ಮತದಾರರ ಮಾಹಿತಿ ಕಳವು ಪ್ರಕರಣ; ಬಿಜೆಪಿ ವಿರುದ್ಧ ಡಿಕೆಶಿ ಸಿಡಿಮಿಡಿ
ಬೆಂಗಳೂರು; ಮತದಾರರ ಮಾಹಿತಿ ಕಳವು, ಮಾರಾಟ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದಿರುವ ಬಗ್ಗೆ ತನಿಖೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಆಯೋಗ ತನಿಖೆಗೆಂದು ಉಪ ಆಯುಕ್ತರನ್ನು ನೇಮಕ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವರ್ತೂರಿನ ರೆಸಾರ್ಟ್‌ನಲ್ಲಿ ನಡೆದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಅವರು ಮಾತನಾಡಿದರು. ತಮ್ಮನ್ನು ತಾವೇ ಗಂಡಸು ಎಂದು ಗಂಡಸ್ಥನದ ಬಗ್ಗೆ ಮಾತನಾಡುತ್ತಿದ್ದವರು ಹಾಗೂ ಚಿಲುಮೆ ಸಂಸ್ಥೆಯ ಪ್ರಮುಖ ಕಿಂಗ್ ಪಿನ್ ಗಳು ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ಹಲವು ವ್ಯಕ್ತಿಗಳ ಖಾತೆಗೆ ಹಣ ಹಾಕಿಸಿ, ಅವುಗಳನ್ನು ನಗದೀಕರಿಸಿಕೊಂಡಿದ್ದಾರೆ. ಇವರೆಲ್ಲರೂ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಈ ಹಣವನ್ನು ಯಾರು ಯಾವ ಕಾರಣಕ್ಕೆ ಯಾರಿಗೆ ವರ್ಗಾವಣೆ ಮಾಡಿದ್ದಾರೆ ಎಂಬ ಅಂಶ ಬೆಳಕಿಗೆ ಬರಬೇಕು ಎಂದು ಆಗ್ರಹಿಸಿದರು.
ಪ್ರತಿ ಬೂತ್ ಗಳಲ್ಲಿ ಮತಗಳನ್ನು ಉಳಿಸಿಕೊಳ್ಳಲು ಜಾಗೃತಿ ಮೂಡಿಸಲು ಮಾರ್ಗದರ್ಶನ ನೀಡಲಾಗುವುದು. ಈ ಸರ್ಕಾರ ಅಲ್ಪಸಂಖ್ಯಾತರು, ಪರಿಶಿಷ್ಟರ ಮತಗಳನ್ನು ಕಿತ್ತುಹಾಕುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಅರ್ಜಿ ಹಾಕಿರುವ ಎಲ್ಲರೂ ಹಳ್ಳಿಗಳಿಗೆ ಹೋಗಿ ಪಕ್ಷ ಸಂಘಟನೆ ಮಾಡಬೇಕು. ಕ್ಷೇತ್ರ ಮಟ್ಟದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಹೋರಾಟ ಮಾಡಬೇಕು ಎಂದು ಮಾರ್ಗದರ್ಶನ ನೀಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.