BengaluruPolitics

ಪ್ರಚಂಡ ಗೆಲುವು ಕಂಡ ಡಿಕೆಶಿಗೆ ಸಿಎಂ ಸ್ಥಾನ ಸುಲಭವಾಯ್ತಾ..?

ಬೆಂಗಳೂರು; ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಹಿಂದೆಂದೂ ಇಲ್ಲದ ಪ್ರಚಂಡ ಗೆಲುವು ಸಾಧಿಸಿದ್ದಾರೆ. ಕನಕಪುರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಡಿ.ಕೆ.ಶಿವಕುಮಾರ್‌ ಗೆಲುವು ಕಂಡಿದ್ದಾರೆ. ಇದು ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆಗೋದಕ್ಕೆ ಸುಲಭ ದಾರಿ ಮಾಡಿಕೊಟ್ಟಿದ್ದು, ಬಿಜೆಪಿ ಹೈಕಮಾಂಡ್‌ಗೆ ಭಾರಿ ಮುಖಭಂಗ ಅನುಭವಿಸುವಂತೆ ಮಾಡಿದೆ. 

ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಂ ಸ್ಥಾನದ ಆಕಾಂಕ್ಷಿಯಾಗಿರುವುದರಿಂದ ಡಿ.ಕೆ.ಶಿವಕುಮಾರ್‌ ಗೆಲ್ಲೋದು ಕನ್ಫರ್ಮ್‌ ಇತ್ತು. ಆದ್ರೆ ಒಂದು ಲಕ್ಷಕ್ಕೂ ಅಧಿಕಾರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಯಾರೂ ಕೂಡಾ ಊಹಿಸಿರಲಿಲ್ಲ. ಆದ್ರೆ ಡಿ.ಕೆ.ಶಿವಕುಮಾರ್‌ ಅವರನ್ನು ಕಟ್ಟಿ ಹಾಕೋದಕ್ಕಾಗಿ ಆರ್‌.ಅಶೋಕ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಅಂದ್ರೆ ಬಿಜೆಪಿ ಹೈಕಮಾಂಡ್‌ ನಾಯಕರೇ ಆರ್‌.ಅಶೋಕ್‌ಗೆ ಟಾಸ್ಕ್‌ ಕೊಟ್ಟಿದ್ದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಕನಕಪುರದಲ್ಲಿ ತಂತ್ರಗಾರಿಕೆ ನಡೆಸಲು ಬಂದಿದ್ದರು. ಆದ್ರೆ, ಬಿಜೆಪಿ ವರಿಷ್ಠ ನಾಯಕರು ಡಿ.ಕೆ.ಶಿವಕುಮಾರ್‌ ಮುಂದೆ ಮಕಾಡೆ ಮಲಗಿದ್ದಾರೆ. ಬಿಜೆಪಿಯ ಹೈಕಮಾಂಡ್‌ ಅಭ್ಯರ್ಥಿಯಾಗಿದ್ದ ಆರ್‌.ಶೋಕ್‌ಗೆ ಭಾರಿ ಮುಖಭಂಗವಾಗಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಅಂದಹಾಗೆ ಡಿ.ಕೆ.ಶಿವಕುಮಾರ್‌ ಅವರಿಗೆ ಇಡೀ ರಾಜ್ಯ ಸುತ್ತುವ ಜವಾಬ್ದಾರಿ ಇತ್ತು. ಪಕ್ಷದ ಜವಾಬ್ದಾರಿ ಹೊತ್ತು ಡಿ.ಕೆ.ಶಿವಕುಮಾರ್‌ ಅವರು ಇಡೀ ರಾಜ್ಯ ಸುತ್ತಿದ್ದರು. ಆದ್ರೆ ಅವರು ಸ್ವಂತ ಕ್ಷೇತ್ರಕ್ಕೆ ಬಂದೇ ಇರಲಿಲ್ಲ. ನಾಮಪತ್ರ ಸಲ್ಲಿಸಿ ಹೋದವರು ಕನಕಪುರದಲ್ಲಿ ಪ್ರಚಾರವೇ ಮಾಡಲಿಲ್ಲ. ಬಹಿರಂಗ ಪ್ರಚಾರದ ಕೊನೆಯ ದಿನದಂದು ಡಿ.ಕೆ.ಶಿವಕುಮಾರ್‌ ಅವರು ಒಂದು ಬಹಿರಂಗ ಸಭೆ ನಡೆಸಿದ್ದರು. ಒಂದೇ ದಿನದ ಪ್ರಚಾರಕ್ಕೆ ಕನಕಪುರದ ಜನ ಡಿ.ಕೆ.ಶಿವಕುಮಾರ್‌ಗೆ ಭಾರಿ ಬಹುಮತ ತಂದುಕೊಟ್ಟಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾಗೋದಕ್ಕೆ ಡಿ.ಕೆ.ಶಿವಕುಮಾರ್‌ಗೆ ಈ ಗೆಲುವು ಸಾಕು ಅನಿಸುತ್ತೆ. ಆ ಮಟ್ಟಿಗೆ ಕನಕಪುರದ ಜನ ಕನಕಪುರದ ಬಂಡೆಯನ್ನು ಸಿಎಂ ಹುದ್ದೆಗಾಗಿ ಬೇಕಾದ ಅತಿ ಸುಂದರವಾಗಿ ಕೆತ್ತನೆ ಮಾಡಿ ಕಳುಹಿಸಿದ್ದಾರೆ.

ಆರ್‌.ಅಶೋಕ್‌ ಅವರು ಕೂಡಾ ಪ್ರಬಲ ಒಕ್ಕಲಿಗ ನಾಯಕರಾಗಿದ್ದರು. ಕನಕಪುರದಲ್ಲಿ ಒಕ್ಕಲಿಗರು ಹೆಚ್ಚಿದ್ದರು. ಇದೇ ಕಾರಣಕ್ಕೆ ಬಿಜೆಪಿ ಹೈಕಮಾಂಡ್‌ ತಂತ್ರ ರೂಪಿಸಿತ್ತು. ಆರ್‌.ಅಶೋಕ್‌ರನ್ನು ಕನಕಪುರದಲ್ಲಿ  ನಿಲ್ಲಿಸಿದರೆ, ಡಿ.ಕೆ.ಶಿವಕುಮಾರ್‌ ಕನಕಪುರಕ್ಕೇ ಸೀಮಿತರಾಗ್ತಾರೆ. ಗೆಲ್ಲೋದಕ್ಕೆ ಪರದಾಡ್ತಾರೆ ಎಂದು ಬಿಜೆಪಿ ಹೈಕಮಾಂಡ್‌ ಭಾವಿಸಿತ್ತು. ಆದ್ರೆ, ಡಿ.ಕೆ.ಶಿವಕುಮಾರ್‌ ತಲೆಯೇ ಕೆಡಿಸಿಕೊಳ್ಳಲಿಲ್ಲ. ನಾಮಪತ್ರ ಸಲ್ಲಿಸಿ ರಾಜ್ಯ ಸುತ್ತೋದಕ್ಕೆ ಹೋಗಿದ್ದರು. ಡಿ.ಕೆ.ಶಿವಕುಮಾರ್‌ ಪತ್ನಿ ಹಾಗೂ ಸಹೋದರನೇ ಕನಕಪುರದಲ್ಲಿ ಪ್ರಚಾರ ನಡೆಸಿದ್ದರು.

ಇತ್ತ ಬಿಜೆಪಿ ಕನಕಪುರದಲ್ಲಿ ಭರ್ಜರಿ ಪ್ರಚಾರ ನಡೆಸಿತ್ತು. ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಸೇರಿದಂತೆ ಹಲವು ವಿಚಾರಗಳನ್ನಿಟ್ಟುಕೊಂಡು ಬಿಜೆಪಿ ಮತ ಕೇಳಿತ್ತು. ಜನರನ್ನು ಭಾವಾನಾತ್ಮಕ ಸೆಳೆಯೋ ಪ್ರಯತ್ನ ಕೂಡಾ ಮಾಡಲಾಗಿತ್ತು. ಆದ್ರೆ, ಕನಕಪುರದ ಜನ ಇದಕ್ಕೆ ಮಣೆಯೇ ಹಾಕಲಿಲ್ಲ. ಡಿ.ಕೆ.ಶಿವಕುಮಾರ್‌ ಅವರೇ ಗೆಲ್ಲಬೇಕು ಎಂದು ಎಲ್ಲರೂ ತೀರ್ಮಾನಿಸಿ ಮತ ಹಾಕಿದ್ದಾರೆ.

ಈ ಬಾರಿ ಡಿ.ಕೆ.ಶಿವಕುಮಾರ್‌ಗೆ ಭಾರಿ ಬೆಂಬಲ ಸಿಗೋದಕ್ಕೆ ಕಾರಣ ಸಿಎಂ ಆಗ್ತಾರೆ ಅನ್ನೋದು. ನಮ್ಮ ಕ್ಷೇತ್ರದ ಅಭ್ಯರ್ಥಿ ಸಿಎಂ ಆಗಲಿ ಅಂತ ಕನಕಪುರದ ಜನ ಡಿ.ಕೆ.ಶಿವಕುಮಾರ್‌ಗೆ ಮತ ಕೊಟ್ಟಿದ್ದಾರೆ. ಇನ್ನು ಡಿ.ಕೆ.ಶಿವಕುಮಾರ್‌ರನ್ನು ಸೋಲಿಸಬೇಕೆಂದು ಪಣ ತೊಟ್ಟಿದ್ದ ಬಿಜೆಪಿ ಹೈಕಮಾಂಡ್‌ಗೆ, ಅವರ ತಂತ್ರಗಾರಿಕೆಗೆ ಭಾರಿ ಮುಖಭಂಗವಾಗಿದೆ.

ಅಂದುಕೊಂಡಂತೆ ಡಿ.ಕೆ.ಶಿವಕುಮಾರ್‌ ಪಕ್ಷಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದು ಬಂದಿದ್ದಾರೆ. ಹೀಗಾಗಿ, ಡಿ.ಕೆ.ಶಿವಕುಮಾರ್‌ ಈ ಬಾರಿ ಮುಖ್ಯಮಂತ್ರಿಯಾಗೋದು ಬಹುತೇಕ ಪಕ್ಕಾ ಆಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಗೆದ್ದ ಡಿ.ಕೆ.ಶಿವಕುಮಾರ್‌ಗೆ ಕಾಂಗ್ರೆಸ್‌ ಹೈಕಮಾಂಡ್‌, ಸಿಎಂ ಸ್ಥಾನದ ಉಡುಗೊರೆ ನೀಡುವ ಎಲ್ಲಾ ಲಕ್ಷಣಗಳೂ ಇವೆ.

 

Share Post