ಅಶ್ವತ್ಥ್ ನಾರಾಯಣ್‌ಗೆ ಸರ್ಟಿಫಿಕೇಟ್ ಕೊಡಿಸೋದ್ರಲ್ಲಿ ಭಾರಿ ಅನುಭವ ಇದೆ; ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್ ರಾಜಕೀಯಕ್ಕೆ ಬರೋಕೂ ಮುನ್ನ ಸರ್ಟಿಫಿಕೇಟ್ ಕೊಡಿಸುವುದರಲ್ಲಿ ಬಹಳ ನಿಪುಣರಾಗಿದ್ದರು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಶ್ವತ್ಥ್ ಅವರ ಮೇಲೆ ಪರೀಕ್ಷೆಯನ್ನೇ ಬರೆಯದ ನರ್ಸ್‌ಗಳಿಗೆ ಸರ್ಟಿಫಿಕೇಟ್ ಕೊಡಿಸಿದ್ದ ಆರೋಪ ಇತ್ತು. ಕಾಂಗ್ರೆಸ್ ನಾಯಕರು ಈ ವಿಚಾರವನ್ನು ಪ್ರಸ್ತಾಪಿಸುತ್ತಲೇ ಇಲ್ಲ ಎಂದು ಹೇಳಿದರು.
ಪಿಎಸ್‌ಐ ನೇಮಕಾತಿಗಾಗಿ ಹಲವರು ಸಾಕಷ್ಟು ಹಣ ನೀಡಿದ್ದಾರೆ. ಅವರು ಈಗ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಎಲ್ಲ ವಿಷಯದಲ್ಲೂ ಸರ್ಕಾರ ವಹಿಸಿರುವ ಮೌನ ನೋಡಿದರೆ ಸರ್ಕಾರ ನಡೆಸುತ್ತಿರುವವರು ಕೂಡಾ ಇದರಲ್ಲಿ ಪಾಲುದಾರರೇ ಎಂಬ ಸಂಶಯ ಮೂಡುತ್ತದೆ. ಡ್ರಗ್ಸ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಮಗನ ಪ್ರಭಾವ ಇದೆ ಎಂದು ಹೇಳಲಾಗಿತ್ತು. ಆ ಪ್ರಕರಣದ ತನಿಖೆ ಒಂದು ಹಂತದವರೆಗೆ ಹೋಗಿ, ಅಲ್ಲಿಯೇ ಮುಚ್ಚಿಹೋಯಿತು. ಪಿಎಸ್ಐ ನೇಮಕಾತಿ ಅಕ್ರಮದಲ್ಲೂ ಅದೇ ಆಗಬಹುದು ಎಂದು ಹೆಚ್ಡಿಕೆ ಅನುಮಾನ ವ್ಯಕ್ತಪಡಿಸಿದರು.