Loksabha Election 2024; ತುಮಕೂರಿನಿಂದ ವಿ.ಸೋಮಣ್ಣ ಸ್ಪರ್ಧೆ ಪಕ್ಕಾನಾ..?; ಸೈಲೆಂಟಾಗಿ ಸಂಘಟನೆ ಆರಂಭಿಸಿದ ಮಾಜಿ ಸಚಿವ!
ತುಮಕೂರು; ಬಿಜೆಪಿಯಲ್ಲಿ ಸರಿಯಾಗಿ ನಡೆಸಿಕೊಳ್ಳದಿದ್ದಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಪಕ್ಷಾಂತರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಇತ್ತೀಚೆಗಷ್ಟೇ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಕಾರ್ಯಕ್ರಮ ನಡೆಸಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದರು. ಅವರು ಕಾಂಗ್ರೆಸ್ ಪಕ್ಷ ಸೇರಿ ತುಮಕೂರಿನಿಂದ ಸ್ಪರ್ಧೆ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಆದ್ರೆ, ಕೆಲ ದಿನಗಳ ಹಿಂದೆ ಅಮಿತ್ ಶಾ ಅವರು ಸೋಮಣ್ಣ ಅವರನ್ನು ಕರೆಸಿಕೊಂಡು ಮಾತನಾಡಿದ ಮೇಲೆ ಪರಿಸ್ಥಿತಿ ಬದಲಾಗಿದೆ. ವಿ.ಸೋಮಣ್ಣ ಅವರು ಬಿಜೆಪಿಯಲ್ಲೇ ಇರೋದಕ್ಕೆ ತೀರ್ಮಾನಿಸಿದ್ದಾರೆ. ಅಷ್ಟೇ ಅಲ್ಲ, ತುಮಕೂರಿನಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯೋದಕ್ಕೆ ತೆರೆಮರೆಯಲ್ಲಿ ಈಗಾಗಲೇ ಪಕ್ಷ ಸಂಘಟನೆ ಶುರು ಮಾಡಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಏನು ಭರವಸೆ ಕೊಟ್ಟರೋ ಏನೋ. ಆದ್ರೆ ಆವತ್ತಿನಿಂದ ವಿ.ಸೋಮಣ್ಣ ಅವರು ಫುಲ್ ಆಕ್ಟೀವ್ ಆಗಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಜವಾಬ್ದಾರಿ ನನ್ನದು ಎಂದು ಅವರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇದರ ಜೊತೆಗೆ ಸೈಲೆಂಟಾಗಿ ತುಮಕೂರು ಕ್ಷೇತ್ರದಲ್ಲೂ ಸುತ್ತಾಟ ನಡೆಸಿದ್ದಾರೆ. ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ ನಾನು ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಹೇಳುತ್ತಲೇ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಆಕ್ಟೀವ್ ಆಗುತ್ತಿದ್ದಾರೆ.
ಇತ್ತೀಚೆಗಷ್ಟೇ ವಿ.ಸೋಮಣ್ಣ ಅವರು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಕೂಡಾ ಭೇಟಿಯಾಗಿದ್ದರು. ಈ ವೇಳೆ ನಾನು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ನಿಮ್ಮ ಬೆಂಬಲ ಅಗತ್ಯ ಎಂದು ಕೇಳಿದ್ದಾರಂತೆ. ಅದಕ್ಕೆ ದೊಡ್ಡಗೌಡರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಸೋಮಣ್ಣ ಅವರು ಮತ್ತಷ್ಟು ಹುಮ್ಮಸ್ಸಿನಿಂದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾರೆ.
ಬಿಜೆಪಿಯಿಂದ ತುಮಕೂರಿನಲ್ಲಿ ಮುದ್ದಹನುಮೇಗೌಡ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಅವರು ಕಾಂಗ್ರೆಸ್ ಸೇರೋದು ಪಕ್ಕಾ ಆಗಿದೆ. ಆದ್ದರಿಂದ ಸೋಮಣ್ಣಗೆ ಇಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳೋದು ಸುಲಭವಾಗಿದೆ. ಹೆಬ್ಬಾಕ ರವಿ ಹಾಗೂ ಮತ್ತೊಬ್ಬರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದರೂ, ಸೋಮಣ್ಣ ಪ್ರಬಲ ಅಭ್ಯರ್ಥಿ ಎಂದೇ ಹೇಳಲಾಗುತ್ತಿದೆ.
ಈಗಾಗಲೇ ಮಾಜಿ ಸಚಿವ ವಿ.ಸೋಮಣ್ಣ ಅವರು ಟಿಕೆಟ್ ಸಿಕ್ಕೇಬಿಟ್ಟಿದೆ ಎಂಬ ಹುಮ್ಮಸ್ಸಿನಲ್ಲಿಯೇ ಓಡಾಡುತ್ತಿದ್ದಾರೆ. ಸೈಲೆಂಟಾಗಿ ವಿವಿಧ ಸಮುದಾಯಗಳ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ. ಜೊತೆಗೆ ಟೆಂಪಲ್ ರನ್ ಕೂಡಾ ಶುರು ಮಾಡಿದ್ದಾರೆ.
ತಿಪಟೂರಿನ ನೊಣವಿನಕೆರೆ ಮಠ ಹಾಗೂ ಗುಬ್ಬಿ ಚೆನ್ನಕೇಶವ ದೇಗುಲಕ್ಕೆ ಸೋಮಣ್ಣ ಅವರು ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯ ಬಿಜೆಪಿ ಮುಖಂಡರು ಅವರ ಜೊತೆಗಿದ್ದರು. ನೊಣವಿನಕೆರೆ ಮಠದ ಶ್ರೀಗಳನ್ನು ಭೇಟಿ ಮಾಡಿರುವ ವಿ.ಸೋಮಣ್ಣ ಆಶೀರ್ವಾದ ಪಡೆದುಕೊಂಡಿದ್ದಾರೆ.