಲ್ಲಿ ಮೂರ್ತಿಗಳನ್ನು ಸ್ಥಾಪನೆ ಮಾಡೋದಕ್ಕೆ ಟ್ರೈ ಮಾಡ್ತಿದ್ರು ಅನ್ನೋದು ನನಗೆ ಗೊತ್ತಾಯ್ತು. ಸುಮಾರು ಎರಡು ಮೂರು ವರ್ಷಗಳಿಂದ ಸಿದ್ಧಾರ್ಥ ಗ್ರೂಪ್‌ ನವರು ಎಫರ್ಟ್‌ ಹಾಕಿ, ಸರ್ಕಾರದಿಂದ ಅನುಮತಿ ಪಡೆದು ಮೂರ್ತಿಗಳನ್ನು ಸ್ಥಾಪಿಸಿದ್ದಾರೆ. ತುಂಬಾ ಖುಷಿಯಾಗಿದ್ದು ಅಂದ್ರೆ ಯಾದವಗಿರಿ ನಿವಾಸಿಗಳ ಸಂಘದವರು ಹಾಗೂ ಪಾಲಿಕೆಯವರು ಕೂಡಾ ಇದಕ್ಕೆ ಕೈಜೋಡಿಸಿರೋದು. ಹೀಗೆಲ್ಲಾ ಶ್ರಮ ವಹಿಸಿ ಪ್ರತಿಮೆಗಳನ್ನು ಸ್ಥಾಪಿಸಿದ್ದರ ಬಗ್ಗೆ ತಿಳಿದು ನನಗೆ ಅದಿನ್ನೂ ಎಕ್ಸ್ಟ್ರಾ ಸ್ಪೆಷಲ್‌ ಅನಿಸಿತು. ಆರ್‌.ಕೆ.ನಾರಾಯಣ್‌ ಅವರು ಓಡಾಡಿದ ಜಾಗದಲ್ಲೇ ನಾನು ಶಂಕರ್‌ ನಾಗ್‌ ಅವರ ದಯೆಯಿಂದ ಮಾಡಿದ ಸ್ವಾಮಿ ಪಾತ್ರದ ಮೂರ್ತಿ ಸ್ಥಾಪನೆ ಮಾಡಿದ್ದಾರೆ. ಆರ್‌.ಕೆ.ನಾರಾಯಣ್‌ ಅವರ ಕಡೆ ನೋಡಿಕೊಂಡಿರೋ ತರಾ ಆ ಮೂರ್ತಿ ನಿರ್ಮಿಸಲಾಗಿದೆ. ಇದರಿಂದ ನನಗೆ ತುಂಬಾನೇ ಖುಷಿಯಾಯಿತು.

ಪ್ರಶ್ನೆ-೨: ಮೂರ್ತಿಗಳನ್ನು ತುಂಬಾ ಸುಂದರವಾಗಿ ರೂಪಿಸಿದ್ದಾರೆ. ಅವುಗಳ ಸೃಷ್ಟಿಕರ್ತ, ಅದರ ತಯಾರಿ ಬಗ್ಗೆ ಏನಾದರೂ ಗೊತ್ತಾ ನಿಮಗೆ..?

ಮಾಸ್ಟರ್‌ ಮಂಜುನಾಥ್‌; ಮೊದಲು ನಾನು ಕಲ್ಲಿನಲ್ಲಿ ಕೆತ್ತನೆ ಮಾಡಿರೋದು ಎಂದುಕೊಂಡೆ. ನಂತರ ಗೊತ್ತಾಯ್ತು ಅಂದು ಕಂಚಿನಲ್ಲಿ ತಯಾರು ಮಾಡಿರೋದು ಅಂತ. ಮೂರೂ ಮೂರ್ತಿಗಳಿಗೆ 400 ಕೆಜಿಯಷ್ಟು ಕಂಚು ಬಳಕೆ ಮಾಡಲಾಗಿದೆಯಂತೆ. ರವಿರಾಜ್‌ ಎಂ.ಡಿ. ಅವರು ಈ ಮೂರ್ತಿಗಳನ್ನು ತಯಾರು ಮಾಡಿದ ಕಲಾವಿದ ಎಂದು ಗೊತ್ತಾಯ್ತು.

ಪ್ರಶ್ನೆ-೩: ಮೂರೂವರೆ ದಶಕ ಕಳೆದರೂ ಮಾಲ್ಗುಡಿ ಡೇಸ್‌ ಈಗಲೂ ಜನಮಾನಸದಲ್ಲಿ ಹಾಗೆಯೇ ಉಳಿದಿದೆ. ಇದರ ಬಗ್ಗೆ ನಿಮಗೆ ಏನನಿಸುತ್ತೆ..?

ಮಾಸ್ಟರ್‌ ಮಂಜುನಾಥ್‌; ಹ್ಹಹ್ಹಹ್ಹ.. ಒಂದು ಕ್ಲಾಸಿಕ್‌ ಸ್ಟೋರಿ… ಆ ಮೇಲೆ ಅದಕ್ಕೆ ಪೂರ್ತಿ ಜೀವ ಕೊಟ್ಟವರು ಶಂಕರ್‌ ನಾಗ್‌ ಅವರು. ಜೊತೆಗೆ ಅವರ ಟೀಂ. ಒಟ್ಟು ನಮ್ಮ ಟೀಂ ಎಫರ್ಟ್‌ ಏನಿತ್ತು, ಅದು ಜನರನ್ನು ಆಕರ್ಷಿಸಿತು. 85-86 ನಲ್ಲಿ ಆಗುಂಬೆಯಂತಹ ರಿಮೋಟ್‌ ಪ್ಲೇಸ್‌ನಲ್ಲಿ, ಇವತ್ತೂ ರಿಮೋಟ್‌ ಪ್ಲೇಸೇ ಅದು. ಅವತ್ತು ಇನ್ನೂ ರಿಮೋಟ್‌ ಪ್ರದೇಶವಾಗಿತ್ತು. ಆಗ ಅಲ್ಲಿ ಒಂದು ಪೋಸ್ಟ್‌ ಆಫೀಸ್‌ ಇತ್ತು. ಅಲ್ಲಿ ಒಂದೇ ಒಂದು ಫೋನ್‌ ಇತ್ತು. ಅದು ಬಿಟ್ಟರೆ ನಮಗೆ ಹೊರಗಿನ ಪ್ರಪಂಚದ ಸಂಪರ್ಕವೇ ಇರಲಿಲ್ಲ. ಅಂತಹ ಒಂದು ಚಾಲೆಂಜಿಂಗ್‌ ಜಾಗದಲ್ಲಿ ಇಂತಹ ಒಂದು ಎಫರ್ಟ್‌ ಹಾಕಿ ಅಂಥ ಒಂದು ಔಟ್‌ಪುಟ್‌ ತಗೊಂಡಿರೋದಕ್ಕೆ ಜನ ಅದನ್ನು ಮರೆಯುತ್ತಿಲ್ಲ. ಹೀಗಾಗಿಯೇ ಮೂರೂವರೆ ದಶಕವಾದರೂ ಎಲ್ಲರ ಮನಸ್ಸಿನಲ್ಲೂ ಅದು ಉಳಿದುಹೋಗಿದೆ. ಈಗಲೂ ಮಾಲ್ಗುಡಿ ಡೇಸ್‌ ಅಂದ ತಕ್ಷಣ ಆ ಇಮೇಜ್‌ ನೆನಪಿಗೆ ಬರುತ್ತೆ. ಆಗುಂಬೆಯಲ್ಲಿ ಇದ್ದಂತಹ ಜಾಗ ನೆನಪಿಗೆ ಬರುತ್ತೆ. ಕೆಲವೊಂದೇ ನಟರಿಗೆ ಆ ಪುಣ್ಯ ಸಿಗುತ್ತೆ. ಲೆಗಸಿ ಇರುವಂತಹ ಪಾತ್ರ ತುಂಬಾ ಕಡಿಮೆ ಜನಕ್ಕೆ ಸಿಗೋದು. ನನಗೆ ಚಿಕ್ಕ ವಯಸ್ಸಿನಲ್ಲೇ ಸಿಕ್ಕಿದ್ದು ತುಂಬಾ ಖುಷಿ ಅನಿಸುತ್ತೆ.

ಪ್ರಶ್ನೆ-೪; ಮಾಲ್ಗುಡಿ ಡೇಸ್‌ ಚಿತ್ರೀಕರಣದ ಸಮಯದ ಯಾವುದಾದರೂ ಒಂದು ಮರೆಯಲಾಗದ ಘಟನೆ ಹೇಳಬಹುದಾ..?

ಮಾಸ್ಟರ್‌ ಮಂಜುನಾಥ್‌; ಇಡೀ ಚಿತ್ರೀಕರಣವೇ ಮರೆಯಲು ಆಗದಂತಹ ಘಟನೆ. ಬಟ್‌, ಶಂಕರ್‌ ನಾಗ್‌ ಅವರಿಗೆ ಈ ಜಾಗದಲ್ಲಿ ಇದು ಆಗಲ್ಲ ಅನ್ನೋ ಕಾನ್ಸೆಪ್ಟೇ ಗೊತ್ತಿರಲಿಲ್ಲ. ನೆಕ್ಸ್ಟ್‌ ಡೇ ಈ ಜಾಗದಲ್ಲಿ ಒಂದು ಮಾರ್ಕೆಟ್‌ ಇರಬೇಕು ಅಂದ್ರೆ ಅದು ಇರ್ತಾ ಇತ್ತು. ಒಂದು ರೋಡ್‌ ರೋಲರ್‌ ಬೇಕು ಅಂದ್ರೆ ಬಂದ್ಬಿಡೋದು. ಟೆಂಪೋ ಬೇಕು ಅಂದ್ರೆ ಅಲ್ಲಿಗೆ ತರಿಸಿರೋರು. ಅಂದರೆ ಶಂಕರ್‌ ನಾಗ್‌ ಬೇಕಿದ್ದನ್ನು ಮಾಡಿ ತೋರಿಸುತ್ತಿದ್ದರು. ಇದು ಆಗಲೇಬೇಕು ಅಂತಿದ್ರೆ ಮಾರ್ಗ ಇದ್ದೇ ಇರುತ್ತೆ ಅನ್ನೋ ನಂಬಿಕೆ ಇದೆಯಲ್ಲ ಅದು ನನ್ನ ಇಡೀ ಜೀವನಕ್ಕೆ ಅಳವಡಿಕೆಯಾಗಿದೆ. ಇದು ಆಗಲ್ಲ ಅನ್ನೋದಲ್ಲ, ಯಾಕೆ ಆಗಲ್ಲ, ಎಲ್ಲದಕ್ಕೂ ಒಂದು ದಾರಿ ಇರುತ್ತೆ.  ಆಗಲ್ಲ ಅನ್ನೋದು ಯಾವುದೂ ಇಲ್ಲ ಅನ್ನೋದನ್ನು ನಾನು ಈ ಚಿತ್ರೀಕರಣದ ಕಾರಣದಿಂದಾಗಿ ನನ್ನಲ್ಲಿ ಅಳವಡಿಸಿಕೊಂಡೆ.

ಪ್ರಶ್ನೆ-೫; ಶಂಕರ್‌ನಾಗ್‌ ಅವರು ಮೆಟ್ರೋ, ನಂದಿ ಬೆಟ್ಟಕ್ಕೆ ರೋಪ್‌ವೇ ಮುಂತಾದ ಕನಸು ಕಂಡಿದ್ದರು. ಈಗ ಅವೆಲ್ಲಾ ನನಸಾಗುತ್ತಿವೆ. ನಿಮಗೆ ಏನನಿಸುತ್ತೆ..?

ಮಾಸ್ಟರ್‌ ಮಂಜುನಾಥ್‌; ಶಂಕರ್‌ ನಾಗ್‌ ಅವರ ಕನಸುಗಳು ಒಂದೊಂದಾಗಿ ಈಗ ನನಸಾಗುತ್ತಿವೆ. ಅಂದ್ರೆ ಶಂಕರ್‌ ನಾಗ್‌ ಅವರ ಕನಸುಗಳನ್ನು ಪೂರ್ಣ ಮಾಡೋದಕ್ಕೆ ಮೂವತ್ತು ವರ್ಷ ಬೇಕಾಯ್ತು. ಅಂದ್ರೆ ಅವರಿಗೆ ಎಷ್ಟು ಮುಂದಾಲೋಚನೆ ಇತ್ತು ಅನ್ನೋದು ನಮಗೆ ಅರ್ಥವಾಗುತ್ತೆ.

ಪ್ರಶ್ನೆ-೬; ಶಂಕರ್‌ನಾಗ್‌ ಅವರು ಈಗ ಇದ್ದಿದ್ದರೆ ಹೇಗಿರುತ್ತಿತ್ತು..?

ಮಾಸ್ಟರ್‌ ಮಂಜುನಾಥ್‌; ನಾವು ಪ್ರಪಂಚದಲ್ಲಿ ಸಾಫ್ಟ್‌ವೇರ್‌ನಲ್ಲಿ ಕಾಂಪೀಟ್‌ ಮಾಡ್ತಿದೀವಿ. ಶಂಕರ್‌ ನಾಗ್‌ ಅವರು ಇದ್ದಿದ್ದರೆ ಇನ್ಫ್ರಾಸ್ಟ್ರಕರ್‌ ಅಲ್ಲೂ ಕಾಂಪೀಟ್‌ ಮಾಡ್ತಾ ಇದ್ವಿ. ಲೈಫ್‌ ಸ್ಟೈಲ್‌ನಲ್ಲಿ ನಾವು ಇಡೀ ಪ್ರಪಂಚದ ದೇಶಗಳನ್ನು ಕಾಂಪೀಟ್‌ ಮಾಡ್ತಾ ಇದ್ವಿ. ಬರೀ ಚಿತ್ರರಂಗ ಅಷ್ಟೇ ಅಲ್ಲ, ಎಲ್ಲಾ ರಂಗಗಳಲ್ಲೂ ನಾವು ಯಶಸ್ಸು ಗಳಿಸ್ತಾ ಇದ್ವಿ. 92ರಲ್ಲೇ ಅವರು ಡಿಜಿಟಲ್‌ ಆನಿಮೇಷನ್‌ ತರಬೇಕು ಅಂತ ಹೊರಟಿದ್ದರು. ತುಂಬಾ ಇಂಪಾರ್ಟೆಂಟ್‌ ಏನು ಅಂದ್ರೆ ಪ್ರತಿಯೊಂದು ಅವರ ಕನಸುಗಳೇನಿತ್ತು. ಆ ಮೆಟ್ರೋಗೆ, ನಂದಿ ರೋಪ್‌ವೇಗೆ, ಬಡವರಿಗೆ ಪ್ರೀಕಾಸ್ಟಿಂಗ್‌ ಮೋಲ್ಡಿಂಗ್‌ ಮನೆಗಳನ್ನು ಕಟ್ಟಿಸೋದಿರಲಿ, ಅದೇ ರೀತಿ ಗೋಸ್ಟ್‌ ಎಂಬ ಆನಿಮೇಷನ್‌ ಸಿನಿಮಾ ಬಂದಿತ್ತು. ಅದೇ ಟೆಕ್ನಾಲಜಿಯನ್ನು ಇಲ್ಲಿ ತರಬೇಕು ಅಂತ ಶಂಕರ್‌ ನಾಗ್‌ ಅವರು ಎಫರ್ಟ್‌ ಹಾಕಿದ್ದರು. ಮೆಟ್ರೋ, ರೋಪ್‌ಗಳ ಡೀಟೇಲ್‌ ಪ್ರಾಜೆಕ್ಟ್‌ನ್ನು ಮಾಡಿ ಸರ್ಕಾರಕ್ಕೆ ಕೊಟ್ಟಿದ್ದರು. ಅದನ್ನು ಅವರು ಸ್ವಂತ ಖರ್ಚಿನಲ್ಲಿ ಮಾಡಿದ್ದರು ಅನ್ನೋದನ್ನು ನಾವು ನೆನಪಲ್ಲಿ ಇಟ್ಟುಕೊಳ್ಳಬೇಕು. ನಂದಿ ರೋಪ್‌ವೇ ಗಾಗಿ ಅಲ್ಲಿ ಜಾಗ ತಗೊಂಡು ನೀವು ಪರ್ಮಿಷನ್‌ ಕೊಡಿ ನಾನು ಎಲ್ಲಾ ಮಾಡುತ್ತೇನೆ ಎಂದು ಮುಂದೆ ನುಗ್ಗಿದವರು ಕೂಡಾ ಶಂಕರ್‌ ನಾಗ್‌ ಅವರು.

ಹೀಗಾಗಿ ನನ್ನ ಆಸೆ ಏನು ಅಂದ್ರೆ, ಮೆಟ್ರೋ ಅವರ ಕನಸಾಗಿತ್ತು. ಹೀಗಾಗಿ ಮೆಟ್ರೋ ಸ್ಟೇಷನ್‌ ಒಂದಕ್ಕೆ ಅವರ ಹೆಸರಿಡಬೇಕು. ನಂದಿ ರೋಪ್‌ ವೇ ಮಾಡಿದಾಗ ಅದಕ್ಕೆ ಶಂಕರ್‌ ನಾಗ್‌ ಹೆಸರಿಡಬೇಕು. ಈ ಮೂಲಕವಾದರೂ ಶಂಕರ್‌ ನಾಗ್‌ ಅವರಿಗೆ ಗೌರವ ಸೂಚಿಸಬೇಕು. ಈ ಮೂಲಕ ಶಂಕರ್‌ ನಾಗ್‌ ಅವರ ಹೆಸರು ಚಿರಕಾಲ ಉಳಿಸಬೇಕು.

ಪ್ರಶ್ನೆ-೭; ಕೊನೆಯದಾಗಿ, ಮಂಜುನಾಥ್‌ ಅವರು ಈಗ ಏನು ಮಾಡ್ತಿದ್ದಾರೆ..? ಚಿತ್ರರಂಗದಿಂದ ದೂರ ಉಳಿದಿದ್ದು ಯಾಕೆ..?

ಮಾಸ್ಟರ್‌ ಮಂಜುನಾಥ್‌; ಚಿತ್ರರಂಗದಿಂದ ಸ್ವಲ್ಪ ದೂರ ಇದ್ದೀನಿ. ದೂರ ಅಂದ್ರೆ ಆಕ್ಟಿಂಗ್‌ನಿಂದ ದೂರ ಇದ್ದೇನೆ. ಚಿತ್ರರಂಗ ನಾನು ಬೆಳೆದ ಕುಟುಂಬ. ಆ ಕುಟುಂಬದಿಂದ ಯಾವತ್ತೂ ನಾನು ಹೊರಗಡೆ ಇಲ್ಲ. ಮಾನಸಿಕವಾಗಿ ನಾನು ಚಿತ್ರರಂಗದ ಜೊತೆಗೇ ಇದ್ದೇನೆ. ನಾನೀಗ ಸ್ವಂತ ಕನ್ಸಲ್ಟೆನ್ಸಿ ನಡೆಸ್ತಿದ್ದೇನೆ. ಆ ಕೆಲಸದ ಬಗ್ಗೆ ಹೆಚ್ಚು ಗಮನ ಕೊಟ್ಟಿದ್ದೇನೆ. ಮಲ್ಟಿನ್ಯಾಷನಲ್ ಕಂಪನಿಗಳಿಗೆ ಸರ್ಕಾರದಲ್ಲಿ ಏನಾದರೂ ಅಪ್ರೂವಲ್ಸ್‌, ಕ್ಲಿಯರೆನ್ಸ್‌ ಏನಾದರೂ ಇದ್ದರೆ ಮಾಡಿಕೊಡುವ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ.

 

Share Post