ನನಗೆ ಸಿಎಂ ಆಯ್ಕೆ ಮಾಡೋದೂ ಗೊತ್ತು, ಕೆಳಗಿಳಿಸೋದೂ ಗೊತ್ತು; ಬಿ.ಕೆ.ಹರಿಪ್ರಸಾದ್
ಬೆಂಗಳೂರು; ಸಿದ್ದರಾಮಯ್ಯ ಅವರು ನನಗೆ ರಾಜಕೀಯವಾಗಿ ಯಾವುದೇ ಸಹಾಯ ಮಾಡುವುದಕ್ಕೆ ಆಗುವುದಿಲ್ಲ. ಮಾಡಿದರೆ ನನ್ನಿಂದಲೇ ಅವರು ಸಹಾಯ ಪಡೆಯಬೇಕು ಅಷ್ಟೇ ಎಂದು ಹೇಳುವ ಮೂಲಕ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಸಿದ್ದರಾಮಯ್ಯ ಅವರೊಂದಿಗೆ ಇರುವ ಮನಸ್ತಾಪವನ್ನು ಹೊರಹಾಕಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಈಡಿಗ, ಬಿಲ್ಲವ, ದೀವರ ಮುಖಂಡರ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ನನಗೆ ಸಿಎಂ ಆಯ್ಕೆ ಮಾಡೋದೂ ಗೊತ್ತು, ಕೆಳಗಿಳಿಸೋದೂ ಗೊತ್ತು ಎಂದಿದ್ದಾರೆ.
ಐವರು ಮುಖ್ಯಮಂತ್ರಿಗಳ ಆಯ್ಕೆಯಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೇವೆ. ಹೀಗಾಗಿ, ರಾಜಕೀಯವಾಗಿ ನನಗೆ ಇವರ ಬೆಂಬಲ ಅಗತ್ಯ ಬರೋದಿಲ್ಲ. ನಾನು ಯಾರ ಬಳಿಯೂ ಭಿಕ್ಷೆ ಬೇಡೋದಿಲ್ಲ. ಎಲ್ಲದಕ್ಕೂ ಎದೆಕೊಟ್ಟು ನಿಲ್ಲುತ್ತೇನೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ರಾಜ್ಯದಲ್ಲಿ ಸುಮಾರು ಹನ್ನೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಈಡಿಗ, ಬಿಲ್ಲವ, ದೀವರು ಪ್ರಮುಖ ಪಾತ್ರ ವಹಿಸುತ್ತಾರೆ. ಆದ್ರೆ ಎರಡು ಬಿಲ್ಲವ, ಒಂದು ಈಡಿಗ ಹಾಗೂ ಒಬ್ಬರು ದೀವರು ಟಿಕೆಟ್ ವಂಚಿತರಾದರು. ರಾಜ್ಯದಲ್ಲಿ ರಾಜಕೀಯವಾಗಿ ನಮ್ಮ ಸಮುದಾಯ ಮುಂದೆ ಬರುತ್ತಿಲ್ಲ ಎಂದು ಹರಿಪ್ರಸಾದ್ ಅಸಮಾಧಾನ ಹೊರಹಾಕಿದರು.
ಕಾರ್ಕಳದಲ್ಲಿ ಕೋಟಿ ಚನ್ನಯ್ಯ ಪಾರ್ಕ್ ಗೆ 5 ಕೋಟಿ ರೂಪಾಯಿ ಅನುದಾಣ ಕೊಡಿ ಎಂದು ನಾವು ಕೇಳಿದ್ದೆವು. ಸಿದ್ದರಾಮಯ್ಯ ಅವರು ಕೊಡುತ್ತೇವೆ ಎಂದು ಕೊಟ್ಟಿಲ್ಲ ಎಂದೂ ಅಸಮಾಧಾನ ತೋಡಿಕೊಂಡಿದ್ದಾರೆ.