National

ಶಾಸಕ ಜಿಗ್ನೇಶ್‌ ಮೇವಾನಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌

ಮೆಹ್ಸಾನಾ: ಐದು ವರ್ಷದ ಹಿಂದಿನ ಪ್ರಕರಣವೊಂದರಲ್ಲಿ ಶಾಸಕ ಜಿಗ್ನೇಶ್‌ ಮೇವಾನಿಗೆ ಮೆಹ್ಸಾನಾ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಮೇವಾನಿ ಜೊತೆಗೆ ಇತರ ಒಂಬತ್ತು ಮಂದಿಗೂ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಗುಜರಾತ್‌ನ ಪಕ್ಷೇತರ ಶಾಸಕರಾಗಿರುವ ಜಿಗ್ನೇಶ್‌ ಮೇವಾನಿ2017ರ ಜುಲೈನಲ್ಲಿ ಮೆಹ್ಸಾನಾದಿಂದ ಬನಸ್ಕಾಂತ ಜಿಲ್ಲೆಯ ಧನೇರಾಗೆ ಅನುಮತಿಯಿಲ್ಲದೆ ‘ಆಜಾದಿ ಮೆರವಣಿಗೆ’ ಕೈಗೊಂಡಿದ್ದರು. ಹೀಗಾಗಿ ಮೆಹ್ಸಾನಾ ‘ಎ’ ವಿಭಾಗದ ಪೊಲೀಸರು ಮೆವಾನಿ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು. ಇದೀಗ ಹೆಚ್ಚುವರಿ ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ಜೆ.ಎ. ಪರ್ಮಾರ್ ಅವರು, ಜಿಗ್ನೇಶ್‌ ಮೇವಾನಿ ಮತ್ತು ಎನ್‌ಸಿಪಿ ಕಾರ್ಯಾಧ್ಯಕ್ಷೆ ರೇಷ್ಮಾ ಪಟೇಲ್ ಹಾಗೂ ಮೆವಾನಿಯವರ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌ನ ಕೆಲವು ಸದಸ್ಯರು ಸೇರಿ ಒಟ್ಟು ಹತ್ತು ಮಂದಿಯನ್ನು ಕಾನೂನುಬಾಹಿರವಾಗಿ ಸಭೆ ನಡೆಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143ರ ಅಡಿಯಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದ್ದಾರೆ. ಅಲ್ಲದೆ ಎಲ್ಲಾ ಹತ್ತು ಆರೋಪಿಗಳಿಗೆ ತಲಾ ಹತ್ತು ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ.

Share Post