ಸಿದ್ದರಾಮಯ್ಯರನ್ನು ರಾಜಕೀಯ ಭಸ್ಮಾಸುರ ಎಂದ ಹೆಚ್ಡಿಕೆ
ಬೆಂಗಳೂರು; ಜೆಡಿಎಸ್ ನಾಯಕ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿಯವರು, ದೇಶಕ್ಕೆ ಈ ಸಿದ್ಧ ಸೂತ್ರದಾರನ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಕುಮಾರಸ್ವಾಮಿಯವರ ಟ್ವೀಟ್ನ ಕೆಲ ಭಾಗ ಇಲ್ಲಿದೆ.
ಟ್ವೀಟ್-೧
ಸ್ವಯಂಘೋಷಿತ ಸಂವಿಧಾನ ರಕ್ಷಕ ಸಿದ್ದರಾಮಯ್ಯ ಮತ್ತೆ @JanataDal_S ಬಗ್ಗೆ ವಿಷ ಕಾರಿಕೊಂಡಿದ್ದಾರೆ. ಜೆಡಿಎಸ್ ಪಕ್ಷ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಏನು ಎಂದು ಅವರು ಪ್ರಶ್ನಿಸಿದ್ದಾರೆ. ನಮ್ಮ ಪಕ್ಷದ್ದು ಇರಲಿ, ಸ್ವಾತಂತ್ರ್ಯ ಹೋರಾಟಕ್ಕೆ ಈ ಸೋಗಲಾಡಿ ಸಿದ್ದಸೂತ್ರದಾರನ ಕೊಡುಗೆ ಏನು?
ಟ್ವೀಟ್-೨
ನಿಮ್ಮಂತಹ ರಾಜಕೀಯ ಭಸ್ಮಾಸುರರು ಇರುವ ಕಾಂಗ್ರೆಸ್ ಪಕ್ಷದ ಹತ್ತಿರಕ್ಕೆ ಬಂದವರೆಲ್ಲ ಸುಟ್ಟು ಭಸ್ಮವಾಗಿದ್ದಾರೆ. ನಮ್ಮ ಪಕ್ಷ ಇರಲಿ, ಪಕ್ಕದ ಮಹಾರಾಷ್ಟ್ರದಲ್ಲಿ ಶಿವಸೇನೆ ಗತಿ ಏನಾಯಿತು? ಯುಪಿಎ-1 ಸರಕಾರಕ್ಕೆ ಬೆಂಬಲ ಕೊಟ್ಟ ತಪ್ಪಿಗೆ 65 ಕ್ಷೇತ್ರ ಗೆದ್ದಿದ್ದ ಕಮ್ಯುನಿಸ್ಟರು ಈಗೆಲ್ಲಿದ್ದಾರೆ? ನಿಮ್ಮ ಸಹವಾಸ ಮಾಡಿದವರಿಗೆಲ್ಲ ಇದೇ ಗತಿ!
ಟ್ವೀಟ್-೩
ಅಧಿಕಾರದ ದುರಾಸೆಗೆ ಅನ್ಯಪಕ್ಷಗಳನ್ನು ನಂಬಿಸಿ ಕತ್ತು ಕುಯ್ಯವ ಕಾಂಗ್ರೆಸ್ ಪಕ್ಷ ಎಸಗಿದ ಪಾಪಕ್ಕೆ ಈಗ ಫಲ ಉಣ್ಣುತ್ತಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಸೋಗಲಾಡಿ ಸಿದ್ದರಾಮಾಯಣ ಶುರುವಾಗಿದೆ. ಈ ಸೋಗಲಾಡಿ ಸಿದ್ದಯ್ಯನ ಅಸಲಿಯೆತ್ತು ಏನು ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ.