BengaluruPolitics

ಒಕ್ಕಲಿಗರ ನಾಯಕನೆನಿಸಿಕೊಂಡ ಡಿ.ಕೆ.ಶಿವಕುಮಾರ್‌; ಹಳೇ ಮೈಸೂರು ಭಾಗದಲ್ಲಿ ʻಕೈʼಬಲ

ಬೆಂಗಳೂರು; ಡಿ.ಕೆ.ಶಿವಕುಮಾರ್‌… ಕನಕಪುರದ ಬಂಡೆ ಎಂದೇ ಹೆಸರು… ಹೆಸರಿಗೆ ತಕ್ಕಂತೆ ಕಾಂಗ್ರೆಸ್‌ ಗೆಲ್ಲಿಸಲು ಬಂಡೆಯಂತೆ ನಿಂತು ಕಾಂಗ್ರೆಸ್‌ ದಡ ಸೇರಿಸಿದ್ದಾರೆ… ಇದರ ಜೊತೆಗೆ ಡಿ.ಕೆ.ಶಿವಕುಮಾರ್‌ ಈಗ ಒಕ್ಕಲಿಗರ ಪ್ರಬಲ ನಾಯಕ ಅನ್ನೋದನ್ನು ಸಾಬೀತು ಮಾಡಿಕೊಂಡಿದ್ದಾರೆ.. ಒಕ್ಕಲಿಗರು ಇಷ್ಟು ದಿನ ದೇವೇಗೌಡ ಕುಟುಂಬದ ಪರವಾಗಿ ನಿಲ್ಲುತ್ತಿದ್ದರು. ಆದ್ರೆ ಈ ಬಾರಿ ಒಕ್ಕಲಿಗರು ಕಾಂಗ್ರೆಸ್‌ ಕೈ ಹಿಡಿದಿದ್ದಾರೆ. 

ಮಂಡ್ಯ, ಮೈಸೂರು, ರಾಮನಗರ, ಹಾಸನ ಭಾಗದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನಗಳು ಸಿಕ್ಕಿವೆ. ಡಿ.ಕೆ.ಶಿವಕುಮಾರ್‌ ಮಾಡಿಕೊಂಡ ಮನವಿಗೆ ಒಕ್ಕಲಿಗರು ಜೈ ಎಂದಿದ್ದಾರೆ. ಹಲವು ದಶಕಗಳಿಂದ ಒಕ್ಕಲಿಗರು ದೇವೇಗೌಡರ ಕುಟುಂಬ ಬಿಟ್ಟು ಬೇರೆಯವರಿಗೆ ಮತ ಹಾಕುತ್ತಿರಲಿಲ್ಲ. ಒಕ್ಕಲಿಗರ ನಾಯಯ ಎಂದರೆ ದೇವೇಗೌಡ ಹಾಗೂ ಕುಮಾರಸ್ವಾಮಿ ಎಂದು ಹೇಳಲಾಗುತ್ತಿತ್ತು. ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಹಲವು ಒಕ್ಕಲಿಗ ನಾಯಕರಿದ್ದರೂ, ಬಬಹುಪಾಲು ಒಕ್ಕಲಿಗರು ಜೆಡಿಎಸ್‌ಗೆ ಮತ ಹಾಕುತ್ತಿದ್ದರು. ಆದ್ರೆ ಈ ಬಾರಿ ಬಹುಪಾಲು ಒಕ್ಕಲಿಗರು ಕಾಂಗ್ರೆಸ್‌ ಪರ ನಿಂತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಗಳಿಸಿಕೊಟ್ಟಿದ್ದಾರೆ. ಇದಕ್ಕೆ ಕಾರಣ ಡಿ.ಕೆ.ಶಿವಕುಮಾರ್‌ ಅವರು.

ಡಿ.ಕೆ.ಶಿವಕುಮಾರ್‌ ಅವರು ಕನಕಪುರದಲ್ಲಿ ಕೊನೆಯ ಒಂದು ದಿನ ಬಿಟ್ಟು ಪ್ರಚಾರಕ್ಕೆ ಬಂದೇ ಇರಲಿಲ್ಲ. ಆದರೂ ಡಿ.ಕೆ.ಶಿವಕುಮಾರ್‌ ಅವರನ್ನು ಬರೋಬ್ಬರಿ 1 ಲಕ್ಷದ 24 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಇಲ್ಲಿ ಬಿಜೆಪಿ ಒಕ್ಕಲಿಗ ನಾಯಕರೇನ ಆಗಿದ್ದ ಆರ್‌.ಅಶೋಕ್‌ ಅವರನ್ನು ಕಣಕ್ಕಿಳಿಸಿತ್ತು. ಆದ್ರೆ ಇಲ್ಲಿನ ಒಕ್ಕಲಿಗರು ಆರ್‌.ಆಶೋಕ್‌ ಅವರನ್ನು ಒಪ್ಪಲೇ ಇಲ್ಲ. ಡಿ.ಕೆ.ಶಿವಕುಮಾರ್‌ ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸಿಕೊಟ್ಟಿದ್ದಾರೆ. ಈ ಮೂಲಕ ಡಿ.ಕೆ.ಶಿವಕುಮಾರ್‌ ಸಿಎಂ ಆಗುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ.

ಹಳೇ ಮೈಸೂರು ಭಾಗದ ಒಕ್ಕಲಿಗರು, ದೇವೇಗೌಡರನ್ನು, ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದಾರೆ. ನನಗೂ ಒಂದು ಅವಕಾಶ ಕೊಡಿ ಎಂದು ಡಿ.ಕೆ.ಶಿವಕುಮಾರ್‌ ಮನವಿ ಮಾಡುತ್ತಾ ಬಂದಿದ್ದರು. ಕೊನೆಯ ದಿನದ ಪ್ರಚಾರದಲ್ಲೂ ಕೂಡಾ ಡಿ.ಕೆ.ಶಿವಕುಮಾರ್‌ ಇದನ್ನೇ ಹೇಳಿದ್ದರು. ಈಗಾಗಲೇ ಅವರನ್ನೆಲ್ಲಾ ಸಿಎಂ ಮಾಡಿದ್ದೀರಿ. ಈಗ ನನಗೆ ಅವಕಾಶ ಕೊಡಿ ಎಂದು ಕೇಳಿದ್ದರು. ಒಕ್ಕಲಿಗರ ಸಂಘದ ಸಭೆಯೊಂದರಲ್ಲೂ ಈ ಹಿಂದೆ ಇದೇ ರೀತಿಯ ಬೇಡಿಕೆ ಇಟ್ಟಿದ್ದರು. ಅದನ್ನು ಒಕ್ಕಲಿಗರು ಬಹುತೇಕವಾಗಿ ಸ್ವೀಕಾರ ಮಾಡಿದ್ದಾರೆ. ಈ ಬಾರಿ ಡಿ.ಕೆ.ಶಿವಕುಮಾರ್‌ ಅವರನ್ನು ಬೆಂಬಲಿಸೋಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರು ಜೆಡಿಎಸ್‌ಗೆ ಬದಲಾಗಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಜೆಡಿಎಸ್‌ 37 ಸ್ಥಾನಗಳಲ್ಲಿ ಗೆದ್ದಿತ್ತು. ಅದ್ರಲ್ಲೂ ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳೂ ಸ್ಥಾನಗಳಲ್ಲಿ ಗೆದ್ದಿತ್ತು. ಆದ್ರೆ ಈ ಬಾರಿ ಫಲಿತಾಂಶ ಉಲ್ಟಾ ಆಗಿದೆ. ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದು ಬಂದಿದ್ದಾರೆ. ಇದು ನಿಜವಾಗಿಯೂ ಹೇಳಬೇಕಂದ್ರೆ ಡಿ.ಕೆ.ಶಿವಕುಮಾರ್‌ ಗೆಲುವು. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬಂದಿದೆ ಅಂದ್ರೆ ಅದಕ್ಕೆ ಮುಖ್ಯವಾದ ಕಾರಣ ಹಳೇ ಮೈಸೂರು ಭಾಗದ ಒಕ್ಕಲಿಗರು ಜೆಡಿಎಸ್‌ಗೆ ಬದಲಾಗಿ ಕಾಂಗ್ರೆಸ್‌ಗೆ ಮತ ಹಾಕಿರುವುದು.

ಜೆಡಿಎಸ್‌ಗೆ ಸಂಪ್ರದಾಯಿಕ ಮತಗಳಿದ್ದವು. ದೇವೇಗೌಡರು ಯಾರನ್ನೇ ನಿಲ್ಲಿಸಿದರೂ ಅವರನ್ನು ಜನ ಗೆಲ್ಲಿಸುತ್ತಿದ್ದರು. ಈ ಬಾರಿಯೂ ಜೆಡಿಎಸ್‌ಗೆ ಒಕ್ಕಲಿಗರು ಮಣೆ ಹಾಕಿದ್ದಿದ್ದರೆ ಕಾಂಗ್ರೆಸ್‌ ಬಹುಮತ ಪಡೆಯೋದು ಕಷ್ಟವಾಗ್ತಿತ್ತು. ಆದ್ರೆ ಒಕ್ಕಲಿಗರು ಡಿ.ಕೆ.ಶಿವಕುಮಾರ್‌ ಅವರ ಕಾರಣಕ್ಕಾಗಿ ಕಾಂಗ್ರೆಸ್‌ಗೆ ಮತ  ಹಾಕಿದ್ದಾರೆ. ಜೆಡಿಎಸ್‌ ಪ್ರಾಬಲ್ಯವಿದ್ದ ಇಪ್ಪತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿದೆ.

Share Post