ಸಮಯ ವ್ಯರ್ಥ ಮಾಡಬೇಡಿ, ಕಠಿಣ ನಿರ್ಧಾರ ಕೈಗೊಳ್ಳಿ; ಅಮಿತ್ ಷಾ ಸೂಚನೆ
ಬೆಂಗಳೂರು; ಕೆಲ ತಿಂಗಳ ಹಿಂದೆ ರಾಜ್ಯದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿತ್ತು. 2023ರ ಚುನಾವಣೆಯಲ್ಲಿ ರಾಜ್ಯ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಬಿಜೆಪಿಯ ಹಿಂದುತ್ವ ಟ್ರಂಪ್ ಕಾರ್ಡ್‌ಗೆ ಇದು ಮತ್ತಷ್ಟು ಶಕ್ತಿ ತುಂಬಿತ್ತು. ಆದ್ರೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಬಸವರಾಜ ಬೊಮ್ಮಾಯಿ ಸರ್ಕಾರ ಬಿಸಿ ತುಪ್ಪವಾಗಿ ಪರಿಣಮಿಸಿದೆ. ತಮ್ಮದೇ ಪಕ್ಷದ ಯುವ ಕಾರ್ಯಕರ್ತರು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಬೆಂಕಿ ಉಗುಳುತ್ತಿದ್ದಾರೆ.
ಸುಳ್ಯದ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ನಡೆದು ಎರಡು ವಾರಗಳಾಗಿವೆ. ಇದುವರೆಗೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆದ್ರೆ ಇನ್ನೂ ಪ್ರಮುಖ ಆರೋಪಿಗಳು ಸಿಕ್ಕಿಬಿದ್ದಿಲ್ಲ. ಈ ಬೆನ್ನಲ್ಲೇ ಎನ್‌ಐಎ ಅಧಿಕಾರಿಗಳು ತನಿಖೆಗೆ ಕೈಗೆತ್ತಿಕೊಂಡಿದ್ದಾರೆ. ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಷಾ, ಪ್ರವೀಣ್ ನೆಟ್ಟಾರು ವಿಚಾರದ ಬಗ್ಗೆ ರಾಜ್ಯದ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಿ.ಟಿ.ರವಿ ಮತ್ತು ಇನ್ನೂ ಕೆಲವರು ಈ ಬಗ್ಗೆ ಮಾತುಕತೆ ಆಡಿದ್ದಾರೆ. ಜೊತೆಗೆ ಘಟನೆ ಬಗ್ಗೆ ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಳ್ಳಿ ಎಂದು ಸಿಎಂಗೆ ಇದೇ ವೇಳೆ ಸೂಚನೆ ನೀಡಿದ್ದಾರೆ.
ಸಿಐಐ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಿಜೆಪಿಯ ‘ಚಾಣಕ್ಯ’ ಅಮಿತ್ ಷಾ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಹಾಗೂ ಅನಂತರ ಯುವ ಬಿಜೆಪಿ ಮುಖಂಡರ ಆಕ್ರೋಶದ ವಿಚಾರದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಬಿಜೆಪಿ ಜನೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದನ್ನು ಅಮಿತ್ ಷಾ ಶ್ಲಾಘಿಸಿದ್ದಾರೆ. ಜೊತೆಗೆ ಚುನಾವಣೆಗೆ ಇನ್ನು ಏಳು ತಿಂಗಳಷ್ಟೇ ಸಮಯವಿದೆ. ಹೀಗಾಗಿ ಸರ್ಕಾರದ ಕೆಲಸಗಳ ಬಗ್ಗೆ ಜನರಿಗೆ ತಿಳಿಸಬೇಕಾಗಿದೆ. ಹೀಗಾಗಿ ಸಮಯ ವ್ಯರ್ಥ ಮಾಡಬಾರದು ಎಂದು ಅಮಿತ್ ಷಾ ಸೂಚಿಸಿರುವುದಾಗಿ ತಿಳಿದುಬಂದಿದೆ.
ಪ್ರವೀಣ್ ನೆಟ್ಟಾರು ಅಂತಿಮ ಯಾತ್ರೆ ವೇಳೆ ಸಾವಿರಾರು ಮಂದಿ ಸೇರಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸುನಿಲ್ ಕುಮಾರ್ ಸೇರಿ ಹಲವು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದರು. ನಳಿನ್ ಕುಮಾರ್ ತೆರಳುತ್ತಿದ್ದ ಕಾರನ್ನು ಅಲ್ಲಾಡಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ರಾಜ್ಯಾದ್ಯಂತ ಹಲವು ಯುವ ಬಿಜೆಪಿ ಮುಖಂಡರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಈ ವಿಚಾರಗಳು ಕೇಂದ್ರ ಬಿಜೆಪಿವರೆಗೂ ತಲುಪಿದ್ದವು.