BengaluruPolitics

ಮೆಡಿಕಲ್‌ ಮಿನಿಸ್ಟರ್‌ಗೆ ಸೋಲು, ಮೆಡಿಕಲ್‌ ಮೇಷ್ಟ್ರಿಗೆ ಗೆಲುವು; ಜೀರೋ ಆಗಿದ್ದ ಪ್ರದೀಪ್‌ ಈಶ್ವರ್‌ ಈ ಮಟ್ಟಕ್ಕೆ ಬೆಳೆದಿದ್ದೇಗೆ..?

ಬೆಂಗಳೂರು; ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್‌ ನನಗೆ ಸೋಲೇ ಇಲ್ಲ ಎಂದು ಮೆರೆಯುತ್ತಿದ್ದರು. ಆದ್ರೆ ಅವರದೇ ಊರಿನ ಒಬ್ಬ ಸಾಮಾನ್ಯ ಹುಡುಗ ಸುಧಾಕರ್‌ಗೆ ಸೋಲುಣಿಸಿದ್ದಾರೆ. ನಾಲ್ಕು ವರ್ಷದ ಹಿಂದೆ ಊಟಕ್ಕೂ ಪರದಾಡುತ್ತಿದ್ದ ಪ್ರದೀಪ್‌ ಈಶ್ವರ್‌ ಎಂಬ ಮೆಡಿಕಲ್‌ ಮೇಷ್ಟ್ರು ಈಗ ಚಿಕ್ಕಬಳ್ಳಾಪುರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಸುಧಾಕರ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಬಿದ್ದಿದೆ. ಬೆಂಗಳೂರಿನಲ್ಲಿ ನೀಟ್‌ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪಾಠ ಮಾಡಿಕೊಂಡಿದ್ದ ಪ್ರದೀಪ್‌ ಈಶ್ವರ್‌ಗೆ ಕಾಂಗ್ರೆಸ್‌ ಕರೆದು ಟಿಕೆಟ್‌ ಕೊಟ್ಟಿತ್ತು. ಎಂ.ಎಸ್‌.ರಾಮಯ್ಯ ಕುಟುಂಬ ಪ್ರದೀಪ್‌ ಈಶ್ವರ್‌ ಅವರ ಬೆನ್ನೆಲುಬಾಗಿ ನಿಂತುಕೊಂಡಿತ್ತು. ಕೇವಲ 25 ದಿನಗಳಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸಂಘಟಿಸಿ ಪ್ರದೀಪ್‌ ಈಶ್ವರ್‌ ಗೆಲುವಿನ ನಗೆ ಬೀರಿದ್ದಾರೆ.

ಪ್ರದೀಪ್‌ ಈಶ್ವರ್‌ ಹಾಗೂ ಡಾ.ಕೆ.ಸುಧಾಕರ್‌ ಒಂದೇ ಊರಿನವರು… ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುವ ಪೇರೇಸಂದ್ರ ಗ್ರಾಮದವರು… ವಯಸ್ಸಿನಲ್ಲೂ ಹೆಚ್ಚೇನೂ ಅಂತರವಿಲ್ಲ… ಪ್ರದೀಪ್‌ ಈಶ್ವರ್‌ ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡ ಅನಾಥ… ಆದ್ರೆ, ಸುಧಾಕರ್‌ ತಕ್ಕಮಟ್ಟಿಗೆ ಶ್ರೀಮಂತ ಕುಟುಂಬದಲ್ಲಿ ಬೆಳೆದವರು… ಪ್ರದೀಪ್‌ ಐದಾರು ವರ್ಷಗಳ ಹಿಂದಿನ ತನಕ ಜೀರೋ… ಓಡಾಡೋದಕ್ಕೆ ಒಂದು ಬೈಕ್‌ ಕೂಡಾ ಇರಲಿಲ್ಲ… ಆದ್ರೆ ನೂರಾರು ಕನಸುಗಳನ್ನು ಹೊತ್ತಿದ್ದಂತೆ ಬಿಸಿರಕ್ತದ ಯುವಕ… ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕನಾಗಿ ಪಾರ್ಟ್‌ ಟೈಂ ಕೆಲಸ ಮಾಡುತ್ತಿದ್ದ ಪ್ರದೀಪ್‌ ಈಶ್ವರ್‌, ಅರೆಕಾಲಿಕ ಪತ್ರಕರ್ತನಾಗಿಯೂ ಕೆಲಸ ಮಾಡುತ್ತಿದ್ದರು… ದುಡಿದರಷ್ಟೇ ಬದು ಅನ್ನೋ ದಿನಗಳವು… ಆದ್ರೂ ಪ್ರದೀಪ್‌ ಈಶ್ವರ್‌ ಹೋರಾಟಕ್ಕಿಳಿದಿದ್ದರು… ಅಂದು ಕಾಂಗ್ರೆಸ್‌ನಲ್ಲಿ ಶಾಸಕರಾಗಿದ್ದ ಡಾ.ಕೆ.ಸುಧಾಕರ್‌ ವಿರುದ್ಧ ಸೆಟೆದು ನಿಂತಿದ್ದರು… ಸಾಮಾಜಿಕ ಜಾಲತಾಣಗಳಲ್ಲಿ ಸುಧಾಕರ್‌ ವಿರುದ್ಧ ವಿಡಿಯೋಗಳನ್ನು ಹರಿಬಿಡುವ ಮೂಲಕ ಪ್ರದೀಪ್‌ ಈಶ್ವರ್‌ ಜನರಕ್ಕೆ ಪರಿಚಯವಾಗಿದ್ದರು… ಇದೇ ಕಾರಣಕ್ಕೆ ಪ್ರದೀಪ್‌ ಈಶ್ವರ್‌ ಬಂಧನವೂ ಆಗಬೇಕಾಗಿ ಬಂತು… ಸುಧಾಕರ್‌ ನೀಡಿದ ದೂರಿನ ಕಾರಣದಿಂದಾಗಿ ಪ್ರದೀಪ್‌ ಈಶ್ವರ್‌ರನ್ನು ಬಂಧಿಸಲಾಗಿತ್ತು… ಅಂದ್ರೆ ಸುಧಾಕರ್‌ ವಿರುದ್ಧ ಇದ್ದ ನವೀನ್‌ ಕಿರಣ್‌ ಸೇರಿ ಹಲವರು ಪ್ರದೀಪ್‌ ಈಶ್ವರ್‌ ಪರ ನಿಂತು ಅವರನ್ನು ಬೇಲ್‌ ಮೇಲೆ ಬಿಡಿಸಿಕೊಂಡು ಬಂದಿದ್ದರು… ಚಿಕ್ಕಬಳ್ಳಾಪುರದಲ್ಲಿ ಮೆರವಣಿಗೆ ಕೂಡಾ ಮಾಡಿದ್ದರು…

ಅಂದಹಾಗೆ, ಸುಧಾಕರ್‌ ಅವರು ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರು… ಪ್ರದೀಪ್‌ ಈಶ್ವರ್‌ ಅವರು ಬಲಿಜ ಸಮುದಾಯಕ್ಕೆ ಸೇರಿದವರು… ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ನಂತರ ಸ್ಥಾನದಲ್ಲಿ ಬಲಿಜಿಗರಿದ್ದಾರೆ… ನಲವತ್ತು ಸಾವಿರದಷ್ಟು ಒಕ್ಕಲಿಗ ಮತಗಳಿವೆ… ಆದ್ರೆ, ಪ್ರದೀಪ್‌ ಈಶ್ವರ್‌ ಬಳಿ ಅಂದು ಹಣಬಲ ಇರಲಿಲ್ಲ… ಈ ಕಾರಣಕ್ಕಾಗಿ, ಪ್ರದೀಪ್‌ ಸೋಷಿಯಲ್‌ ಮೀಡಿಯಾದಲ್ಲಿ ಸುಧಾಕರ್‌ ವಿರುದ್ಧ ಮಾತನಾಡಿದರು ಎಂಬ ಕಾರಣಕ್ಕೆ ಬಂಧಿಸಲಾಗಿತ್ತು… ಸುಧಾಕರ್‌ ಅವರು ತಮ್ಮ ಪ್ರಭಾವ ಬಳಸಿ ಪ್ರದೀಪ್‌ರನ್ನು ಬಂಧಿಸುವಂತೆ ಮಾಡಿದ್ದರು ಎಂಬ ಆರೋಪವಿದೆ… ಒಂದು ರೀತಿಯಲ್ಲಿ ಪ್ರದೀಪ್‌ ಸದ್ದಡಗಿಸಲೆಂದೇ ಬಂಧಿಸಲಾಗಿತ್ತು ಎಂದು ಹೇಳಲಾಗುತ್ತದೆ… ಆದ್ರೆ ಪ್ರದೀಪ್‌ ಯಾವುದಕ್ಕೂ ಬಗ್ಗಿರಲಿಲ್ಲ… ಮತ್ತೆ ಮತ್ತೆ ಸುಧಾಕರ್‌ ವಿರುದ್ಧ ವಿಡಿಯೋಗಳನ್ನು ಹರಿಬಿಡುತ್ತಲೇ ಇದ್ದರು… ಆಗಾಗಾ ಸುದ್ದಿಯಾಗುತ್ತಲೇ ಇದ್ದರು… ಆದ್ರೆ ಕೆಲ ಸಮಯದ ನಂತರ ಪ್ರದೀಪ್‌ ಈಶ್ವರ್‌ ಚಿಕ್ಕಬಳ್ಳಾಪುರದ ಜನಕ್ಕೆ ಕಾಣದಂತಾದರು… ಅವರ ವಿಡಿಯೋಗಳೂ ಬರಲಿಲ್ಲ…

ಪ್ರದೀಪ್‌ ಈಶ್ವರ್‌ ಎಲ್ಲಿ ಹೋದರು ಅಂದಕೊಳ್ಳುತ್ತಿರುವಾಗಲೇ ಅವರು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದರು… ಚಾನಲ್‌ಗಳಲ್ಲಿ ಜಾಹೀರಾತುಗಳು ಕಾಣಿಸಿಕೊಂಡಾಗ ಜನರು ಅಚ್ಚರಿ ಪಟ್ಟಿದ್ದರು… ಏನೂ ಇಲ್ಲದ ಪ್ರದೀಪ್‌ ಈ ಮಟ್ಟಕ್ಕೆ ಬೆಳೆದುಬಿಟ್ಟರಾ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು… ನಂತರ ನಡೆದದ್ದೆಲ್ಲಾ ಇತಿಹಾಸವೇ… ಒಬ್ಬ ಬಡವ ಶ್ರೀಮಂತನ ವಿರುದ್ಧ ತಿರುಗಿಬಿದ್ದು, ಆತನನ್ನು ಬಗ್ಗುಬಡಿಯುವ ದೃಶ್ಯಗಳನ್ನು ಸಿನಿಮಾಗಳಲ್ಲಿ ಮಾತ್ರ ನೋಡಿರುತ್ತೇವೆ… ಆದ್ರೆ, ಪ್ರದೀಪ್‌ ಈಶ್ವರ್‌ ನಿಜ ಜೀವನದಲ್ಲಿ ಮಾಡಿ ತೋರಿಸಿದ್ದಾರೆ.. ಪ್ರದೀಪ್‌ ಈಶ್ವರ್‌ ಉತ್ತಮ ಮಾತುಗಾರ, ಜ್ಞಾನಿ, ಎಂತವರನ್ನೂ ತಮ್ಮ ಮಾತಿನ ಮೂಲಕ ಸೆಳೆಯುವಂತಹ ಮೋಡಿಗಾರ… ಪ್ರದೀಪ್‌ಗೆ ಅದ್ಯಾರು ನೆರವಿಗೆ ನಿಂತರೋ ಏನೋ ಮೆಡಿಕಲ್‌ ಪ್ರವೇಶ ಪರೀಕ್ಷೆ ನೀಟ್‌ಗೆ ತರಬೇತಿ ಕೇಂದ್ರವನ್ನು ಆರಂಭಿಸಿದ್ದರು… ಅದಕ್ಕೆ ಪರಿಶ್ರಮ ನೀಟ್‌ ಅಕಾಡೆಮಿ ಎಂದು ಹೆಸರಿಟ್ಟರು… ಅವರ ಪಟ್ಟ ಪರಿಶ್ರಮದಿಂದ ಪರಿಶ್ರಮ ಅಕಾಡೆಮಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ… ಇಲ್ಲಿ ತರಬೇತಿ ಪಡೆಯುವವರಲ್ಲಿ ೨೦೦ಕ್ಕೂ ಹೆಚ್ಚು ಮಂದಿ ಪ್ರತಿ ವರ್ಷ ನೀಟ್‌ನಲ್ಲಿ ಉತ್ತಮ ರ್ಯಾಂಕ್‌ ಪಡೆದು ಎಂಬಿಬಿಎಸ್‌ ಸೀಟು ಪಡೆಯುತ್ತಿದ್ದಾರೆ… ಹೀಗಾಗಿ ಪ್ರದೀಪ್‌ ಈಶ್ವರ್‌ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ… ಹಣವನ್ನೂ ಮಾಡಿದ್ದಾರೆ… ಇದೆಲ್ಲಾ ಮಾಡುವಾಗ ಅವರು ಸೈಲೆಂಟಾಗೇ ಇದ್ದರು… ಚಿಕ್ಕಬಳ್ಳಾಪುರದ ರಾಜಕೀಯಕ್ಕೂ ನನಗೂ ಸಂಬಂಧವೇ ಇಲ್ಲ ಎನ್ನುವಂತಿದ್ದರು.. ಯಾರಾದರೂ ಕೇಳಿದರೂ ಸದ್ಯಕ್ಕೆ ಸುಧಾಕರ್‌ ಇದ್ದಾರೆ, ನನಗೇನು ಕೆಲಸ ಬಿಡಿ ಎನ್ನುತ್ತಿದ್ದರು… ಆದ್ರೆ, ಅವರ ಮನಸ್ಸಿನಲ್ಲಿ ಸುಧಾಕರ್‌ಗೆ ಒಂದಿನ ಸೋಲುಣಿಸಬೇಕು ಅನ್ನೋ ಛಲ ಮಾತ್ರ ಇದ್ದೇ ಇತ್ತು… ಇದೀಗ ಆ ಛಲವನ್ನು ಸಾಧಿಸಿಕೊಂಡಿದ್ದಾರೆ.

ಒಳ್ಳೆ ದಾರಿಯಲ್ಲೇ ಕೋಟಿ ಕೋಟಿ ಸಂಪಾದಿಸಿದ ಪ್ರದೀಪ್‌ ಈಶ್ವರ್‌ ದಲಿತ ಮಕ್ಕಳೇ ಹೆಚ್ಚಾಗಿರುವ ಶಾಲೆಯೊಂದರನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಿಸಿದ್ದಾರೆ… ಬಲಿಜ ವಿದ್ಯಾರ್ಥಿಗಳಿಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಿದ್ಯಾರ್ಥಿವೇತನ ರೂಪದಲ್ಲಿ ಕೊಟ್ಟಿದ್ದಾರೆ… ಚಿಕ್ಕಬಳ್ಳಾಪುರದ ಹಲವು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್‌ ಕೋಚಿಂಗ್‌ ನೀಡಿದ್ದಾರೆ… ಇದೆಲ್ಲಾ ಮಾಡುತ್ತಿದ್ದರೂ ಅವರು ರಾಜಕೀಯದಿಂದ ದೂರವೇ ಉಳಿದಿದ್ದರು… ಚಿಕ್ಕಬಳ್ಳಾಪುರದ ಜನರ ಮನಸ್ಸಿನಲ್ಲಿ ಎಂದಾದರೂ ಒಂದು ದಿನ ಪ್ರದೀಪ್‌ ಈಶ್ವರ್‌ ರಾಜಕೀಯಕ್ಕೆ ಬರುತ್ತಾರೆ… ಸುಧಾಕರ್‌ ವಿರುದ್ಧ ಸ್ಪರ್ಧೆ ಮಾಡುತ್ತಾರೆ ಎಂದುಕೊಂಡಿದ್ದರು… ಆದ್ರೆ ಅದು ಇದೇ ಚುನಾವಣೆಯಲ್ಲಿ ಅಂತ ಯಾರೂ ಊಹಿಸಿರಲಿಲ್ಲ… ಪ್ರದೀಪ್‌ ಈಶ್ವರ್‌ ಕೂಡಾ ಇದೇ ಚುನಾವಣೆಯಲ್ಲಿ ನಿಲ್ಲಬೇಕು ಅಂತ ಅಂದುಕೊಂಡಿರಲಿಲ್ಲ ಅನಿಸುತ್ತೆ… ಆದ್ರೆ ಕಾಂಗ್ರೆಸ್‌ ನಾಯಕರೇ ಪ್ರದೀಪ್‌ ಈಶ್ವರ್‌ರನ್ನು ಗುರುತಿಸಿದ್ದರು… ಕಾಂಗ್ರೆಸ್‌ ಹೈಕಮಾಂಡ್‌ ಪ್ರದೀಪ್‌ ಈಶ್ವರ್‌ ಮೇಲಿ ಇಟ್ಟ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ.

Share Post