BengaluruCrime

ಯಾರು ಸ್ಯಾಂಟ್ರೋ ರವಿ..?; ರಾಜಕಾರಣಿಗಳಿಗೂ ಆತನಿಗೂ ನಂಟೇನು..?

ಬೆಂಗಳೂರು; ಸ್ಯಾಂಟ್ರೋ ರವಿ… ಈ ಹೆಸರು ಈಗ ರಾಜಕಾರಣಿಗಳ ಜೊತೆ ಥಳಕು ಹಾಕಿಕೊಂಡಿದೆ.. ರಾಜ್ಯ ರಾಜಕೀಯದಲ್ಲಿ ಸ್ಯಾಂಟ್ರೋ ರವಿ ಪ್ರಕರಣ ಸಂಚಲನ ಮೂಡಿಸಿದೆ. ಹಾಗಾದ್ರೆ ಯಾರು ಈ ಸ್ಯಾಂಟ್ರೋ ರವಿ..? ಈತ ಮಾಡ್ತಿದ್ದದ್ದು ಏನು..? ಆತನ ಹಿನ್ನೆಲೆ ಏನು..? ಇಲ್ಲಿ ವಿವರ ಇದೆ.

ಸ್ಯಾಂಟ್ರೋ ರವಿ ಸದ್ಯ ಬೆಂಗಳೂರು ವಾಸಿ.. ಈ ಹಿಂದೆ ಮೈಸೂರಿನಲ್ಲಿದ್ದ. ಈತನ ಮೂಲ ಮಂಡ್ಯ. 52 ವರ್ಷದ ಈತನ ಮೂಲ ಹೆಸರು ಮಂಜುನಾಥ್‌. ಮೈಸೂರಿನಲ್ಲಿ ಇಟ್ಟಿಗೆಗೂಡು ಪ್ರದೇಶದಲ್ಲಿ ವಾಸವಿದ್ದ ಸ್ಯಾಂಟ್ರೋ ರವಿಗೆ ಮದುವೆಯೂ ಆಗಿದೆ. ಸದ್ಯ ಆತ ಬೆಂಗಳೂರಿನಲ್ಲಿ ಪತ್ನಿ ಜೊತೆ ವಾಸವಿದ್ದಾನೆ. ಅಂದಹಾಗೆ ಈತನ ತಂದೆ ಅಬಕಾರಿ ಇಲಾಖೆಯಲ್ಲಿ ಡಿವೈಎಸ್‌ಪಿ ಆಗಿದ್ದರು. ಸ್ಯಾಂಟ್ರೋ ರವಿ ಸರಿಯಾಗಿ ಓದುತ್ತಿರಲಿಲ್ಲ. ಪಿಯುಸಿ ಡ್ರಾಪ್‌ ಔಟ್‌ ಆಗಿದ್ದ ಆತ 1995ರಿಂದಲೂ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ.

ಮೈಸೂರು, ಬೆಂಗಳೂರು ಸೇರಿ ನಾನಾ ಕಡೆ ಈತನ ವಿರುದ್ಧ ಪ್ರಕರಣಗಳಿವೆ. ದ್ವಿಚಕ್ರ ವಾಹನ, ಕಾರು ಕಳ್ಳತನ ಮಾಡುತ್ತಿದ್ದ ಸ್ಯಾಂಟ್ರೋ ರವಿ ನಂತ್ರ ಅಪಹಣರಣ, ವೇಶ್ಯಾವಾಟಿಕೆ ದಂಧೆ ಕೂಡಾ ನಡೆಸ್ತಿದ್ದನಂತೆ. ಈ ಸಂಬಂಧ ಈತ ಹಲವು ಭಾರಿ ಜೈಲಿಗೆ ಹೋಗ್ಬಂದಿದಾನೆ. ಮೊದಲ ಬಾರಿ ಜೈಲಿಗೆ ಹೋಗೋ ತನಕ ಆತನ ಹೆಸ್ರು ಮಂಜುನಾಥ್‌ ಅಂತಾನೇ ಇತ್ತು. ಆದ್ರೆ ಜೈಲಿನಿಂದ ಹೊರಬಂದ ಮೇಲೆ ಆತ ರವಿ ಎಂದು ಹೆಸರಿಟ್ಟುಕೊಂಡಿದ್ದ. 2005ರಲ್ಲೇ ಸ್ಯಾಂಟ್ರೋ ರವಿ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸ್‌ ದಾಖಲಾಗಿತ್ತು.

ಈ ಯಾವಾಗಲೂ ತನ್ನ ಕೃತ್ಯಕ್ಕೆ ಸ್ಯಾಂಟ್ರೋ ಕಾರನ್ನೇ ಬಳಸುತ್ತಿದ್ದ. ಸ್ಯಾಂಟ್ರೋ ಕಾರಿನಲ್ಲೇ ಹುಡುಗಿಯರನ್ನು ಸಪ್ಲೈ ಮಾಡುತ್ತಿದ್ದ. ಈ ಕಾರಣದಿಂದಾಗಿಯೇ ಆತನನ್ನು ಸ್ಯಾಂಟ್ರೋ ಎಂದು ಕರೆಯಲಾಗುತ್ತಿತ್ತು. ರಷ್ಯಾ, ಇರಾನ್, ದೆಹಲಿ, ಮುಂಬೈ, ಕೊಲ್ಕಾತ್ತಾ ಮುಂತಾದ ಕಡೆಗಳಿಂದ ಆತ ಯುವತಿಯರನ್ನು ಕರೆತಂದು ದಂಧೆ ನಡೆಸುತ್ತಿದ್ದನಂತೆ. ಮೈಸೂರಿನಿಂದ ಸ್ಯಾಂಟ್ರೋ ರವಿಯನ್ನು ಗಡಿಪಾರು ಮಾಡಲಾಗಿತ್ತು. ಅಂದಿನಿಂದ ಆತ ಬೆಂಗಳೂರಲ್ಲಿ ವಾಸವಿದ್ದ.

ಜೈಲಿಂದ ಬಂದ ಮೇಲೂ ವೇಶ್ಯಾವಾಟಿಕೆ ದಂಧೆ ಮುಂದುವರೆಸಿದ್ದ ಸ್ಯಾಂಟ್ರೋ ರವಿ, ಹಿರಿಯ ಅಧಿಕಾರಿಗಳು, ರಾಜಕಾರಣಿಗಳಿಗೆ ಯುವತಿಯರನ್ನು ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ. ಈತನ ಕೃತ್ಯ ಬಯಲು‌ ಮಾಡಿದವರ ವಿರುದ್ಧ ಪ್ರಭಾವ ಬಳಸಿ ಕೇಸ್‌ ದಾಖಲಿಸುತ್ತಿದ್ದ ಎನ್ನಲಾಗಿದೆ. ತನ್ನ ಪತ್ನಿ ಮೂಲಕ ಜಾತಿ ನಿಂದನೆ, ಅತ್ಯಾಚಾರ ಯತ್ನ, ಮಾನಹಾನಿ‌ ಪ್ರಕರಣಗಳನ್ನೂ ಕೂಡಾ ದಾಖಲಿಸುತ್ತಿದ್ದನಂತೆ.‌

ಸ್ಯಾಂಟ್ರೋ ರವಿಗೆ ಬೆಂಗಳೂರಿನಲ್ಲಿ ಮೂರು ಮನೆಗಳಿವೆ. ವಿಲ್ಸನ್‌ ಗಾರ್ಡನ್‌, ಆರ್‌ಆರ್‌ ನಗರ ಹಾಗೂ ಮಲ್ಲೇಶ್ವರಂನಲ್ಲಿ ಮನೆಗಳಿವೆ. ಮೈಸೂರಿನಲ್ಲೂ ಐದು ಮನೆಗಳಿವೆ ಎಂದು ತಿಳಿದುಬಂದಿದೆ. ಸದ್ಯ ಮೈಸೂರಿನ ಯುವತಿಯೊಬ್ಬಳು ಪ್ರಕರಣ ದಾಖಲಿಸುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ. ಈತನಿಗಾಗಿ ಮೈಸೂರು ಪೊಲೀಸರು ವಿಶೇಷ ತಂಡ ರಚಿಸಿ ಬಲೆ ಬೀಸಿದ್ದಾರೆ.

ಈತನಿಗೆ ಸಿಎಂ ಸೇರಿ ಹಲವು ರಾಜಕಾರಣಿಗಳ ನಂಟಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಬಾಂಬೆಗೆ ಹೋಗಿದ್ದ ರಾಜಕಾರಣಿಗಳ ಜೊತೆ 12 ಹುಡುಗಿಯರನ್ನು ಈತ ಕಳುಹಿಸಿದ್ದ ಎಂದು ಹೆಚ್ಡಿಕೆ ಆರೋಪಿಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

 

Share Post