ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ ವಿಚಾರ; ಸರ್ಕಾರದ ಬಳಿ ಹಣ ಇಲ್ಲದಿದ್ದರೆ ಭಿಕ್ಷೆ ಬೇಡ್ತೀನಿ – ಡಿಕೆಶಿ
ಬೆಂಗಳೂರು; ಮಕ್ಕಳು ಶೂ, ಸಾಕ್ಸ್‌ಗಾಗಿ ಶಾಲೆಗೆ ಬರುವುದಿಲ್ಲ ಎಂದು ಶಿಕ್ಷಣ ಸಚಿವ ನಾಗೇಶ್ ಹೇಳಿದ್ದಾರೆ. ಒಂದು ವೇಳೆ ಸರ್ಕಾರದ ಬಳಿ ಹಣ ಇಲ್ಲ ಎಂದಾದರೆ ಹೇಳಲಿ, ಜನರ ಬಳಿ ಭಿಕ್ಷೆ ಬೇಡಿಯಾದರೂ ಮಕ್ಕಳಿಗೆ ಶೂ, ಸಾಕ್ಸ್ ಕೊಡಿಸುವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಚಿವ ಬಿ.ಸಿ. ನಾಗೇಶ್‌ಗೆ ಸಾಮಾನ್ಯ ಜ್ಞಾನ ಇಲ್ಲ. ಒಳ್ಳೆಯ ಶೂ, ಸಾಕ್ಸ್ ತನ್ನ ಮಕ್ಕಳಿಗೂ ಸಿಗಲಿ ಎಂಬ ಆಸೆ ಎಲ್ಲ ಪೋಷಕರಿಗೂ ಇರುತ್ತದೆ. ಆದ್ರೆ ಇವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮಕ್ಕಳಿಗೆ ಶೂ, ಸಾಕ್ಸ್ ಅಗತ್ಯವಿಲ್ಲ ಎಂದು ಹೇಳುವ ಸಚಿವ ನಾಗೇಶ್ ಏಕೆ ಒಳ್ಳೆಯ ಬಟ್ಟೆ ಧರಿಸುತ್ತಾರೆ. ಅವರೂ ಲಂಗೋಟಿ ಧರಿಸಿಕೊಂಡು ಓಡಾಡಲಿ ನೋಡೋಣ ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ಸವಾಲು ಹಾಕಿದರು.