BengaluruPoliticsUncategorized

ಸೋತುಸುಣ್ಣವಾದ ಬೊಮ್ಮಾಯಿ ಸಂಪುಟದ ಸಚಿವರು

ಬೆಂಗಳೂರು; ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತು ಮಕಾಡೆ ಮಲಗಿದೆ. ಕಾಂಗ್ರೆಸ್‌ ಮುಂದೆ ಹೀನಾಯವಾಗಿ ಸೋತಿದೆ. ಸಿಎಂ ಬಸವರಾಜ ಬೊಮ್ಮಾಯಿಯವರು ತಮ್ಮ ತವರು ಜಿಲ್ಲೆಯಲ್ಲೇ ಬಹುತೇಕ ಕ್ಷೇತ್ರಗಳನ್ನು ಕಳೆದುಕೊಂಡಿದ್ದಾರೆ. ಅಷ್ಟೇ ಏಕೆ, ಬೊಮ್ಮಾಯಿ ಸಂಪುಟದ ಹಲವು ಸಚಿವರು ಕೂಡಾ ಸೋಲನ್ನಪ್ಪಿದ್ದಾರೆ. ಹಲವು ಪ್ರಬಲ ಸಚಿವರೇ ಹೀನಾಯವಾಗಿ ಸೋತಿದ್ದಾರೆ. ತಮ್ಮ ಕ್ಷೇತ್ರಗಳಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ಮಾಡಿದವರನ್ನು ಕೂಡಾ ಜನ ಸೋಲಿಸಿದ್ದಾರೆ. ಈ  ಮೂಲಕ ಕರ್ನಾಟಕದ ಜನ ಬಿಜೆಪಿ ಸರ್ಕಾರವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.

   ಡಾ.ಕೆ.ಸುಧಾಕರ್‌;

ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಾ.ಕೆ.ಸುಧಾಕರ್‌ ಅವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಮಲ ಅರಳಿಸಲು ಹೋಗಿದ್ದರು. ಬೊಮ್ಮಾಯಿ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ಡಾ.ಕೆ.ಸುಧಾಕರ್‌ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದರು. ಜೊತೆಗೆ ಸಿಎಂ ಆಗುವ ಕನಸನ್ನೂ ಕಾಣುತ್ತಿದ್ದರು. ಆದ್ರೆ ಡಾ.ಕೆ.ಸುಧಾಕರ್‌ಗೆ ಚಿಕ್ಕಬಳ್ಳಾಪುರದ ಜನ ಸೋಲಿನ ರುಚಿಯನ್ನು ತೋರಿಸಿದ್ದಾರೆ.

ಬಿ.ಶ್ರೀರಾಮುಲು;

ಎಸ್‌.ಸಿ., ಎಸ್‌ಟಿ ಮೀಸಲಾತಿ ಹೆಚ್ಚಿಸುವಲ್ಲಿ ಶ್ರೀರಾಮುಲು ಪ್ರಮುಖ ಪಾತ್ರವನ್ನು ವಹಿಸಿದ್ದರು. ಬಳ್ಳಾರಿಯಲ್ಲಿ ಅತ್ಯಂತ ಪ್ರಭಾವ ಹೊಂದಿದ್ದ ಸಚಿವರು. ಆದ್ರೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಅವರು 20 ಸಾವಿರಕ್ಕೂ ಅಧಿಕ ಮತಗಳಿಂದ ಸೋತಿದ್ದಾರೆ. ಇಲ್ಲಿ ಕಾಂಗ್ರೆಸ್‌ನ ನಾಗೇಂದ್ರ ಗೆದ್ದಿದ್ದಾರೆ. ಈ ಮೂಲಕ ಶ್ರೀರಾಮುಲು ತೀವ್ರ ಮುಖಭಂಗವಾಗಿದೆ.

ನಾರಾಯಣಗೌಡ;

ಇನ್ನು ಕೆ.ಆರ್‌.ಪೇಟೆಯಲ್ಲಿ ಸಚಿವ ನಾರಾಯಣಗೌಡಗೆ ಚುನಾವಣೆಗೆ ಮೊದಲೇ ಸೋಲಿನ ಭೀತಿ ಇತ್ತು. ಹೀಗಾಗಿ ಅವರು ಕಾಂಗ್ರೆಸ್‌ ಸೇರೋದಕ್ಕೆ ಪ್ರಯತ್ನ ಮಾಡಿದ್ದರು. ಆದ್ರೆ ಕೊನೆಯ ಕ್ಷಣದಲ್ಲಿ ಬಿಜೆಪಿಯಲ್ಲಿ ಉಳಿಯಬೇಕಾಗಿ ಬಂತು. ಕೆ.ಆರ್‌.ಪೇಟೆಯಲ್ಲಿ ನಾರಾಯಣಗೌಡರಿಗೆ ಸಾಕಷ್ಟು ವಿರೋಧವಿತ್ತು. ಅದರಂತೆ ಫಲಿತಾಂಶವೂ ಬಂದಿದ್ದು, ನಾರಾಯಣಗೌಡ ಸೋತಿದ್ದಾರೆ.

ಗೋವಿಂದ ಕಾರಜೋಳ;

ಮುಧೋಳದ ಶಾಸಕರಾಗಿದ್ದ, ಬೊಮ್ಮಾಯಿ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ಗೋವಿಂದ ಕಾರಜೋಳ ಕೂಡಾ ಸೋಲನ್ನಪ್ಪಿದ್ದಾರೆ. ಅವರ ಸರಳ ಸಜ್ಜನಿಕೆಯೂ ಇಲ್ಲಿ ಕೆಲಸ ಮಾಡಿಲ್ಲ. ನೀವಿನ್ನು ಮನೆಯಲ್ಲಿರಿ ಎಂದು ಮುಧೋಳ್‌ ಜನ ಹೇಳಿದ್ದಾರೆ.

ವಿ.ಸೋಮಣ್ಣ;

ವಿ.ಸೋಮಣ್ಣ ಅವರು ಬಿಜೆಪಿ ಹೈಕಮಾಂಡ್‌ ಅಭ್ಯರ್ಥಿ. ಹೈಕಮಾಂಡ್‌ ಆಸಕ್ತಿ ವಹಿಸಿ ಸೋಮಣ್ಣ ಅವರನ್ನು ಚಾಮರಾಜನಗರ ಹಾಗೂ ವರುಣಾದಲ್ಲಿ ನಿಲ್ಲಿಸಿತ್ತು. ಆದ್ರೆ ಸಚಿವರಾಗಿದ್ದ ಸೋಮಣ್ಣ ಅವರು ಎರಡೂ ಕಡೆ ಹೀನಾಯವಾಗಿ ಸೋತಿದ್ದಾರೆ. ಇದರಿಂದಾಗಿ ಅವರ ರಾಜಕೀಯ ಜೀವನ ಮಸುಕಾದಂತೆ ಆಗಿದೆ.

ಮುರುಗೇಶ್‌ ನಿರಾಣಿ;

ಬೀಳಗಿ ಕ್ಷೇತ್ರದಲ್ಲಿ ಮುರುಗೇಶ್‌ ನಿರಾಣಿಗೆ ದೊಡ್ಡ ಹೆಸರು. ಸಿಎಂ ರೇಸ್‌ನಲ್ಲಿದ್ದ ಮುರುಗೇಶ್‌ ನಿರಾಣಿ ಹಣಕಾಸಿನ ವಿಚಾರ ಸಾಕಷ್ಟು ಪ್ರಬಲರಾಗಿದ್ದರು. ಆದ್ರೆ ಮುರುಗೇಶ್‌ರನ್ನು ನಿರಾಣಿಯವರನ್ನೂ ಜನ ಸೋಲಿಸಿದ್ದಾರೆ.

ಜೆ.ಸಿ.ಮಾಧುಸ್ವಾಮಿ;

ಬೊಮ್ಮಾಯಿ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿ ಚಿಕ್ಕನಾಯಕನಹಳ್ಳಿಯಲ್ಲಿ ಹೀನಾಯವಾಗಿ ಸೋತಿದ್ದಾರೆ. ಅವರು ಸಚಿವರಾಗಿದ್ದಾಗ ವಿವಾದಿತ ಹೇಳಿಕೆಗಳನ್ನು ನೀಡಿ ಹಾಗೂ ಸಾರ್ವಜನಿಕರೊಂದಿಗೆ ದುರ್ವರ್ತನೆ ತೋರಿ ಆಕ್ರೋಶಕ್ಕೆ ಗುರಿಯಾಗುತ್ತಿದ್ದರು. ಆದ್ರೆ ಸದನದಲ್ಲಿ ಸಮರ್ಥವಾಗಿ ಉತ್ತರ ಕೊಡುತ್ತಿದ್ದ ಸಚಿವರು. ಚಿಕ್ಕನಾಯಕನಹಳ್ಳಿ ಮಾಧುಸ್ವಾಮಿಗೆ ಈ ಬಾರಿ ಸೊಪ್ಪು ಹಾಕಿಲ್ಲ. ಅವರನ್ನು ಹೀನಾಯವಾಗಿ ಸೋಲಿಸಿದ್ದಾರೆ.

ಆರ್‌.ಅಶೋಕ್‌;

ಆರ್‌.ಅಶೋಕ್‌ ಕೂಡಾ ಸಿಎಂ ರೇಸ್‌ನಲ್ಲಿದ್ದವರು. ಹೈಕಮಾಂಡ್‌ ಸೂಚನೆ ಹಿನ್ನೆಲೆಯಲ್ಲಿ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಕನಕಪುರದಲ್ಲಿ ಡಿ.ಕೆ.ಶಿವಕುಮಾರ್‌ ವಿರುದ್ಧ ಸ್ಪರ್ಧೆ ಮಾಡಿದ್ದರು. ಆದ್ರೆ ಅಲ್ಲಿ ಹೀನಾಯವಾಗಿ ಸೋತಿದ್ದಾರೆ. ಡಿ.ಕೆ.ಶಿವಕುಮಾರ್‌ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದೊಂದಿಗೆ ಗೆದ್ದಿದ್ದಾರೆ.

ಬಿ.ಸಿ.ಪಾಟೀಲ್‌;

ಬಿ.ಸಿ.ಪಾಟೀಲ್‌ ಅವರು ಕೂಡಾ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿದ್ದವರು. ಸತತವಾಗಿ ಗೆಲ್ಲುತ್ತಾ ಬಂದವರು. ಆದ್ರೆ ಈ ಬಾರಿ ಹಿರೇಕೇರೂರಿನಲ್ಲಿ ಬಿ.ಸಿ.ಪಾಟೀಲರನ್ನು ಸೋಲಿಸಲಾಗಿದೆ.

ಎಂಟಿಬಿ ನಾಗರಾಜ್‌;

ಎಂಟಿಬಿ ನಾಗರಾಜ್‌ ಅತ್ಯಂತ ಶ್ರೀಮಂತ ಸಚಿವರು. ಹೊಸಕೋಟೆಯಲ್ಲಿ ಉಪಚುನಾವಣೆಯಲ್ಲಿ ಶರತ್‌ ಬಚ್ಚೇಗೌಡರ ವಿರುದ್ಧ ಸೋತಿದ್ದರು. ಪರಿಷತ್‌ ಸದಸ್ಯರಾಗಿ ಮಂತ್ರಿ ಪದವಿ ಗಿಟ್ಟಿಸಿಕೊಂಡಿದ್ದ ಎಂಟಿಬಿ ನಾಗರಾಜ್‌ ಈ ಬಾರಿ ತಮ್ಮ ಮಗನಿಗೆ ಟಿಕೆಟ್‌ ಕೇಳಿದ್ದರು. ಆದ್ರೆ ಬಿಜೆಪಿ ಹೈಕಮಾಂಡ್‌ ಎಂಟಿಬಿ ಅವರಿಗೇ ಟಿಕೆಟ್‌ ನೀಡಿತ್ತು. ಆದ್ರೆ ಎಂಟಿಬಿ ಈ ಬಾರಿಯೂ ಸೋತಿದ್ದಾರೆ.

ಹಾಲಪ್ಪ ಆಚಾರ್

ಯಲಬುರ್ಗದಲ್ಲಿ ಹಾಲಪ್ಪ ಆಚಾರ್‌ ಕೂಡಾ ಸೋತಿದ್ದಾರೆ.

Share Post